ಕುಶಾಲನಗರ, ಡಿ. 24: ವಂಚನೆಯ ತವರೂರು ಎನಿಸಿರುವ ಕುಶಾಲನಗರ ಪಟ್ಟಣದಲ್ಲಿ ಮತ್ತೊಂದು ಲಕ್ಷಗಟ್ಟಲೆ ಹಣಕಾಸು ಸಂಗ್ರಹಿಸಿ ವಂಚನೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಕಳೆದ ಮೂರು ದಶಕಗಳಿಂದ ಕುಶಾಲನಗರ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಒಂದು ಸಾವಿರ ಕೋಟಿಗೂ ಮಿಕ್ಕಿ ಹಣಕಾಸು ವಂಚನೆಗೆ ಒಳಗಾಗಿ ಸಾವಿರಾರು ಮಂದಿ ತಮ್ಮ ಹೂಡಿಕೆಯ ಹಣಕ್ಕಾಗಿ ಶಬರಿಯಂತೆ ಕಾಯುತ್ತಿದ್ದು ಈ ನಡುವೆಯೇ ಇನ್ನೊಂದು ವಂಚನೆಯ ಜಾಲ ಹೊರಬಿದ್ದಿದೆ. ಬೆಳಕು ಎಂಬ ರಾಜ್ಯ ಸರಕಾರದ ಯೋಜನೆಯೊಂದರ ಹೆಸರಿನಲ್ಲಿ ಸುಮುಖ್ ಎಂಟರ್‍ಪ್ರೈಸಸ್ ಎಂಬ ಸಂಸ್ಥೆ ರಾಜ್ಯದ 30 ನಗರಗಳಲ್ಲಿ ತನ್ನ ಶಾಖೆಯನ್ನು ಹೊಂದಿದ್ದು ಸರಿಸುಮಾರು 30 ಸಾವಿರಕ್ಕೂ ಅಧಿಕ ನಿರುದ್ಯೋಗಿಗಳಿಗೆ ಉದ್ಯೋಗವಕಾಶ ನೀಡುವ ಹೆಸರಿನಲ್ಲಿ ಈ ವಂಚನೆ ನಡೆದಿದೆ. 2009 ರಲ್ಲಿ ಪ್ರಾರಂಭವಾದ ಸುಮುಖ್ ಎಂಟರ್‍ಪ್ರೈಸಸ್ ಅಲ್ಲಲ್ಲಿ ಉದ್ಯೋಗ ಮೇಳಗಳನ್ನು ಆಯೋಜಿಸಿ ಶ್ರೀಸಾಮಾನ್ಯರ ಸೇವೆ ಮಾಡುವುದಾಗಿ ನಂಬಿಸಿ ಇದೀಗ ಜಿಲ್ಲೆಯ ಕೆಲವು ಯುವಕರಿಗೆ ಲಕ್ಷಾಂತರ ಹಣ ವಂಚನೆ ಮಾಡಿದ್ದು ಈ ಬಗ್ಗೆ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬೆಂಗಳೂರಿನ ಮೂಲಕ ಎಚ್.ಎಸ್.ವಿನಯ್ ಆತನ ಪತ್ನಿ ಕೃತಿಕ, ಅತ್ತೆ ಮಾವ ಸೇರಿದಂತೆ ಇಡೀ ಕುಟುಂಬವೇ (ಮೊದಲ ಪುಟದಿಂದ) ಮೋಸ ಮಾಡಿದೆ ಎಂದು ಕುಶಾಲನಗರ ಠಾಣೆಯಲ್ಲಿ ಬಸವೇಶ್ವರ ಬಡಾವಣೆಯ ಬಿ.ಎ.