ಮಡಿಕೇರಿ, ಡಿ. ೨೬: ನಗರದಲ್ಲಿ ನಿರ್ಮಾಣ ಹಂತದಲ್ಲಿದ್ದ ಹಾಪ್‌ಕಾಮ್ಸ್ ಕಟ್ಟಡ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಒಳವಿನ್ಯಾಸ ಕೆಲಸಗಳು ಮಾತ್ರ ಬಾಕಿ ಇದೆ. ಜನವರಿ ಎರಡನೇ ಅಥವಾ ಮೂರನೇ ವಾರದಲ್ಲಿ ಜನರ ಸೇವೆಗೆ ಹಾಪ್‌ಕಾಮ್ಸ್ ಲಭ್ಯವಾಗಲಿದೆ. ತೋಟಗಾರಿಕಾ ಬೆಳೆಗಳ ಮಾರಾಟದ ಆಶಯದೊಂದಿಗೆ ೫೪ ವರ್ಷಗಳ ಹಿಂದೆ ರಾಜ್ಯಾದ್ಯಾಂತ ಆರಂಭಗೊAಡ ಹಾಪ್‌ಕಾಮ್ಸ್ ಕೊಡಗಿನಲ್ಲಿಯೂ ಕೂಡ ಉತ್ತಮವಾದ ಸೇವೆ ನೀಡುತ್ತಿದೆ. ಈ ಹಿಂದೆ ತೋಟಗಾರಿಕೆ ಇಲಾಖೆಗೆ ಸೇರಿದ ಮಳಿಗೆಯಲ್ಲಿ ತರಕಾರಿ, ಹಣ್ಣು, ಸೊಪ್ಪುಗಳನ್ನು ಮಾರಾಟ ಮಾಡಲಾಗುತ್ತಿತ್ತು. ಇದೀಗ ಅತ್ಯಾಧುನಿಕವಾಗಿ ವಿಶಾಲವಾದ ಕಟ್ಟಡ ನಿರ್ಮಾಣವಾಗಿದೆ.

೧೯೬೫ರಲ್ಲಿ ನಗರದಲ್ಲಿ ತೋಟಗಾರಿಕಾ ಉತ್ಪನ್ನ ಮತ್ತು ಮಾರಾಟ ಸಂಸ್ಕರಣಾ ಸಂಘ ಎಂಬ ಹೆಸರಿನಲ್ಲಿ ಆರಂಭಗೊAಡ ಸಂಸ್ಥೆ ನಂತರ ಹಾಪ್‌ಕಾಮ್ಸ್ ಎಂಬ ಹೆಸರು ಪಡೆದುಕೊಂಡಿತು. ಇದಕ್ಕೆ ರಾಜ್ಯಸಭಾ ಸದಸ್ಯ ಎಫ್.ಎಂ.ಖಾನ್ ನೇತೃತ್ವದಲ್ಲಿ ಒಂದಷ್ಟು ಮಂದಿ ಕಾರಣರಾಗಿದ್ದರು. ರೂ. ೧.೩೭ ಕೋಟಿಯ ಯೋಜನೆ : ನಗರದ ಅಂಚೆ ಕಚೇರಿ ಎದುರಿನ ನಿವೇಶನದಲ್ಲಿ ಕಟ್ಟಡ ತಲೆ ಎತ್ತಿದ್ದು, ಕಾಮಗಾರಿ ಪೂರ್ಣಗೊಂಡಿದೆ. ಬೆಂಗಳೂರು ಮೂಲದ ಕಂಪೆನಿ ಒಳವಿನ್ಯಾಸ (ಇಂಟಿರಿಯರ್) ಮಾಡುವ ಜವಾಬ್ದಾರಿ ತೆಗೆದು ಕೊಂಡಿದ್ದು, ಒಂದು ವಾರದ ಕೆಲಸವಷ್ಟೆ ಬಾಕಿ ಉಳಿದಿದೆ.

