ಕೂಡಿಗೆ, ಡಿ. ೨೬: ಎರಡು ದಶಕಗಳಿಂದ ದುಸ್ಥಿತಿಯಲ್ಲಿದ್ದ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ೧ನೇ ಬ್ಲಾಕ್ನ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಜನತಾ ಕಾಲೋನಿಯಿಂದ ಕನ್ನಂಬಾಡಿ ಅಮ್ಮ ದೇವಾಲಯ ರಸ್ತೆ ತನಕ ಲೋಕೋಪಯೋಗಿ ಇಲಾಖೆ ಮೂಲಕ ಕಾಂಕ್ರಿಟಿ ಕರಣಗೊಳಿಸುವ ಕಾಮಗಾರಿ ಭರದಿಂದ ಸಾಗಿದೆ. ದುಸ್ಥಿತಿಯಲ್ಲಿದ್ದ ಜಿ.ಪಂ. ವ್ಯಾಪ್ತಿಯ ರಸ್ತೆಗಳನ್ನು ಲೋಕೋಪಯೋಗಿ ಇಲಾಖೆಯ ಎಸ್ಸಿಪಿ, ಎಸ್ಟಿಪಿ ಯೋಜನೆಯಡಿ ರೂ. ೧ ಕೋಟಿ ಅನುದಾನದಲ್ಲಿ ಪುನರ್ ನಿರ್ಮಾಣ ಮಾಡುವ ಕಾರ್ಯ ಆರಂಭಿಸಲಾಗಿದೆ. ಓಂಕಾರೇಶ್ವರ ಬಡಾವಣೆಯಲ್ಲಿ ಕಾಂಕ್ರಿಟ್ ರಸ್ತೆ, ಗೊಂದಿಬಸವನಹಳ್ಳಿಯ ಮೇನ್ಕೋರೆ ವ್ಯಾಪ್ತಿಯ, ಜೇನುಕಲ್ಲು ಬೆಟ್ಟದ ಕಾಂಕ್ರಿಟ್ ರಸ್ತೆಗಳು ಈಗಾಗಲೇ ನಿರ್ಮಾಣವಾಗಿವೆ ಎಂದು ಜಿ.ಪಂ. ಸದಸ್ಯೆ ಮಂಜುಳಾ ಮಾಹಿತಿ ನೀಡಿದರು. ಈ ಸಂದರ್ಭ ಮುಳ್ಳುಸೋಗೆ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಗಣಪತಿ, ತಾ.ಪಂ. ಮಾಜಿ ಸದಸ್ಯೆ ಜಯಮ್ಮ, ಗ್ರಾ.ಪಂ. ಮಾಜಿ ಸದಸ್ಯೆ ಸುಚಿತ್ರಾ, ಬಿಜೆಪಿ ಪ್ರಮುಖರಾದ ಶಿವಪ್ಪ, ಮಂಜುನಾಥ್ ಮತ್ತಿತರರು ಇದ್ದರು.