ಸೋಮವಾರಪೇಟೆ, ಡಿ. 24: ತಾಲೂಕಿನ ಯಡವನಾಡು ಭಾಗದ ಗ್ರಾಮಸ್ಥರಿಗೆ ಕಾಡಾನೆಗಳಿಂದ ಮುಕ್ತಿ ದೊರೆಯುವದು ಈವರೆಗೂ ಗಗನಕುಸುಮವಾಗಿದೆ. ಅರಣ್ಯಕ್ಕೆ ಒತ್ತಿಕೊಂಡಂತೆ ಇರುವ ಈ ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಇವುಗಳ ಉಪಟಳಕ್ಕೆ ಈವರೆಗೆ ಕೈಗೊಂಡ ಕ್ರಮಗಳು ನೀರಿನಲ್ಲಿ ಹೋಮದಂತಾಗಿದೆ.

ನಿರಂತರ ಕಾಡಾನೆಗಳ ಹಾವಳಿಯಿಂದಾಗಿ ಈ ಭಾಗದ ಮಂದಿ ಪ್ರತಿ ವರ್ಷ ಕೃಷಿ ನಷ್ಟ ಅನುಭವಿಸುವದು ಸಾಮಾನ್ಯವಾಗಿದ್ದು, ನಿನ್ನೆ ದಿನ ವಾಸದ ಮನೆಯ ಮೇಲೂ ಕಾಡಾನೆ ಧಾಳಿ ನಡೆಸಿ ನಷ್ಟಪಡಿಸಿದೆ.

ಅದೃಷ್ಟವಶಾತ್ ಮನೆಯೊಳಗಿದ್ದ ಮಂದಿ ಅಪಾಯದಿಂದ ಪಾರಾಗಿದ್ದು, ಮನೆಯ ಎದುರು ಸಂಗ್ರಹಿಸಿಟ್ಟಿದ್ದ ಜೋಳದ ಬೆಳೆ ಕಾಡಾನೆಯ ಹೊಟ್ಟೆ ಸೇರಿದೆ.

ನಿನ್ನೆ ರಾತ್ರಿ 10.30ರ ಸುಮಾರಿಗೆ ಗ್ರಾಮಕ್ಕೆ ಆಗಮಿಸಿದ ಕಾಡಾನೆ ಯೊಂದು ಗ್ರಾಮದ ಕೋಟೆ ರಾಜು ಗಣಪತಿ ಎಂಬವರಿಗೆ ಸೇರಿದ ಕೃಷಿ ಜಮೀನಿಗೆ ನುಗ್ಗಿ ಜೋಳ ಕೃಷಿಯನ್ನು ನಷ್ಟಪಡಿಸಿದೆ. ಇದರೊಂದಿಗೆ ಮನೆಯ ಮುಂಭಾಗ ಕೊಯ್ಲು ಮಾಡಿ ಸಂಗ್ರಹಿಸಿಟ್ಟಿದ್ದ ಜೋಳವನ್ನು ಮನಸೋಯಿಚ್ಛೆ ತಿಂದು ಮುಗಿಸಿದೆ.

ಇಷ್ಟಕ್ಕೆ ಸುಮ್ಮನಾಗದ ಕಾಡಾನೆ, ರಾಜು ಅವರ ಮನೆಯ ಛಾವಣಿಗೆ ಅಳವಡಿಸಿದ್ದ ಶೀಟ್‍ಗಳನ್ನು ಎಳೆದು ಜಖಂಗೊಳಿಸಿದೆ. ಸುಮಾರು 4 ಶೀಟ್‍ಗಳು ಕಾಡಾನೆಯ ಕೋಪಕ್ಕೆ ತುತ್ತಾಗಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಎಂದಿನಂತೆ ಭೇಟಿ ನೀಡಿ ಪರಿಶೀಲಿಸಿದ್ದು, ಪರಿಹಾರಕ್ಕೆ ಅರ್ಜಿ ಸಲ್ಲಿಸುವಂತೆ ತಿಳಿಸಿದ್ದಾರೆ.

ಈ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ನಿರಂತರವಾಗಿದ್ದು, ಶಾಶ್ವತ ಪರಿಹಾರ ಮಾತ್ರ ಇಂದಿಗೂ ದೊರಕಿಲ್ಲ. ಕಳೆದ 15 ದಿನಗಳಲ್ಲಿ ಮೂರು ಬಾರಿ ಕಾಡಾನೆ ಧಾಳಿ ನಡೆಸಿದ್ದು, ಗ್ರಾಮದ ಕಾಫಿ ತೋಟ, ಬಾಳೆ ತೋಟ, ಹೊಲಗಳಿಗೆ ನುಗ್ಗಿ ನಷ್ಟಪಡಿಸುತ್ತಿದೆ.

ಗಣಪತಿ ಅವರಿಗೆ ಸೇರಿದ ಸುವರ್ಣ ಗೆಣಸು ಕೃಷಿ, ಸುನಿಲ್ ಅವರಿಗೆ ಸೇರಿದ ಬಾಳೆ ತೋಟ, ಲಿಂಗೇರಿ ಚಂದ್ರ ಅವರಿಗೆ ಸೇರಿದ ಕಾಫಿ ತೋಟಗಳಿಗೂ ನುಗ್ಗಿ ಫಸಲು ನಷ್ಟಗೊಳಿಸಿದೆ. ಈ ಭಾಗದಲ್ಲಿ ಕಾಡಾನೆಗಳು ಓಡಾಡುತ್ತಿರುವದರಿಂದ ಸಂಜೆಯ ವೇಳೆ ಗ್ರಾಮಸ್ಥರು ಮನೆಯಿಂದ ಹೊರಬರಲು ಭಯಪಡುವಂತಾಗಿದೆ.

ಅರಣ್ಯಕ್ಕೆ ಒತ್ತಿಕೊಂಡಂತೆ ಇರುವ ಯಡವನಾಡು ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದ್ದು, ಶಾಶ್ವತ ಪರಿಹಾರಕ್ಕೆ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು. ಅರಣ್ಯದೊಳಗೆ ಕಾಡಾನೆಗಳಿಗೆ ಆಹಾರ, ನೀರಿನ ಸೌಕರ್ಯಗಳನ್ನು ಒದಗಿಸುವ ಮೂಲಕ ಜನವಸತಿ ಪ್ರದೇಶಕ್ಕೆ ಬಾರದಂತೆ ಆನೆ ಕಂದಕ, ಸೋಲಾರ್ ಬೇಲಿಗಳನ್ನು ನಿರ್ಮಿಸಬೇಕೆಂದು ಗ್ರಾಮಸ್ಥ ರವಿ ಸೇರಿದಂತೆ ಇತರರು ಒತ್ತಾಯಿಸಿದ್ದಾರೆ.