೨೦೧೨ರಲ್ಲಿ ಹಾಪ್‌ಕಾಮ್ಸ್ಗೆ ಜಾಗ ಮಂಜೂರಾಯಿತು. ಅಂದಿನ ತೋಟಗಾರಿಕ ಹಾಗೂ ಬಂಧಿಖಾನೆ ಸಚಿವರಾಗಿದ್ದ ಉಮೇಶ್ ಖತ್ತಿ ಜಿಲ್ಲಾ ಹಾಪ್‌ಕಾಮ್ಸ್ ಆಡಳಿತ ಮಂಡಳಿಯ ಬೇಡಿಕೆಗೆ ಸ್ಪಂದಿಸಿ ಬಂಧಿಖಾನೆ ಇಲಾಖೆಗೆ ಸೇರಿದ ಜಾಗವನ್ನು ಹಾಪ್‌ಕಾಮ್ಸ್ಗೆ ನೀಡಿದರು. ಅಂದು ಸಭಾಪತಿಯಾಗಿದ್ದ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಕೂಡ ಜಾಗ ಮಂಜೂರಾತಿ ಆಗಲು ಮಹತ್ವದ ಪಾತ್ರ ವಹಿಸಿದ್ದರು. ಈ ಹಿಂದೆ ಬಂಧಿಖಾನೆ ಸಿಬ್ಬಂದಿಗಳ ವಸತಿಗೃಹ ಪ್ರಸ್ತುತ ಕಟ್ಟಡ ನಿರ್ಮಾಣವಾಗಿರುವ ಜಾಗದಲ್ಲಿತ್ತು.

ಒಂದು ಕೋಟಿ ಮೂವತ್ತೇಳು ಲಕ್ಷದ ಯೋಜನೆ ಇದಾಗಿದ್ದು, ಇದರಲ್ಲಿ ಪ್ರೊಸೆಸಿಂಗ್ ಯೂನಿಟ್‌ಗೆ ಹತ್ತು ಲಕ್ಷ ರೂಪಾಯಿ ಮೀಸಲಿರಿಸ ಲಾಗಿದೆ. ಮಡಿಕೇರಿ ಹಾಪ್‌ಕಾಮ್ಸ್ ಆಡಳಿತ ಮಂಡಳಿಗೆ ಸೇರಿದ ೩೬ ಸೆಂಟ್ ಜಾಗದ ಪೈಕಿ ೧೦ ಸೆಂಟ್ ಜಾಗದಲ್ಲಿ ಕಟ್ಟಡ ನಿರ್ಮಿಸಲಾಗಿದೆ. ಇದರೊಂದಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಕಟ್ಟಡ ಕಾಮಗಾರಿಗೆ ಕರ್ನಾಟಕ ರಾಜ್ಯ ಮಾರ್ಕೆಟಿಂಗ್ ಫೆಡರೇಷನ್ ರೂ. ಒಂದು ಕೋಟಿ ಹಣ ಬಿಡುಗಡೆ ಮಾಡಿದೆ. ಒಟ್ಟು ಮೂರು ಅಂತಸ್ತಿನ ಕಟ್ಟಡ ಇದಾಗಿದ್ದು, ಮೊದಲ ಹಂತವಾಗಿ ನೆಲಮಹಡಿ ಹಾಗೂ ಒಂದು ಅಂತಸ್ತನ್ನು ನಿರ್ಮಿಸಲಾಗಿದೆ. ಎರಡನೇ ಅಂತಸ್ತಿನಲ್ಲಿ ಕಚೇರಿ ಮಾಡುವ ಯೋಜನೆ ಇದೆ. ಪೂರ್ಣಗೊಂಡಿರುವ ಕಟ್ಟಡದಲ್ಲಿ ನಾಲ್ಕು ಮಳಿಗೆಗಳಿಗೆ ಅವಕಾಶ ದೊರೆಯಲಿದೆ. ಜೊತೆಗೆ ಖರೀದಿ ಕೇಂದ್ರವನ್ನು ಕಟ್ಟಡದ ಕೆಳಮಹಡಿಯಲ್ಲಿ ಮಾಡಲಾಗಿದ್ದು, ರೈತರಿಂದ ನೇರವಾಗಿ ಕೃಷಿ ಉತ್ಪನ್ನಗಳನ್ನು ಖರೀದಿಸ ಲಾಗುತ್ತದೆ.

