ಮಡಿಕೇರಿ, ಡಿ. 24: ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯರು ಹೆಚ್ಚಾಗಿ ತೊಡಗಿಸಿಕೊಳ್ಳಬೇಕು. ಕನ್ನಡ ಭಾಷೆ ಬೆಳೆಸುವಲ್ಲಿ ಪ್ರತಿಯೋರ್ವರೂ ಕೈಜೋಡಿಸಬೇಕೆಂದು ವಿಧಾನಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಕರೆ ನೀಡಿದರು.ನಗರದ ಬಾಲಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಡೆದ ಕೊಡಗಿನ ಗೌರಮ್ಮ ದತ್ತಿ ಪುರಸ್ಕಾರ, ಪುಸ್ತಕ ಬಿಡುಗಡೆ ಹಾಗೂ ಕನ್ನಡ ಜಾಗೃತಿ ಸಮಿತಿ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕೊಡಗು ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಬೆಳವಣಿಗೆಗೆ ಕೊಡಗಿನ ಗೌರಮ್ಮ ಅವರ ಕೊಡುಗೆ ಅಪಾರ. ಗೌರಮ್ಮ ಅವರ ಕಥೆ, ಕಾದಂಬರಿ ಸಮಾಜ ಮುಖಿಯಾಗಿದೆ ಎಂದರು.ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯರು ಮತ್ತಷ್ಟು ತೊಡಗಿಸಿಕೊಳ್ಳಬೇಕು. ಜೊತೆಗೆ ಕನ್ನಡ ಭಾಷೆ ಬೆಳೆಸುವಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು. ಕನ್ನಡವನ್ನು ಉಳಿಸಿ ಬೆಳೆಸಲು ಶ್ರಮಿಸುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯವೈಖರಿಯನ್ನು ಶ್ಲಾಘಿಸಿದರು.
ಕೊಡಗಿನ ಗೌರಮ್ಮ ದತ್ತಿ ಪುರಸ್ಕಾರ ಪಡೆದ ಜಲಾ ಕಾಳಪ್ಪ ಅವರು ಮಾತನಾಡಿ ಕೊಡಗಿನ ಗೌರಮ್ಮ ಜಿಲ್ಲೆಯ ಎಲ್ಲಾ ಜನರ ಮನೆ ಮಾತಾಗಿದ್ದಾರೆ. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದರು.
ಸ್ವಾತಂತ್ರ್ಯ ಹೋರಾಟಕ್ಕಾಗಿ ತಮ್ಮ ಮನೆಯಲ್ಲಿದ್ದ ಬಂಗಾರವನ್ನೇ ನೀಡಿದ್ದಾರೆ. ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿ ನೀಡಿರುವುದು ಸಂತಸ ತಂದಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಸ್.ಲೋಕೇಶ್ ಸಾಗರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಕೊಡಗಿನ ಗೌರಮ್ಮ ಅವರು ಸ್ವಾತಂತ್ರ್ಯಕ್ಕಾಗಿ ಬದುಕನ್ನೇ ಅರ್ಪಿಸಿದ್ದಾರೆ.
(ಮೊದಲ ಪುಟದಿಂದ) ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕೊಡಗಿನ ಗೌರಮ್ಮ ಅವರ ಸೇವೆ ಸ್ಮರಣೀಯ ಎಂದರು.
ಕವನ ಸಂಕಲನ ಬಿಡುಗಡೆ ಮಾಡಿದ ‘ಶಕ್ತಿ’ ಸಲಹಾ ಸಂಪಾದಕ ಬಿ.ಜಿ. ಅನಂತಶಯನ ಅವರು ಮಾತನಾಡಿ ಜೀವನ ಮತ್ತು ಭಾವನೆಗಳು ಬರಹದ ಕವಿ ಪ್ರಕೃತಿಯಲ್ಲಿ ಹರಡಿಕೊಂಡಿದೆ. ಅಲ್ಲಿಂದ ಬಿಡುಗಡೆ ದೊರೆತು ಕವಿ ಹೃದಯದಲ್ಲಿ ಮನೆ ಮಾಡುತ್ತವೆ. ಕವಿಗಳು, ಬರಹಗಾರರು ಅದನ್ನು ಬರಹಕ್ಕೆ ಇಳಿಸಿದ ಕೂಡಲೇ ಅವುಗಳಿಗೆ ಹೃದಯದಿಂದ ಬಿಡುಗಡೆ ದೊರಕುತ್ತದೆ ಎಂದರು.