ಅಶ್ವಥ್ ಎಂಬವರು ದೂರು ದಾಖಲಿಸಿದ್ದಾರೆ. ಬೆಂಗಳೂರಿನ ಗುಡ್ಡೇನಹಳ್ಳಿ ಎಂಬಲ್ಲಿ ವಾಸವಾಗಿರುವ ವಿನಯ್ 2018 ರಿಂದ ಕುಶಾಲನಗರದ ಅಕ್ಷತ್ ಮೂಲಕ ಒಟ್ಟು 16 ಲಕ್ಷ ರೂಗಳನ್ನು ಪಡೆದು ಅಕ್ಷತ್ ಗೋವಾ ಪ್ರಾಜೆಕ್ಟ್ ಎಂಬ ಯೋಜನೆ ರೂಪಿಸಿ ಇದೀಗ ಸರಕಾರದಿಂದ ಹಣ ಬರುತ್ತದೆ ಎಂದು ಸಬೂಬು ಹೇಳಿ ವಂಚಕರ ಮೊಬೈಲ್ ಸಂಪರ್ಕ ಸ್ವಿಚ್ ಆಫ್, ನಾಟ್ ರೀಚೆಬಲ್ ಆಗಿರುವುದು ಪ್ರಸಕ್ತ ಬೆಳವಣಿಗೆ. ವಿಧಾನಸೌಧದಲ್ಲಿ ಹಣ ನೀಡಬೇಕು. ತಾನು ಸಕಲೇಶಪುರ, ಬೇಲೂರು ಎಂಎಲ್‍ಎ ಗಳಿಗೆ ಅತ್ಯಾಪ್ತನಾಗಿದ್ದು ಅವರ ಮೂಲಕ ಕೆಲಸ ಮಾಡಿಸಿಕೊಡುತ್ತೇನೆ ಎಂದು ನಂಬಿಸಿ ಎರಡು ವರ್ಷಗಳಲ್ಲಿ ಒಟ್ಟು 16 ಲಕ್ಷ ರೂಗಳನ್ನು ಪಡೆದು ಇದೀಗ ಮೊಬೈಲ್ ಅನ್ನು ಸ್ವಿಚ್‍ಆಫ್ ಮಾಡಿಕೊಂಡಿರುವುದಾಗಿ ವಂಚನೆಗೊಳಗಾದ ಕುಶಾಲನಗರದ ಅಕ್ಷತ್ ದಾಖಲೆ ಸಮೇತ ಶಕ್ತಿಗೆ ತಿಳಿಸಿದ್ದಾರೆ.

ಸರಕಾರದ ಬೆಳಕು ಯೋಜನೆಯಲ್ಲಿ ರೂ 38 ಕೋಟಿ ತನಗೆ ಬರಬೇಕಾಗಿದ್ದು ಬಂದ ತಕ್ಷಣ ಹಣ ನೀಡುತ್ತೇನೆ ಎಂದು ಇದುವರೆಗೆ ಹಣ ನೀಡದ ಕಾರಣ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ ಎಂದು ತಿಳಿಸಿದ್ದಾರೆ. ವಂಚಕ ವಿನಯ್ ಮೇಲೆ ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೂಡ ದೂರು ದಾಖಲಾಗಿದ್ದು ಇದುವರೆಗೆ ನ್ಯಾಯ ಮಾತ್ರ ದೊರಕಿಲ್ಲ ಎಂದು ತಿಳಿದುಬಂದಿದೆ. ವಂಚಕ ವಿನಯ್ 5 ಮೊಬೈಲ್ ಸಂಖ್ಯೆ ಹೊಂದಿದ್ದು 9483609557, 8277591059, 8105493120, 9353394860, 9513015197 ಸಂಖ್ಯೆಗಳನ್ನು ಪೊಲೀಸ್ ಠಾಣೆಗೆ ನೀಡಿದರೂ ಇನ್ನೂ ಆತನನ್ನು ಪತ್ತೆ ಹಚ್ಚುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ ಎನ್ನಲಾಗಿದೆ. ಪ್ರಕರಣದ ಬಗ್ಗೆ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೂ ಮಾಹಿತಿ ನೀಡಿದ್ದು ತನಿಖೆಗೆ ಸೂಚನೆ ನೀಡಿದರೂ ಪೊಲೀಸ್ ಅಧಿಕಾರಿಗಳು ಇನ್ನೂ ಪತ್ತೆಹಚ್ಚುವಲ್ಲಿ ವಿಳಂಬ ಧೋರಣೆ ತಾಳುತ್ತಿರುವುದು ಈ ಭಾಗದ ಜನರಲ್ಲಿ ಅಸಹನೆ ತಂದಿದೆ. ವಂಚಕ ವಿನಯ್ ಜೊತೆ ಕೆಲ ಗಣ್ಯರು ಕೈಜೋಡಿಸಿರುವ ಬಗ್ಗೆ ಸಂಶಯ ವ್ಯಕ್ತಗೊಂಡಿದ್ದು ಇತ್ತ ವಂಚನೆಗೊಳಗಾದ ಜಿಲ್ಲೆಯ ಕೆಲವು ವ್ಯಕ್ತಿಗಳು ಸೇರಿದಂತೆ ನೆರೆ ಜಿಲ್ಲೆಯ ಮಂದಿ ಲಬೋಲಬೋ ಎನ್ನುವಂತಾಗಿದೆ. ಕುಶಾಲನಗರ ಠಾಣೆಯಲ್ಲಿ 2020 ರ ಆಗಸ್ಟ್ ತಿಂಗಳಲ್ಲಿ ದೂರು ದಾಖಲಾಗಿರುವ ಬಗ್ಗೆ ಮಾಹಿತಿ ದೊರೆತಿದೆ. ಹಣ ಹೂಡಿಕೆ ಮಾಡಿರುವ ವ್ಯಕ್ತಿಗಳಿಗೆ ಐಷಾರಾಮಿ ಮನೆ, ಕಾರು ಕೊಡುಗೆಯಾಗಿ ನೀಡುವುದಾಗಿ ಸಂದೇಶ ಬಂದರೂ ಇಂತಹ ಮನೆ ಪತ್ತೆಯಾಗಿಲ್ಲ ಎಂದು ವಂಚನೆಗೊಳಗಾದ ವ್ಯಕ್ತಿಗಳು ತಮ್ಮ ಅಳಲನ್ನು ಶಕ್ತಿಯೊಂದಿಗೆ ತೋಡಿಕೊಂಡಿದ್ದಾರೆ.

ಬೆಳಕು ಯೋಜನೆ ಮುಖಾಂತರ ಗ್ರಾಮ ಗ್ರಾಮಕ್ಕೆ ಪ್ರತಿ ಯೋಜನೆಗಳನ್ನು ತಲುಪಿಸಿ ಫಲಾನುಭವಿಗಳಿಗೆ ತರಬೇತಿಯನ್ನು ನೀಡುವುದು ವಂಚನೆ ಮಾಡಿದ ಸುಮುಖ್ ಎಂಟರ್‍ಪ್ರೈಸಸ್‍ನ ಧ್ಯೇಯವಾಗಿದ್ದು ಇದೀಗ ರಾಜ್ಯದಾದ್ಯಂತ 30 ಜಿಲ್ಲೆಗಳಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ರೂ 36.84 ಕೋಟಿ ಅನುದಾನ ಕೋರಿರುವ ದಾಖಲೆಗಳು ಕೂಡ ಶಕ್ತಿಗೆ ದೊರೆತಿದೆ. ಒಟ್ಟಾರೆ ಕುಶಾಲನಗರ ಸೇರಿದಂತೆ ಸುತ್ತಮುತ್ತ ಮೂರು ದಶಕಗಳಿಂದ ಒಂದಲ್ಲ ಒಂದು ರೀತಿಯಲ್ಲಿ ಹಣ ಹೂಡಿಕೆ ಮಾಡಿ ನಿರಂತರವಾಗಿ ವಂಚನೆಗೊಳಗಾಗುತ್ತಿರುವ ಯುವಪೀಳಿಗೆ ಎಚ್ಚೆತ್ತುಕೊಳ್ಳು ವುದರೊಂದಿಗೆ ಈ ವಂಚನಾ ಜಾಲಗಳಿಗೆ ಶಾಶ್ವತ ಕಡಿವಾಣ ಬೀಳಬೇಕಾಗಿದೆ