ನಾಪೋಕ್ಲು, ಡಿ. 24: ಹೋಬಳಿ ವ್ಯಾಪ್ತಿಯ ವಿವಿಧ ಮತದಾನ ಕೇಂದ್ರಗಳಲ್ಲಿ ಮಂಗಳವಾರ ಶಾಂತಿಯುತ ಮತದಾನ ನಡೆಯಿತು. ಅಧಿಕೃತ ಗುರುತಿನ ಚೀಟಿಯನ್ನು ಹೊಂದಿದ್ದರೂ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದೆ ಕೆಲವರು ಮತದಾನದಿಂದ ವಂಚಿತರಾಗಿದ್ದು ಸಂಬಂಧಿಸಿದ ಇಲಾಖೆ ವಿರುದ್ಧ ಮತದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತದಾರರ ಪಟ್ಟಿಯಲ್ಲಿ ಹಲವು ಮತದಾರರ ಹೆಸರಿನ ಮುಂದೆ ಡಿಲೀಟ್ ಎಂದು ನಮೂದಿಸಲ್ಪಟ್ಟಿದ್ದು ಮತದಾನ ಮಾಡಲಾಗದೇ ಹಿಂತಿರುಗಿದ್ದಾರೆ.

ನಾಪೋಕ್ಲುವಿನ ನಾಟೋಳಂಡ ಕಸ್ತೂರಿ ಕುಟುಂಬದ ಐವರು ಸದಸ್ಯರು ಮತದಾನಕ್ಕೆ ಅವಕಾಶದಿಂದ ವಂಚಿತರಾಗಿದ್ದಾರೆ. ಈ ಕುರಿತು ತಹಶೀಲ್ದಾರ್ ಕಚೇರಿಯ ಸಿಬ್ಬಂದಿಗಳನ್ನು ಸಂಪರ್ಕಿಸಿದ್ದು ಗ್ರಾಮ ಲೆಕ್ಕಾಧಿಕಾರಿಗಳ ಮೂಲಕ ಹೊಸ ಮತದಾರರ ಪಟ್ಟಿಯನ್ನು ಕಳುಹಿಸಿಕೊಡಲಾಗುವುದು ಎಂಬ ಭರವಸೆ ದೊರೆಯಿತು. ಆದರೆ ಸಂಜೆವರೆಗೂ ಮತದಾನಕ್ಕೆ ಅವಕಾಶ ಲಭಿಸಿಲ್ಲ ಎಂದು ಅವರು ಪತ್ರಿಕೆಯೊಂದಿಗೆ ಆಕ್ರೋಶ ವ್ಯಕ್ತಪಡಿಸಿದರು. ನಾಪೋಕ್ಲು ಹಾಗೂ ಬೇತು ಗ್ರಾಮದ ಕೆಲವು ಮತಗಟ್ಟೆಗಳ ಮತದಾರರಿಗೆ ಎರಡು ವರ್ಷಗಳ ಹಿಂದೆಯೇ ಮತದಾರರ ಗುರುತಿನ ಚೀಟಿ ಸಿಕ್ಕಿದ್ದರೂ ಪಟ್ಟಿಯಲ್ಲಿ ಇನ್ನೂ ಹೆಸರು ಬಂದಿಲ್ಲ. ಅವರೂ ಕೂಡ ಮತದಾನದಿಂದ ವಂಚಿತರಾಗಿದ್ದಾರೆ ಎಂದು ನಾಟೋಳಂಡ ಸಚಿನ್ ದೂರಿದ್ದಾರೆ. ಸಮೀಪದ ಕುಂಜಿಲ 1 ಮತದಾನ ಕೇಂದ್ರದಲ್ಲಿ ಮತ ಚಲಾಯಿಸಬೇಕಿದ್ದ ವಿ.ಎ. ಉಸ್ಮಾನ್ ಎಂಬವರು ಮತದಾನದಿಂದ ವಂಚಿತರಾಗಿದ್ದಾರೆ. ಮಾಜಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿದ್ದ ಇವರ ಹೆಸರನ್ನೂ ಮತದಾರರ ಪಟ್ಟಿಯಿಂದ ತೆಗೆಯಲಾಗಿದೆ. ವಿವಿಧೆಡೆ ಮತದಾರರು ಮತದಾನಕ್ಕೆ ಅವಕಾಶ ಸಿಗದೆ ವಂಚಿತರಾದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. - ದುಗ್ಗಳ.