ಹಾಪ್‌ಕಾಮ್ಸ್ಗೆ ಗುರುತಿಸಲಾಗಿದ್ದ ಜಾಗಕ್ಕಾಗಿ ಈ ಹಿಂದೆ ಕಾಂಗ್ರೆಸ್ ಹಾಗೂ ಹಾಪ್‌ಕಾಮ್ಸ್ ನಡುವೆ ಜಟಾಪಟಿಯೂ ನಡೆದಿತ್ತು. ನಗರದ ಮುಖ್ಯ ರಸ್ತೆಯಲ್ಲಿರುವ ಅಂಚೆ ಕಚೇರಿ ಎದುರಿನ ಜಾಗವೇ ಇಂದಿರಾ ಕ್ಯಾಂಟಿನ್ ನಿರ್ಮಿಸಲು ಸೂಕ್ತ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ, ಇದಕ್ಕೆ ಹಾಪ್‌ಕಾಮ್ಸ್ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಅಲ್ಲದೇ ತಮಗೆ ಮಂಜೂರಾದ ಜಾಗವನ್ನು ಬೇರೆ ಅವರು ಕೇಳುತ್ತಿರುವುದು ಸರಿಯಲ್ಲ ಎಂದು ತಿಳಿಸಿ ಆಡಳಿತ ಸಮರ್ಪಕ ದಾಖಲೆ ಸಲ್ಲಿಸಿ ನಿವೇಶನವನ್ನು ತನ್ನದಾಗಿಸಿಕೊಂಡಿತು.

ಪ್ರೊಸೆಸಿಂಗ್ ಯೂನಿಟ್ : ಹಾಪ್‌ಕಾಮ್ಸ್ ಮೂಲಕ ಹಣ್ಣು ಗಳನ್ನು ಪರಿಷ್ಕರಿಸಿ ಉತ್ಪನ್ನಗಳನ್ನು ತಯಾರಿಸುವ ನಿಟ್ಟಿನಲ್ಲಿ ೧೦ ಲಕ್ಷ ರೂಪಾಯಿ ವೆಚ್ಚದಲ್ಲಿ ಸಂಸ್ಕರಣಾ ಘಟಕ (ಪ್ರೊಸೆಸಿಂಗ್ ಯೂನಿಟ್) ವನ್ನು ನೆಲಅಂತಸ್ತಿನಲ್ಲಿ ಮಾಡುವ ಯೋಜನೆ ಇದೆ. ಈ ನಿಟ್ಟಿನಲ್ಲಿ ಹಣವನ್ನು ಮೀಸಲಿರಿಸಲಾಗಿದೆ ಎಂದು ಹಾಪ್‌ಕಾಮ್ಸ್ ಅಧ್ಯಕ್ಷ ಬಿದ್ದಾಟಂಡ ರಮೇಶ್ ಚಂಗಪ್ಪ ‘ಶಕ್ತಿ’ಗೆ ತಿಳಿಸಿದ್ದಾರೆ.

