ವೀರಾಜಪೇಟೆ ವರದಿ, ಡಿ. 24; ರೈತರ, ಬೆಳೆಗಾರರ ಹಿತಕಾಯುವ ನಿಟ್ಟಿನಲ್ಲಿ ನಮ್ಮ ಪೂರ್ವಜರು ಪರಿಶ್ರಮದಿಂದ ಸಹಕಾರ ಸಂಘಗಳನ್ನು ಕಟ್ಟಿ ಬೆಳೆಸಿದ್ದಾರೆ. ರೈತರ ಅಭ್ಯುದಯಕ್ಕಾಗಿ ಕಟ್ಟಿರುವ ಸಂಘಗಳು ಬೃಹದಾಕಾರವಾಗಿ ಬೆಳೆಯುತ್ತಿದ್ದು, ಸರಕಾರದ ಅನುದಾನ ಕೂಡ ಬರುತ್ತಿದೆ. ಕೋವಿಡ್ ಸಂಕಷ್ಟದ ನಡುವೆಯೂ ಜಿಲ್ಲೆಯ ಎಲ್ಲ ಸಹಕಾರ ಸಂಘಗಳು ಲಾಭದಲ್ಲಿ ಮುನ್ನಡೆ ಯುತ್ತಾ ವಾರ್ಷಿಕ ಮಹಾಸಭೆಗಳನ್ನು ನಡೆಸುತ್ತಾ ಸಂಘದ ಅಭಿವೃದ್ಧಿಗೆ ಸಹಕರಿಸುತ್ತಾ ಬರುತ್ತಿರುವ ಸದಸ್ಯರು ಗಳಿಗೆ ಲಾಭಾಂಶದ ಪಾಲಿನಲ್ಲಿ ಡಿವಿಡೆಂಡ್ ನೀಡುತ್ತಿದೆ. ಆದರೆ, ವೀರಾಜಪೇಟೆ ತಾಲೂಕಿನ ಕೆದಮುಳ್ಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಲಕ್ಷಾಂತರ ರೂಪಾಯಿ ದುರುಪಯೋಗವಾಗಿ ರುವ ಅಂಶ ಬೆಳಕಿಗೆ ಬಂದಿದ್ದು, ಸಂಘದ ಮಾಜಿ ಮುಖ್ಯಕಾರ್ಯನಿರ್ವಹಣಾಧಿಕಾರಿಯ ಹೆಸರು ತಳುಕು ಹಾಕಿಕೊಂಡಿದೆ. ಲೆಕ್ಕ ಪರಿಶೋಧನೆ ಸಂದರ್ಭ ವಿಚಾರ ಬೆಳಕಿಗೆ ಬಂದಿದ್ದು, ಅಧಿಕಾರಿಗೆ ನೋಟೀಸ್ ಜಾರಿ ಮಾಡಿದ್ದರೂ ಯಾವದೇ ಸ್ಪಂದನ ದೊರಕದ ಹಿನ್ನೆಲೆಯಲ್ಲಿ ಎರಡು ಬಾರಿ ಮಹಾಸಭೆಯನ್ನು ಮುಂದೂಡಿರುವ ಆಡಳಿತ ಮಂಡಳಿ ಅಧ್ಯಕ್ಷರು, ಹಾಗೂ ನಿರ್ದೇಶಕರುಗಳು ತಮಗೆ ಯಾವದೇ ಸಂಬಂಧವಿಲ್ಲವೆಂಬಂತೆ ಸುಮ್ಮನಾಗಿ ದ್ದಾರೆ.

ಕೆದಮುಳ್ಳೂರು ಸಹಕಾರ ಸಂಘದ 2019-20ನೇ ಸಾಲಿನ ಲೆಕ್ಕಪರಿ ಶೋಧನೆಯನ್ನು ಮೈಸೂರಿನ ಲೆಕ್ಕ ಪರಿಶೋಧಕರಾದ ಡಿ.ಟಿ. ಪೂರ್ಣಚಂದ್ರ ಅವರು ಮಾಡಿದ್ದು, ಈ ಸಂದರ್ಭ ರೂ. 35,52,962ರಷ್ಟು ವ್ಯತ್ಯಾಸ ಗಳಿರುವದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ

