ಕುಶಾಲನಗರ, ಡಿ. ೨೬: ಕುಶಾಲನಗರದಲ್ಲಿ ಬ್ಯಾಂಕ್ ಎಟಿಎಂ ಕೇಂದ್ರಕ್ಕೆ ಬೆಂಕಿ ಹಾಕಿ ಹಣ ದರೋಡೆ ಮಾಡಲು ವಿಫಲ ಯತ್ನ ಮಾಡಿದ ಘಟನೆಯೊಂದು ನಡೆದಿದೆ. ಪಟ್ಟಣದ ಮೈಸೂರು ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಎಟಿಎಂ ಕೇಂದ್ರದಲ್ಲಿ ಘಟನೆ ಇತ್ತೀಚೆಗೆ ನಡೆದಿದ್ದು ಹಣ ದರೋಡೆ ಮಾಡಲು ಬಂದಿದ್ದ ವ್ಯಕ್ತಿಗೆ ಬೆಂಕಿ ತಗುಲಿ ಬಂದ ದಾರಿಗೆ ಸುಂಕ ವಿಲ್ಲದೆ ಓಡಿಹೋದ ಘಟನೆ ಇದಾಗಿದೆ.
ಎಟಿಎಂ ಕೇಂದ್ರಕ್ಕೆ ತಡರಾತ್ರಿ ಸುಮಾರು ೨.೪೫ಕ್ಕೆ ನುಗ್ಗಿದ ವ್ಯಕ್ತಿ ಪೆಟ್ರೋಲ್ ಚೆಲ್ಲಿ ಬೆಂಕಿ ಹಾಕುವ ಮೂಲಕ ಎಟಿಎಂ ಯಂತ್ರವನ್ನು ಸ್ಫೋಟಿಸಲು ಯತ್ನಿಸಿದ್ದು ಈ ಸಂದರ್ಭ ಬೆಂಕಿ ತಗುಲಿ ಅಲ್ಲಿಂದ ಪರಾರಿಯಾಗಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ನಂತರ ಕೇಂದ್ರದ ರೋಲಿಂಗ್ ಶಟ್ಟರ್ ಮುಚ್ಚಿ ಮೈಸೂರು ರಸ್ತೆಯತ್ತ ತೆರಳಿರುವ ದೃಶ್ಯ ಸೆರೆಯಾಗಿದೆ. ಪ್ರಕರಣದ ಬಗ್ಗೆ ಕುಶಾಲನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. - ಚಂದ್ರಮೋಹನ್