(ಮೊದಲ ಪುಟದಿಂದ) ಇದರೊಂದಿಗೆ ಕೊಡಗಿನ ಕರಿಮೆಣಸು, ಏಲಕ್ಕಿ, ಕಾಫಿಯನ್ನು ಮಾರಾಟ ಮಾಡುವ ಉದ್ದೇಶವಿದೆ. ಸಂಸ್ಕರಣಾ ಘಟಕದ ಮೂಲಕ ಉಪ್ಪಿನಕಾಯಿ, ವೈನ್ ಸೇರಿದಂತೆ ಇನ್ನಿತರ ಉತ್ಪನ್ನಗಳನ್ನು ತಯಾರಿಸುವ ಚಿಂತನೆ ಇದೆ. ಈ ನಿಟ್ಟಿನಲ್ಲಿ ರಾಜ್ಯದ ಇತರೆಡೆಗೆ ಪ್ರವಾಸ ಕೈಗೊಂಡು ಅಲ್ಲಿ ಅಳವಡಿಸಿಕೊಂಡಿರುವ ಯೋಜನೆಯನ್ನು ಜಿಲ್ಲೆಯಲ್ಲಿ ಕಾರ್ಯಗತಗೊಳಿಸಲಾಗುವುದು.

ರೈತರಿಂದ ಉತ್ಪನ್ನಗಳನ್ನು ಖರೀದಿಸಿ ನಂತರ ಅದನ್ನು ಅಗತ್ಯವಿರುವ ಬೇರೆ ಜಿಲ್ಲೆಗೂ ಕಳಿಸಲು ಕ್ರಮ ವಹಿಸಲಾಗುವುದು. ರಾಜ್ಯದ ಮಾರ್ಕೆಟಿಂಗ್ ಫೆಡರೇಷನ್‌ನ ಸಂಪರ್ಕದೊAದಿಗೆ ಇತರೆ ಹಾಪ್‌ಕಾಮ್ಸ್ನೊಂದಿಗೆ ನಿರಂತರ ಸಂಪರ್ಕ ಸಾಧಿಸಿ, ಆ ಮೂಲಕ ಇತರೆ ಜಿಲ್ಲೆಯಲ್ಲಿ ಬೇಡಿಕೆ ಇರುವ ಹಣ್ಣು, ಹೊರ ಜಿಲ್ಲೆಗಳಿಗೆ ರಪ್ತು ಮಾಡಲಾಗುವ ಆಂಥೋರಿಯAನAಥಹ ಹೂಗಳನ್ನು ರೈತರಿಂದ ಖರೀದಿಸಿ ಅವರಿಗೆ ನೀಡುವ ಮೂಲಕ ವ್ಯಾಪಾರ ಉತ್ತಮಪಡಿಸಲು ಯೋಜನೆ ಕೂಡ ಇದೆ ಎಂದು ರಮೇಶ್ ಚಂಗಪ್ಪ ತಿಳಿಸಿದ್ದಾರೆ.

೧,೩೦೦ ಸದಸ್ಯರು: ಸದ್ಯ ಹಾಪ್‌ಕಾಮ್ಸ್ನಲ್ಲಿ ಜಿಲ್ಲೆಯ ವಿವಿಧೆಡೆಯ ೧,೩೦೦ ಮಂದಿ ಸದಸ್ಯರಿದ್ದಾರೆ. ಇಲ್ಲಿ ಸದಸ್ಯತ್ವ ಪಡೆದುಕೊಳ್ಳಲು ಕೃಷಿಕರಾಗಿದ್ದು, ಆರ್‌ಟಿಸಿ ಹೊಂದಿದ್ದರೆ ಸಾಕು. ವಾರ್ಷಿಕವಾಗಿ ಹಾಪ್‌ಕಾಮ್ಸ್ ಒಂದು ಕೋಟಿಯಷ್ಟು ವಹಿವಾಟು ನಡೆಸಿ ಲಾಭದಲ್ಲಿ ಮುನ್ನಡೆಯುತ್ತಿದೆ. ಸದ್ಯ ಸೋಮವಾರಪೇಟೆಯಲ್ಲಿ ಉಪಶಾಖೆ ಕಾರ್ಯ ನಿರ್ವಹಿಸುತ್ತಿದೆ. ಗೋಣಿಕೊಪ್ಪಲುವಿನಲ್ಲಿದ್ದ ಶಾಖೆ ಮುಚ್ಚಲ್ಪಟ್ಟಿದೆ.

- ಹೆಚ್.ಜೆ ರಾಕೇಶ್