ಮಡಿಕೇರಿ, ಡಿ. 24: ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಧಾರ್ಮಿಕ್ ಯೂತ್ ಕ್ಲಬ್ (ಡಿ.ವೈ.ಸಿ.) ವತಿಯಿಂದ ಜ. 3 ರಂದು ನಗರದಲ್ಲಿ ಜಿಲ್ಲಾಮಟ್ಟದ ಬ್ಯಾಡ್ಮಿಂಟನ್ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಕ್ಲಬ್ನ ಸದಸ್ಯ ಸುಧಾಮ ಪೆರಾಜೆ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ನಗರದ ಜನರಲ್ ತಿಮ್ಮಯ್ಯ ಒಳಾಂಗಣ ಕ್ರೀಡಾಂಗಣದಲ್ಲಿ ಬೆಳಿಗ್ಗೆ 9 ಗಂಟೆಗೆ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಪುರುಷರ ಡಬಲ್ಸ್, ಮಿಶ್ರ ಡಬಲ್ಸ್ ಹಾಗೂ 45 ವರ್ಷ ಮೇಲ್ಪಟ್ಟ ಪುರುಷರ ಡಬಲ್ಸ್ ವಿಭಾಗಗಳಲ್ಲಿ ಪಂದ್ಯಾವಳಿ ನಡೆಯಲಿದೆ ಎಂದರು.
ಪುರುಷರ ಡಬಲ್ಸ್ನಲ್ಲಿ ವಿಜೇತರಾದ ಜೋಡಿಗೆ ರೂ. 8 ಸಾವಿರ ಹಾಗೂ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ರೂ. 5 ಸಾವಿರ ಹಾಗೂ ಟ್ರೋಫಿ, ತೃತೀಯ ಸ್ಥಾನಪಡೆದ ತಂಡಕ್ಕೆ ರೂ. 2500 ಹಾಗೂ ಟ್ರೋಫಿ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಮಿಶ್ರ ಡಬಲ್ಸ್ ವಿಭಾಗದಲ್ಲಿ ಪ್ರಥಮ ಸ್ಥಾನಪಡೆದ ತಂಡಕ್ಕೆ ರೂ. 5 ಸಾವಿರ ಹಾಗೂ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ರೂ. 2500 ಹಾಗೂ ಟ್ರೋಫಿ ನೀಡಲಾಗುತ್ತಿದ್ದು, 45 ವರ್ಷ ಮೇಲ್ಪಟ್ಟ ಪುರುಷರ ವಿಭಾಗದಲ್ಲಿ ಪ್ರಥಮ ಸ್ಥಾನಪಡೆದ ತಂಡಕ್ಕೆ ರೂ. 5 ಸಾವಿರ ಹಾಗೂ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ರೂ. 2500 ಹಾಗೂ ಟ್ರೋಫಿ ನೀಡಲಾಗುವುದೆಂದರು.
ಕೋವಿಡ್ ಸಂದರ್ಭದಲ್ಲಿ ಕೊರೊನಾ ವಾರಿಯರ್ಸ್ಗಳಾಗಿ ಕಾರ್ಯನಿರ್ವಹಿಸಿರುವ ಮಡಿಕೇರಿಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವಿದ್ಯಾರ್ಥಿಗಳಿಗೆ ಪಂದ್ಯಾವಳಿಯಲ್ಲಿ ಅವಕಾಶ ಕಲ್ಪಿಸಲಾಗಿದೆಯೆಂದು ಮಾಹಿತಿ ನೀಡಿದರು.
ಪಂದ್ಯಾವಳಿಗೆ ರೂ. 800 ಪ್ರವೇಶ ಶುಲ್ಕ ಇದ್ದು, ಪಂದ್ಯಾವಳಿಯ ‘ಟೈಸ್’ ಪ್ರಕ್ರಿಯೆ ಜ. 2 ರಂದು ನಡೆಯಲಿದೆ. ಆಸಕ್ತ ಕ್ರೀಡಾಪಟುಗಳು ತಾ. 31 ರೊಳಗೆ ತಮ್ಮ ತಂಡದ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಸುಜಿತ್-7337683376, ಸುಧಾಮ-9035265287 ಕುಶಾಲ್-9449063767 ಸಂರ್ಪಕಿಸುವಂತೆ ತಿಳಿಸಿದರು.
ಗೋಷ್ಠಿಯಲ್ಲಿ ಕ್ಲಬ್ನ ಸದಸ್ಯರಾದ ಪಿ.ಎಸ್. ಕುಶಾಲ್, ಎಂ.ಬಿ. ವಿವೇಕ್ ಹಾಗೂ ಬಿ. ನರೇಶ್ ಉಪಸ್ಥಿತರಿದ್ದರು.