ಕನ್ನಡ ಸಾಹಿತ್ಯವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮತ್ತಷ್ಟು ಪುಸ್ತಕಗಳು ಹೊರತರಬೇಕು. ಕಥೆ, ಕಾದಂಬರಿಗಳನ್ನು ಪ್ರತ್ಯೇಕವಾಗಿ ಆಹ್ವಾನಿಸಬೇಕು ಎಂದು ಅವರು ಸಲಹೆ ಮಾಡಿದರು. ಮತ್ತೊಂದು ಕೃತಿ ಬಿಡುಗಡೆ ಮಾಡಿದ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕಿÀ ಕೆ.ಟಿ. ದರ್ಶನ್ ಅವರು ಮಾತನಾಡಿ, ಜೀವನದ ಪಯಣದಲ್ಲಿ ಮೇಲೇರಲು ಸಾಹಿತ್ಯವೂ ಒಂದು ಸಾಧನವಾಗಿದೆ. ಸಾಹಿತ್ಯ ಓದುಗರನ್ನು ಹಿಡಿತದಲ್ಲಿಟ್ಟುಕೊಳ್ಳುವಂತಿರಬೇಕು. ಗೌರಮ್ಮ ಅವರು, ಅತಿ ಕಿರಿಯ ವಯಸ್ಸಿನಲ್ಲಿ ಅಷ್ಟೊಂದು ಸಾಹಿತ್ಯ ರಚನೆ ಹೇಗೆ ಮಾಡಿದರೆಂಬ ಪ್ರಶ್ನೆ ಕಾಡುತ್ತದೆ ಎಂದು ಹೇಳಿದರು.
ಸಾಹಿತಿ ಹಾಗೂ ತೀರ್ಪುಗಾರರಾಗಿದ್ದ ಕಿಗ್ಗಾಲು ಗಿರೀಶ್ ಮಾತನಾಡಿ, ಈ ಹಿಂದೆ ಇದ್ದಂತಹ ಕೊಡಗಿನಲ್ಲಿ ಸಾಹಿತ್ಯಕ್ಕೆ ಬರಬಂದಿದೆ ಎಂಬ ಆರೋಪ ಇದೀಗ ದೂರವಾಗಿದೆ. ಸಾಹಿತ್ಯ ಕ್ಷೇತ್ರದಲ್ಲಿ ಬೆಳವಣಿಗೆಯಾಗಿದ್ದು, ಸಾಹಿತ್ಯದಲ್ಲಿನ ಪದಗಳು ಶ್ರೀಸಾಮಾನ್ಯನಿಗೆ ತಲುಪುವಂತಿರಬೇಕೆಂದು ಹೇಳಿದರು.
ಕೊಡಗು ಜಿಲ್ಲಾ ಲೇಖಕಿಯರ ಬಳಗದ ಅಧ್ಯಕ್ಷೆ ತೀರ್ಪುಗಾರರಾಗಿದ್ದ ಕಸ್ತೂರಿ ಗೋವಿಂದಮ್ಮಯ್ಯ ಮಾತನಾಡಿ, ಸಕಲರಿಗೂ, ಸರ್ವರಿಗೂ ಹಿತವನ್ನುಂಟುಮಾಡುವುದೇ ಸಾಹಿತ್ಯ. ಪುರುಷರಿಗಿಂತ ಮಹಿಳೆಯರು ಚುರುಕು ಬುದ್ಧಿಯಿಂದ ಸಂಸಾರ ನಿಭಾಯಿಸುತ್ತಾ, ನೌಕರಿ ಮಾಡುತ್ತಾ ಸಾಹಿತ್ಯ ರಚನೆಯಲ್ಲಿ ಸಾಧನೆ ಮಾಡುತ್ತಿದ್ದಾರೆ. ಸಾಹಿತ್ಯಕ್ಕೆ ಅಲೌಕಿಕ ಶಕ್ತಿಯಿದ್ದು, ಪುರುಷರಿಗೂ ಕೂಡ ಅವಕಾಶ ಸಿಗುವಂತಾಗಲಿ ಎಂದು ಹೇಳಿದರು.
