ಸೋಮವಾರಪೇಟೆ, ಡಿ. 22: ಕಂದಾಯ ಇಲಾಖೆ ಸೇರಿದಂತೆ ಇತರ ಕೆಲ ಸರ್ಕಾರಿ ಇಲಾಖೆಗಳಲ್ಲಿ ರೈತರ ಶೋಷಣೆ ನಡೆಯುತ್ತಿದ್ದು, ಲಂಚವಿಲ್ಲದೆ ಆಸ್ತಿ ದಾಖಲಾತಿಗಳನ್ನು ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಕೆ.ಯು. ಚಂದ್ರಪ್ಪ ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಇಂತಹ ಶೋಷಣೆ ಯ ವಿರುದ್ಧ ರೈತರು ಸಂಘಟಿತರಾಗಿ ಹೋರಾಟ ಮಾಡಬೇಕಿದೆ. ಈ ಹಿನ್ನೆಲೆ ತಾಲೂಕಿನಲ್ಲಿ ರೈತ ಸಂಘವನ್ನು ಬಲಪಡಿಸಲು ಸದಸ್ಯತ್ವ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.
ಪ್ರಸ್ತುತ ದಿನಗಳಲ್ಲಿ ರೈತರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. ಕಂದಾಯ ಇಲಾಖೆ ಸೇರಿದಂತೆ ಇತರ ಕೆಲ ಇಲಾಖೆಗಳಲ್ಲಿ ರೈತರ ಶೋಷಣೆ ನಡೆಯುತ್ತಿದೆ. ಲಂಚವಿಲ್ಲದೆ ಆಸ್ತಿ ದಾಖಲಾತಿಗಳನ್ನು ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೋರಾಟ ತೀವ್ರ ಗೊಳಿಸದಿದ್ದರೆ, ಸರ್ಕಾರದ ಸವಲತ್ತು ಗಳನ್ನು ಪಡೆಯಲು ಸಾಧ್ಯವಾಗುವು ದಿಲ್ಲ. ಈ ನಿಟ್ಟಿನಲ್ಲಿ ರೈತರು ಒಗ್ಗಟ್ಟಾಗಬೇಕಿದೆ ಎಂದು ಅಭಿಪ್ರಾಯಿಸಿದರು.
ಗ್ರಾಮೀಣ ಭಾಗದ ರಸ್ತೆಗಳು ಗುಂಡಿಬಿದ್ದಿವೆ. ಕೃಷಿ ಫಸಲನ್ನು ಸಾಗಿಸಲು ಕಷ್ಟವಾಗುತ್ತಿದೆ. ಬಡ ರೈತರು ಆಶ್ರಯ ಯೋಜನೆಯಲ್ಲಿ ಮನೆ ಪಡೆಯಲು ಇಂತಿಷ್ಟು ಲಂಚ ಕೊಡಬೇಕಾಗಿದೆ. ರೈತರು ದೇಶದ ಬೆನ್ನೆಲುಬು ಎಂದು ಹೇಳುತ್ತಿರುವ ಸರ್ಕಾರ, ರೈತರ ಬೆನ್ನುಮೂಳೆಯನ್ನೇ ಮುರಿಯುತ್ತಿದೆ. ಪ್ರತಿವರ್ಷ ಮಳೆಹಾನಿಯಿಂದ ಫಸಲು ನಷ್ಟವಾಗುತ್ತಿದೆ. ಸರ್ಕಾರ ಸೂಕ್ತ ಪರಿಹಾರ ಕೊಡುತ್ತಿಲ್ಲ. ಬಹುತೇಕ ರೈತರಿಗೆ ಆಸ್ತಿ ದಾಖಲಾತಿ ಸಮಸ್ಯೆಯಿಂದ ಪರಿಹಾರ ಸಿಗುತ್ತಿಲ್ಲ. ಅಕ್ರಮ ಸಕ್ರಮದಲ್ಲಿ ದಾಖಲಾತಿಗಳನ್ನು ಮಾಡಿಕೊಡಲಾಗುತ್ತಿಲ್ಲ ಎಂದು ಗೋಷ್ಠಿಯಲ್ಲಿದ್ದ ಸಂಘದ ಗೌರವಾಧ್ಯಕ್ಷ ಕೆ.ಪಿ. ಬಸಪ್ಪ ಹೇಳಿದರು.
ರಾಜಕೀಯ ರಹಿತವಾಗಿ ರೈತ ಸಂಘವನ್ನು ಬಲಿಷ್ಠವಾಗಿ ಕಟ್ಟಿ ರೈತರ ಹಕ್ಕಿಗಾಗಿ ಹೋರಾಟ ಮಾಡಬೇಕಾಗಿದೆ. ಗ್ರಾಮೀಣ ಭಾಗದ ರೈತರು ಸ್ವಯಂಪ್ರೇರಿತರಾಗಿ ಸದಸ್ಯತ್ವ ಪಡೆಯಬೇಕೆಂದು ಉಪಾಧ್ಯಕ್ಷ ಎಂ.ಕೆ. ಕಾರ್ಯಪ್ಪ ಹೇಳಿದರು.
ಯುವ ರೈತರು ಸಂಘಟನೆಗೆ ಅವಶ್ಯವಾಗಿದೆ. ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟ ಯುವಕರಿಗೆ ಸ್ಪೂರ್ತಿಯಾಗಬೇಕು. ರೈತ ಸಂಘ ಬಲಿಷ್ಠವಾದರೆ ಎಲ್ಲಾ ಸೌಲಭ್ಯ ಸಿಗುತ್ತವೆ. ಇಲ್ಲದಿದ್ದರೆ ಮುಂದೊಂದು ದಿನ ಕೃಷಿ ಕ್ಷೇತ್ರವೇ ನಶಿಸಿ ಹೋಗಲಿದೆ ಎಂದು ಸಂಚಾಲಕ ಎಂ.ಬಿ. ಮಂದಣ್ಣ ಆತಂಕ ವ್ಯಕ್ತಪಡಿಸಿದರು. ಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಯು.ಪಿ. ಜಯ ಶಂಕರ್, ಸಲಹೆಗಾರ ಎ.ಎನ್. ಚಂಗಪ್ಪ ಉಪಸ್ಥಿತರಿದ್ದರು.