ಶನಿವಾರಸಂತೆ, ಡಿ. ೨೬: ಸಮೀಪದ ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಹೇಮಾವತಿ ನದಿಯಿಂದ ಕುಡಿಯುವ ನೀರು ಸರಬರಾಜು ಮಾಡುತ್ತಿದ್ದ ಪಂಪ್‌ಹೌಸ್ ನಿರ್ವಹಣಾ ಕೊರತೆಯಿಂದ ಕುಸಿದು ಬಿದ್ದಿದ್ದು ಜನತೆ ೧೨ ದಿನಗಳಿಂದ ನೀರಿಗಾಗಿ ಪರದಾಡುವಂತಾಗಿದೆ. ಪಂಪ್‌ಹೌಸ್ ಅನ್ನು ತುರ್ತಾಗಿ ದುರಸ್ತಿಪಡಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

೧೯೮೦ ರಲ್ಲಿ ಹೇಮಾವತಿ ನದಿಯಿಂದ ನೀರು ಸರಬರಾಜು ಮಾಡಲು ನೀರು ಸರಬರಾಜು ಘಟಕ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ್ದು, ೧೯೮೩ ರಲ್ಲಿ ಅಂದಿನ ಮುಖ್ಯಮಂತ್ರಿ ಗುಂಡೂರಾವ್ ಉದ್ಘಾಟಿಸಿದ್ದರು.

ಆರಂಭದಲ್ಲಿ ಘಟಕಕ್ಕೆ ೧೭.೫ ಹೆಚ್.ಪಿ. ಮೋಟಾರ್ ಅಳವಡಿಸಿ ಹೇಮಾವತಿ ನದಿಯಿಂದ ಗ್ರಾಮ ಪಂಚಾಯಿತಿ ಸಮೀಪದ ನೀರು ಶೇಖರಣಾ ಘಟಕಕ್ಕೆ ಸರಬರಾಜು ಮಾಡಲು ೬ ಇಂಚು ಕ್ಯಾಸಿನೋ ಪೈಪ್ ಅಳವಡಿಸಲಾಗಿತ್ತು. ನೀರಿನ ಬೇಡಿಕೆ ಹೆಚ್ಚಾದ ಹಿನ್ನೆಲೆ ೧೯೯೫ ರಲ್ಲಿ ೫೦ ಹೆಚ್.ಪಿ.ಯ ಹೊಸ ಮೋಟಾರ್ ಅಳವಡಿಸಲಾಯಿತು. ೨೦೧೦ ರಲ್ಲಿ ಹಳೆಯ ಪೈಪ್ ಬದಲಾಯಿಸಿ ೧೨ ಇಂಚಿನ ಸ್ಟೀಲ್ ಪೈಪ್ ಅಳವಡಿಸಿದರು. ಇದಕ್ಕಾಗಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿದ್ದರೂ ನದಿಯಿಂದ ನೀರು ಸಂಗ್ರಹಿಸಿ ಸರಬರಾಜು ಮಾಡಲು ಪಕ್ಕದಲ್ಲೇ ನಿರ್ಮಿಸಿದ್ದ ಪಂಪ್‌ಹೌಸ್ ಅನ್ನು ನಿರ್ವಹಣೆ ಮಾಡದೇ ಸುಸ್ಥಿತಿಯಲ್ಲಿಡದ ಕಾರಣ ಇದೀಗ ಅದು ಕುಸಿದು ಬಿದ್ದಿದೆ.

ಪಂಪ್‌ಹೌಸ್ ದುರಸ್ತಿಗೆ ರೂ. ೧ ಕೋಟಿ ವೆಚ್ಚವಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದು, ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಆಯ್ಕೆಯಾಗಿ ಬರುವ ನೂತನ ಜನಪ್ರತಿನಿಧಿಗಳಿಗೆ ಕೊಡ್ಲಿಪೇಟೆ ಜನತೆಗೆ ನೀರು ಸರಬರಾಜು ಯೋಜನೆ ಸವಾಲಾಗಿ ಪರಿಣಮಿಸಬಹುದು ಎಂದು ನಾಗರಿಕ ಸಮಿತಿ ಕಾರ್ಯದರ್ಶಿ ಜಿ.ಆರ್. ಸುಬ್ರಮಣ್ಯ, ಪಂಚಾಯಿತಿ ಮಾಜಿ ಸದಸ್ಯ ಸುರೇಶ್ ಹಾಗೂ ಕ.ರ.ವೇ. ಹೋಬಳಿ ಅಧ್ಯಕ್ಷ ಭೂಪಾಲ್ ಅಭಿಪ್ರಾಯವ್ಯಕ್ತ ಪಡಿಸಿದ್ದಾರೆ.

ವಿಚಾರ ತಿಳಿದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಕಾವೇರಿ ನೀರಾವರಿ ನಿಗಮ ಹಾಗೂ ಜಿಲ್ಲಾ ಪಂಚಾಯಿತಿ ಇಂಜಿನಿಯರ್ ಅವರೊಂದಿಗೆ ಸಮಾಲೋಚನೆ ನಡೆಸಿದ್ದು, ಕುಡಿಯುವ ನೀರಿನ ಸಮಸ್ಯೆಯನ್ನು ಶೀಘ್ರ ಪರಿಹರಿಸುವ ಭರವಸೆ ನೀಡಿದ್ದಾರೆ.