ಸೋಮವಾರಪೇಟೆ, ಡಿ.೨೭: ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಕಾಡಾನೆ ಲಗ್ಗೆಯಿಟ್ಟಿದ್ದು, ಇದರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಆಯತಪ್ಪಿ ಕೆಳ ಬಿದ್ದು ಇಬ್ಬರು ಅಸ್ಸಾಂ ಮೂಲದ ಕಾರ್ಮಿಕರು ಹಾಗೂ ಮಗು ಗಾಯಗೊಂಡಿರುವ ಘಟನೆ ಕೂಗೂರು ಗ್ರಾಮದಲ್ಲಿ ನಡೆದಿದೆ.

ಕೂಗೂರು ಗ್ರಾಮದ ಕೃಷಿಕ ಮೋಹನ್ ಎಂಬವರ ಕಾಫಿ ತೋಟದಲ್ಲಿ ಕಾಫಿ ಹಣ್ಣು ಕೊಯ್ಲು ಮಾಡುತ್ತಿದ್ದ ಸಂದರ್ಭ ಹಠಾತ್ತನೆ ಕಾಡಾನೆ ಅಟ್ಟಿಸಿಕೊಂಡು ಬಂದಿದೆ. ಕಾಡಾನೆ ಧಾಳಿಯಿಂದ ತಪ್ಪಿಸಿಕೊಂಡು ಓಡುವ ಸಂದರ್ಭದಲ್ಲಿ ಸುಕೂರ್ ಮತ್ತು ಒಮೇಜ್ ಬಿದ್ದು ಗಾಯಗೊಂಡಿದ್ದಾರೆ. ಮಗುವನ್ನು ಎತ್ತಿಕೊಂಡು ಓಡುತ್ತಿದ್ದ ತಾಯಿ ಬಿದ್ದಾಗ ಮಗು ರುಕ್ಮಿಯಾಳ ಬಲಗೈ ಮೂಳೆ ಮುರಿದಿದೆ. ಕಾರ್ಮಿಕರು ಬೊಬ್ಬೆ ಹೊಡೆದಾಗ ಕಾಡಾನೆ ಅರಣ್ಯಕ್ಕೆ ತೆರಳಿದೆ.

ಸ್ಥಳಕ್ಕೆ ಶನಿವಾರಸಂತೆ ಆರ್.ಎಫ್.ಓ. ಪ್ರಫುಲ್ ಕುಮಾರ್‌ಶೆಟ್ಟಿ ಮತ್ತು ಠಾಣಾಧಿಕಾರಿ ದೇವರಾಜ್ ತೆರಳಿ ಪರಿಶೀಲನೆ ನಡೆಸಿದ್ದಾರೆ. ಅರಣ್ಯ ಇಲಾಖೆಯ ವತಿಯಿಂದ ಗಾಯಾಳುಗಳಿಗೆ ಹಾಸನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.

ಕಾಡಾನೆ ಹಾವಳಿಯಿಂದ ಫಸಲು ಹಾನಿಯಾಗುತ್ತಿದೆ. ಭತ್ತ ಪೈರನ್ನು ತುಳಿದು ನಾಶ ಮಾಡುತ್ತಿವೆ. ಕಾಡಾನೆ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ಕಂಡುಹಿಡಿಯುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ ಎಂದು ಕೂಗೂರು ಗ್ರಾಮದ ಕೃಷಿಕ ಸುಮಂತ್ ಆರೋಪಿಸಿದ್ದು, ಅರಣ್ಯ ಇಲಾಖಾ ಸಿಬ್ಬಂದಿಗಳ ಕಾರ್ಯವೈಖರಿಯ ಬಗ್ಗೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.