ಕಣಿವೆ, ಡಿ. 24: ಮೈಸೂರಿನ ಲಲಿತಮಹಲ್‍ನಂತಹ ಐಷಾರಾಮಿ ಹೊಟೇಲ್‍ಗಳು, ದುಬಾರೆ ಜಂಗಲ್ ಲಾಡ್ಜಸ್‍ನಂತಹ ವಿಹಾರ ಧಾಮಗಳು ಜನಸಾಮಾನ್ಯರಿಗೆ ನಿಲುಕುವಂತಹ ರೀತಿಯಲ್ಲಿ ಕೆಲವು ಬದಲಾವಣೆ ತರುವ ಚಿಂತನೆ ಇದೆ ಎಂದು ರಾಜ್ಯ ಸರ್ಕಾರದ ಅರಣ್ಯ ಹಾಗೂ ಜಂಗಲ್ ಲಾಡ್ಜಸ್ ನಿಗಮದ ಅಧ್ಯಕ್ಷ ಅಪ್ಪಣ್ಣ ಅಭಿಪ್ರಾಯಪಟ್ಟರು.

ಕುಶಾಲನಗರಕ್ಕೆ ಖಾಸಗಿ ಭೇಟಿ ನೀಡಿದ ಅವರು ಪತ್ರಕರ್ತರೊಂದಿಗೆ ಮಾತನಾಡಿ, ಕರ್ನಾಟಕದ ಪ್ರವಾಸೋದ್ಯಮವನ್ನು ದೇಶದ ಇತರೇ ರಾಜ್ಯಗಳಿಗಿಂತಲೂ ಭಿನ್ನವಾಗಿ ಅಭಿವೃದ್ಧಿಪಡಿಸುವ ಮೂಲಕ ದೇಶದ ವಿವಿಧೆಡೆಗಳ ಹೆಚ್ಚು ಪ್ರವಾಸಿಗರು ಕರ್ನಾಟಕಕ್ಕೆ ಧಾವಿಸುವಂತಹ ಯೋಜನೆಗಳನ್ನು ರೂಪಿಸುವ ಚಿಂತನೆ ಇದೆ ಎಂದರು.

ಕೋವಿಡ್ ಸಂಕಷ್ಟಗಳಿಂದಾಗಿ ಮುಚ್ಚಿರುವಂತಹ ಜಂಗಲ್ ಲಾಡ್ಜಸ್ ಹಾಗೂ ಅರಣ್ಯ ಇಲಾಖೆಯ ಐಷಾರಾಮಿ ಹೊಟೇಲ್‍ಗಳನ್ನು ಪುನರಾರಂಭ, ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ಪ್ರವಾಸಿ ಸ್ಪಾಟ್ ನಿರ್ಮಾಣ ಮಾಡುವ ಮೂಲಕ ಇತರೇ ರಾಜ್ಯಗಳಿಗೆ ತೆರಳುವಂತಹ ಪ್ರವಾಸಿಗರನ್ನು ರಾಜ್ಯದ ಪ್ರವಾಸಿ ಸ್ಥಳಗಳಿಗೆ ಸೆಳೆಯುವುದು ನಮ್ಮ ಆದ್ಯತೆ ಎಂದರು.