ಸಿ.ಎಂ ಅಚ್ಚಯ್ಯ (ಮೊದಲ ಪುಟದಿಂದ) ಅವರಿಗೆ ನೋಟೀಸ್ ಜಾರಿ ಮಾಡಿರುವ ಲೆಕ್ಕ ಪರಿಶೋಧಕರು ತಮ್ಮ ಕಾರ್ಯಾವಧಿಯಲ್ಲಿ 30.09.2019ರ ವರೆಗೆ ನೀಡಿರುವ ಜಮಾ ಖರ್ಚು ತಃಖ್ತೆಯಲ್ಲಿ ಹಣ ವೈತ್ಯಾಸವಿರುವದು ಕಂಡುಬಂದಿದ್ದು, ಈ ಮೊತ್ತವನ್ನು ತಮ್ಮಿಂದ ಏಕೆ ವಸೂಲಾತಿ ಮಾಡಬಾರದು ಎಂಬದಕ್ಕೆ ಮೂರು ದಿನಗಳೊಳಗಡೆ ಸಮಜಾಯಿಷಿಕೆ ಸಲ್ಲಿಸುವಂತೆ ತಾ.7.12.2020ರಂದು ಸೂಚನೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಅಚ್ಚಯ್ಯ ಅವರು, ನಗದು ವೈತ್ಯಾಸಗಳು, 2013-14ರ ಅಮಾನತು ಲೆಕ್ಕ ಹಾಗೂ ಕಡಂಗ ಡಿಸಿಸಿ ಬ್ಯಾಂಕಿನಲ್ಲಿ ರೂ. 18 ಲಕ್ಷ ನಿರಖು ಠೇವಣಿ ಇರಿಸಿರುವ ಬಗ್ಗೆ, ಕಟ್ಟಡ ನಿಧಿ ವರ್ಗಾವಣೆ ರೂ. 382750 ಹಣಕ್ಕೆ ಸಂಬಂಧಿಸಿದಂತೆ ತಾ.20.12.2020ರ ಒಳಗಾಗಿ ಸೂಕ್ತ ದಾಖಲೆಗಳನ್ನು ಸಲ್ಲಿಸುಸುದಾಗಿ ಲಿಖಿತ ಹೇಳಿಕೆ ನೀಡಿದ್ದರು.

ಅಧ್ಯಕ್ಷರಿಂದ ಸೂಚನೆ: ಆದರೂ ಕೂಡ ಅಚ್ಚಯ್ಯ ಅವರು ಯಾವದೇ ದಾಖಲೆಗಳನ್ನು ನೀಡದೇ ಇದ್ದುದರಿಂದ ಸಂಘದ ಅಧ್ಯಕ್ಷ ಎಂ.ಎಂ. ಮಾಚಯ್ಯ ಅವರು ಅಚ್ಚಯ್ಯ ಅವರಿಗೆ ನೋಟೀಸ್ ಜಾರಿ ಮಾಡಿದ್ದಾರೆ. ನಗದು ವ್ಯತ್ಯಾಸಕ್ಕೆ ಸಂಬಂಧಿಸಿದಂತೆ ಈಗಾಗಲೇ ಒಂದನೇ ನೋಟೀಸ್ ನೀಡಲಾಗಿದ್ದು, ತಾ. 20ರ ವರೆಗೆ ತಮ್ಮಿಂದ ಯಾವದೇ ಸೂಕ್ತ ದಾಖಲೆ ನೀಡಿರುವದಿಲ್ಲ. ಈ ಹಿನ್ನೆಲೆಯಲ್ಲಿ ವ್ಯತ್ಯಾಸದ ಮೊಬಲಗನ್ನು ನಿಮ್ಮಿಂದ ವಸೂಲಿಗೆ ಇಟ್ಟು ವರದಿಯಲ್ಲಿ ವಿವರವಾಗಿ ನಮೂದಿಸ ಲಾಗುವದು ಎಂದು ನೋಟೀಸಿನಲ್ಲಿ ಸೂಚನೆ ನೀಡಿದ್ದರು.

