ವೀರಾಜಪೇಟೆ ವರದಿ, ಡಿ. 24: ಗ್ರಾಮ ಪಂಚಾಯತ್ ಎರಡನೇ ಹಂತದ ಚುನಾವಣೆ ಸಂಬಂಧ ವಿರಾಜಪೇಟೆಯ ಸಂತ ಅನ್ನಮ್ಮ ಶಾಲೆಯಲ್ಲಿ ಮತಗಟ್ಟೆ ಅಧಿಕಾರಿಗಳು (ಪಿಆರ್‍ಒ) ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ(ಎಪಿಆರ್‍ಒ) ಗುರುವಾರ ತರಬೇತಿ ಕಾರ್ಯಕ್ರಮ ನಡೆಯಿತು.
ಚುನಾವಣಾ ವೀಕ್ಷಕÀ ಎ.ದೇವರಾಜು ಅವರು ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ ನೀಡುವುದನ್ನು ವೀಕ್ಷಿಸಿದರು. ತಹಶೀಲ್ದಾರ್ ಯೋಗಾನಂದ ಇದ್ದರು.
ಗ್ರಾ.ಪಂ.ಚುನಾವಣಾ ತರಬೇತಿ ಕಾರ್ಯಾಗಾರದಲ್ಲಿ ತರಬೇತಿದಾರರಾದ ಕೆ.ಸಿ.ದಯಾನಂದ, ಪ್ರಶಾಂತ್, ವಿಲ್ಫ್ರೆಡ್ ಕ್ರಾಸ್ತಾ, ಇತರರು ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳು, ಮತಗಟ್ಟೆ ಕೇಂದ್ರದಲ್ಲಿ ಮತದಾನಕ್ಕೂ ಮೊದಲು ಪೂರ್ವ ಸಿದ್ಧತೆ ಮಾಡಿಕೊಳ್ಳುವುದು ಮತ್ತಿತರ ವಿಷಯಗಳ ಬಗ್ಗೆ ಪವರ್ ಪಾಯಿಂಟ್ ಪ್ರೆಸೆಂಟೇಷನ್ ಮೂಲಕ ಮಾಹಿತಿ ನೀಡಿದರು.
ಗ್ರಾ.ಪಂ.ಚುನಾವಣೆ ಸಂಬಂಧ ವೀರಾಜಪೇಟೆ ತಾಲೂಕಿನಲ್ಲಿ ಎರಡನೇ ಹಂತದ ಚುನಾವಣೆ ನಡೆಯಲಿದ್ದು, ಮತಗಟ್ಟೆ ಅಧಿಕಾರಿಗಳು ಮತ್ತು ಸಹಾಯಕ ಮತಗಟ್ಟೆ ಅಧಿಕಾರಿಗಳು ಚುನಾವಣಾ ಆಯೋಗದ ನಿರ್ದೇಶನ ವನ್ನು ಕಟ್ಟುನಿಟ್ಟಾಗಿ ಪಾಲಿಸುವುದು. ಗ್ರಾ.ಪಂ.ಸಾರ್ವತ್ರಿಕ ಚುನಾವಣೆಯು ಪಕ್ಷರಹಿತ ಚುನಾವಣೆಯಾಗಿದ್ದು, ಅದರಂತೆ ಕರ್ತವ್ಯ ನಿರ್ವಹಿಸಬೇಕು. ಮತಗಟ್ಟೆ ಕೇಂದ್ರಗಳಲ್ಲಿ ಮತದಾನದ ಮೇಲ್ವಿಚಾರಣೆ ಹಾಗೂ ಮತದಾನ ಯಾವುದೇ ಅಡೆತಡೆಯಿಲ್ಲದೆ ಸುಗಮ ಹಾಗೂ ಶಾಂತ ರೀತಿಯಲ್ಲಿ ಚುನಾವಣೆ ನಡೆಸಬೇಕು. ಎಲ್ಲಾ ಹಂತದ ಅಧಿಕಾರಿಗಳು ತಮ್ಮ ಕರ್ತವ್ಯ ಮತ್ತು ಜವಾಬ್ದಾರಿಯನ್ನು ಅರಿತು ಕಾರ್ಯ ನಿರ್ವಹಿಸಬೇಕು.
ಮಸ್ಟರಿಂಗ್ ದಿನದಂದು ಮತಗಟ್ಟೆಯ ಎಲ್ಲಾ ಸಿಬ್ಬಂದಿಗಳು ಕಡ್ಡಾಯವಾಗಿ ನಿಗದಿತ ಸಮಯಕ್ಕೆ ಹಾಜರಾಗಬೇಕೆಂದು ತಿಳಿಸಿದರು. ಕೋವಿಡ್ ಹಿನ್ನೆಲೆ ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆ ಬಗ್ಗೆ ಎಚ್ಚರವಹಿಸುವಂತೆ ತಿಳಿಸಿದರು.