ಪುರುಷರಿಗೂ ದತ್ತಿ ಸಾಹಿತ್ಯ ಪ್ರಶಸ್ತಿ
ಅಧ್ಯಕ್ಷತೆ ವಹಿಸಿ ಮಾತನಾಡಿದ ಕ.ಸಾ.ಪ. ಜಿಲ್ಲಾಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಅವರು, ಜಿಲ್ಲೆಯಲ್ಲಿ ಸಾಕಷ್ಟು ಪುರುಷ ಸಾಹಿತಿಗಳಿದ್ದಾರೆ. ಆದರೆ, ಯಾವುದೇ ಪ್ರಶಸ್ತಿ, ಪುರಸ್ಕಾರಗಳು ದೊರಕುತ್ತಿಲ್ಲ. ದಾನಿಗಳು ಪರಿಷತ್‍ನಲ್ಲಿ ದತ್ತಿ ಪ್ರಶಸ್ತಿಯನ್ನು ಇರಿಸಿದರೆ ಪುರುಷ ಸಾಹಿತಿಗಳಿಗೂ ಅವಕಾಶ ಸಿಕ್ಕಂತಾಗುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿದ್ದ ‘ಶಕ್ತಿ’ ಸಲಹಾ ಸಂಪಾದಕ ಬಿ.ಜಿ. ಅನಂತಶಯನ ಅವರು ತಮ್ಮ ತಂದೆ, ದಿ. ಬಿ.ಎಸ್. ಗೋಪಾಲಕೃಷ್ಣ ಅವರ ಹೆಸರಿನಲ್ಲಿ ದತ್ತಿ ಪ್ರಶಸ್ತಿ ಸ್ಥಾಪಿಸುವುದಾಗಿ ಘೋಷಿಸಿದರು. ಜಿಲ್ಲೆಯ ಸಾಹಿತಿಗಳು, ಕಲಾವಿದರಿಗೆ ‘ಶಕ್ತಿ’ ಪತ್ರಿಕೆ ವಿಶ್ವವಿದ್ಯಾಲಯವಿದ್ದಂತೆ ಎಂದು ಲೋಕೇಶ್ ಸಾಗರ್ ಸ್ಮರಿಸಿಕೊಂಡರು.
ಕನ್ನಡ ಜಾಗೃತಿ ಸಮಿತಿ ನೂತನ ಸದಸ್ಯರಾದ ಎಸ್.ಮಹೇಶ್, ಭಾರತೀ ರಮೇಶ್, ರಜಿತಾ ಕಾರ್ಯಪ್ಪ ಮತ್ತು ಈ.ರಾಜು ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಸಾಹಿತಿ ಸಂಗೀತ ರವಿರಾಜ್ ಅವರ ‘ನಿರುತ್ತರ’ ಕವನ ಸಂಕಲನ ಹಾಗೂ ಕೃಪಾ ದೇವರಾಜು ಅವರ ಚೊಚ್ಚಲ ‘ಭಾವದ ಕದತಟಿ’್ಟ ಕೃತಿಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.
ಮಕ್ಕಳ ಸಣ್ಣ ಕಥೆಗಳ ಗೌರಮ್ಮ ದತ್ತಿ ಸ್ಪರ್ಧೆಯ ವಿಜೇತರಾದ ಎಚ್.ಧನಲಕ್ಷ್ಮಿ (ಪ್ರಥಮ), ವಿ.ಕೆ.ರಮ್ಯ (ದ್ವಿತೀಯ), ಎಚ್.ವಿ.ಸೋನ (ತೃತೀಯ), ಸಿ.ಪಿ.ಪ್ರೀತಮ್ (ಸಮಾಧಾನಕರ) ಇವರಿಗೆ ಬಹುಮಾನ ನೀಡಲಾಯಿತು.
ಕಸಾಪ ಮಡಿಕೇರಿ ತಾಲೂಕು ಅಧ್ಯಕ್ಷ ಕುಡೆಕಲ್ ಸಂತೋಷ್, ಲೇಖಕಿ ಕೃಪಾ ದೇವರಾಜ್ ಅವರ ಕೃತಿಯ ಬಗ್ಗೆ ಹಾಗೂ ಸುನಿತಾ ಲೋಕೇಶ್, ಸಂಗೀತಾ ರವಿರಾಜ್ ಅವರ ಕೃತಿಯ ಬಗ್ಗೆ ಮಾತನಾಡಿದರು. ಸೋಮವಾರಪೇಟೆ ತಾಲೂಕು ಅಧ್ಯಕ್ಷ ಎಸ್.ಜಿ.ಜವರಪ್ಪ, ಪ್ರಾಧ್ಯಾಪಕರಾದ ಕೋರನ ಸರಸ್ವತಿ ಇತರರು ಇದ್ದರು.
ಗೌರಮ್ಮ ಪ್ರಶಸ್ತಿ ಪಡೆದಿರುವ ಸ್ಮಿತಾ ಅಮೃತಾ ರಾಜ್, ಸಂಗೀತ ರವಿರಾಜ್, ಮಿಲನ ಭರತ್, ಕಾವೇರಿ ಪ್ರಕಾಶ್, ಶರ್ಮಿಳಾ ರಮೇಶ್, ಇತರರು ಇದ್ದರು. ಕುಶಾಲನಗರ ಕಸಾಪ ತಾಲೂಕು ಘಟಕದ ಅಧ್ಯಕ್ಷ ಎಂ.ಡಿ.ರಂಗಸ್ವಾಮಿ ಸ್ವಾಗತಿಸಿದರು. ಜಿಲ್ಲಾ ನಿರ್ದೇಶಕಿ ಉಷಾರಾಣಿ ನಿರೂಪಿಸಿದರು. ನಾಗರಾಜ ಶೆಟ್ಟಿ ವಂದಿಸಿದರು. ರಾಣಿ ರವೀಂದ್ರ ನಿರ್ವಹಣೆ ಮಾಡಿದರು.