ಒಪ್ಪಂದ ಪತ್ರ: ಈ ನಡುವೆ ಸಂಘದ ಅಧ್ಯಕ್ಷ ಎಂ.ಎಂ. ಮಾಚಯ್ಯ ಹಾಗೂ ಕಾರ್ಯನಿರ್ವಹಣಾಧಿಕಾರಿ ಅಚ್ಚಯ್ಯ ಅವರುಗಳ ನಡುವೆ ಕರಾರು ಪತ್ರದಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿದೆ. ಪತ್ರದಲ್ಲಿ ಮೊದಲನೇ ವ್ಯಕ್ತಿಯಾಗಿರುವ ಅಚ್ಚಯ್ಯ ಅವರು; ಸಂಘದ ಲೆಕ್ಕ ಪತ್ರದಲ್ಲಿ ಆರ್ಥಿಕವಾಗಿ ರೂ. 13,70,212 ರಷ್ಟು ಹಣ ವೈತ್ಯಾಸವಾಗಿ ರುವುದು ಗಂಭೀರ ವಿಚಾರವಾಗಿದೆ. ನಿಯಮ ಪ್ರಕಾರ ಹಣ ಮರು ಪಾವತಿಸಲು ಬದ್ಧನಾಗಿರುತ್ತೇನೆ. ಹಣ ವ್ಯತ್ಯಾಸ ಬರಲು ಕಾರಣ ಪತ್ತೆ ಹಚ್ಚಲು ಸಮಯಾವಕಾಶ ನೀಡಬೇಕು, ವ್ಯತ್ಯಾಸ ಕಂಡು ಹಿಡಿದು ಲೆಕ್ಕಪತ್ರಗಳನ್ನು ಕಾನೂನು ಪ್ರಕಾರ ಯಾವದೇ ಚ್ಯುತಿ ಇಲ್ಲದಂತೆ ಸಮರ್ಪಕಗೊಳಿಸಲು ಪ್ರಯತ್ನಿಸುತ್ತೇನೆ, ಆಕಸ್ಮಾತ್ ಈ ಮೇಲಿನ ಷರತ್ತನ್ನು ನಾನು ಉಲ್ಲಂಘಿಸಿದಲ್ಲಿ ಎಲ್ಲ ರೀತಿಯ ಸೂಕ್ತ ಕಾನೂನು ಕ್ರಮಗಳನ್ನು ನನ್ನ ಮೇಲೆ ಕೈಗೊಂಡು ವ್ಯತ್ಯಾಸದ ಹಣವನ್ನು ನನ್ನಿಂದ ವಸೂಲಿ ಮಾಡಬಹು ದಾಗಿರುತ್ತದೆ. ಅಂತಹ ಸಂದರ್ಭದಲ್ಲಿ ಉಂಟಾಗುವ ಎಲ್ಲ ರೀತಿಯ ಖರ್ಚು, ನಷ್ಟಗಳಿಗೆ ನಾನೇ ವೈಯಕ್ತಿಕವಾಗಿ ಜವಾಬ್ದಾರನೆಂದು ಘೋಷಿಸಿದ್ದಾರೆ. ಒಪ್ಪಂದ ಪತ್ರಕ್ಕೆ ಸದಸ್ಯರುಗಳಾದ ಎಂ.ಎ. ಮೊಹಮ್ಮದ್, ಜಿ.ಎಂ. ಬಿದ್ದಪ್ಪ ಸಾಕ್ಷಿಗಳಾಗಿ ಸಹಿ ಮಾಡಿದ್ದಾರೆ.

ಸದಸ್ಯನಾಗಿ ಆಯ್ಕೆ: ಈ ನಡುವೆ ನಿವೃತ್ತಿಯಾದ ಅಚ್ಚಯ್ಯ ಅವರು ಕಳೆದ ಅವಧಿಗೆ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆಯಲ್ಲಿ ಸ್ಪರ್ಧಿಸಿ ಸಂಘದ ನಿರ್ದೇಶಕರಾಗಿಯೂ ಆಯ್ಕೆಯಾಗಿದ್ದಾರೆ. ದುರುಪ ಯೋಗದ ಆರೋಪಗಳಿದ್ದರೂ ಮತ್ತೆ ಅದೇ ಸಂಘದಲ್ಲಿ ನಿರ್ದೇಶಕರಾಗಿ ಆಯ್ಕೆ ಆಗಿರುವ ಬಗ್ಗೆ ಇದೀಗ ಜನರು ಅಚ್ಚರಿಪಡುವಂತಾಗಿದೆ.

ಗ್ರಾಮದ ರೈತರ ಹಿತಕಾಯುವ ದೃಷ್ಟಿಯಿಂದ ಸ್ಥಾಪಿತವಾಗಿರುವ ಸಹಕಾರ ಸಂಘಗಳಲ್ಲಿ ಈ ರೀತಿಯ ದುರುಪಯೋಗಗಳು ನಡೆದರೆ ಸಂಘಗಳ ಏಳಿಗೆಯಾಗುವದಾದರೂ ಹೇಗೆ ಎಂಬ ಪ್ರಶ್ನೆ ಜನವಲಯದಲ್ಲಿ ಮೂಡಿದೆ. 1980ರ ದಶಕದಲ್ಲೂ ಇದೇ ಸಂಘದಲ್ಲಿ ರೂ. 5 ಲಕ್ಷದಷ್ಟು ಹಣ ಕಾಣೆಯಾಗಿದ್ದನ್ನು ಸದಸ್ಯರು ನೆನಪಿಸಿಕೊಳ್ಳುತ್ತಿದ್ದಾರೆ.