ಸೋಮವಾರಪೇಟೆ, ಡಿ.24: ನಿನ್ನೆ ಸಂಜೆ ಹಾಗೂ ರಾತ್ರಿ ಸುರಿದ ಅಕಾಲಿಕ ಮಳೆಯಿಂದ ಕೃಷಿಕರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ತಾಲೂಕಿನಾದ್ಯಂತ ಭತ್ತ ಹಾಗೂ ಕಾಫಿ ಕೊಯ್ಲು ಕಾರ್ಯ ಪ್ರಗತಿಯಲ್ಲಿದ್ದು, ಇಂತಹ ಸಂದರ್ಭದಲ್ಲೇ ಮಳೆ ಬೀಳುತ್ತಿರುವರು ರೈತರ ನೆಮ್ಮದಿ ಕೆಡಿಸಿದೆ.

ನಿನ್ನೆ ಸುರಿದ ದಿಢೀರ್ ಮಳೆಯಿಂದಾಗಿ ಕಾಫಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಪಲ್ಪಿಂಗ್ ಮಾಡಿಸಿ ಒಣಗಿಸಲು ಹರಡಿದ್ದ ಬೇಳೆ, ಮಳೆ ನೀರಿನಿಂದ ತೊಯ್ದಿದ್ದು, ಮುಂದಿನ ಒಂದೆರಡು ದಿನಗಳ ಕಾಲ ಬಿಸಿಲಿನ ಬದಲಿಗೆ ಮಳೆಯಾದರೆ ಕಾಫಿ ಬೇಳೆ ಕಪ್ಪು ಬಣ್ಣಕ್ಕೆ ತಿರುಗಿ ಮೌಲ್ಯ ಕಳೆದುಕೊಳ್ಳುವ ಸಂಭವವಿದೆ.

ಇದರೊಂದಿಗೆ ಎಲ್ಲೆಡೆಯೂ ಕಾಫಿ ಕೊಯ್ಲು ಪ್ರಗತಿಯಲ್ಲಿದ್ದು, ಅಕಾಲಿಕವಾಗಿ ಮಳೆಯಾದರೆ ತೇವಾಂಶ ಹೆಚ್ಚಾಗಿ ಕಾಫಿ ಫಸಲು ಉದುರುವ ಆತಂಕವೂ ಇದೆ. ಇದರೊಂದಿಗೆ ಬೇಳೆ ಒಣಗದೇ ಹಾಗೆಯೇ ಉಳಿದರೆ ಮುಗ್ಗು ಬಂದು ಬೆಲೆ ಕಳೆದುಕೊಳ್ಳಲಿದೆ.

ಇನ್ನು ಬಹುತೇಕ ಕಡೆಗಳಲ್ಲಿ ಭತ್ತ ಕಟಾವು ಕಾರ್ಯ ನಡೆಯುತ್ತಿದ್ದು, ನಿನ್ನೆ ಸುರಿದ ಮಳೆಗೆ ಕೊಯ್ಲು ಮಾಡಿದ್ದ ಭತ್ತ ಗದ್ದೆಗೆ ಉದುರುತ್ತಿದೆ. ಇದರೊಂದಿಗೆ ಕಟಾವಿಗೆ ಬಾಕಿಯಾಗಿರುವ ಭತ್ತದ ಪೈರು ಮಳೆಗೆ ನೆಲಕ್ಕುರುಳಿದ್ದು, ಕೊಯ್ಲಿಗೆ ಸಮಸ್ಯೆಯಾಗಿದೆ.