ಕಣವೆ, ಡಿ. 22: ಬಸವನಹಳ್ಳಿ ಯಲ್ಲಿರುವ ಸೋಮವಾರಪೇಟೆ ತಾಲೂಕು ಗಿರಿಜನ ದೊಡ್ಡಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಆರ್.ಕೆ. ಚಂದ್ರು ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯ ಆರಂಭದಲ್ಲಿ ಲೆಕ್ಕ ಪರಿಶೋಧನಾ ವರದಿಯಲ್ಲಿ ಉಲ್ಲೇಖವಾಗಿರುವ ಹಿಂದಿನ ಅಧ್ಯಕ್ಷ ರಾಜರಾವ್ ಅವರಿಂದ ರೂ. 31 ಲಕ್ಷ ಹಣ ದುರುಪಯೋಗ ಎಂಬ ಅಂಶದ ಕುರಿತು ಮಹಾಸಭೆಯಲ್ಲಿ ಮಾಹಿತಿ ನೀಡುವಂತೆ ಸಭೆಯಲ್ಲಿದ್ದ ಸಂಘದ ಸದಸ್ಯರಾದ ಎಂ. ನಂಜುಂಡಸ್ವಾಮಿ, ಪಾರ್ವತಮ್ಮ, ಗಂಗಾಧರ್ ಮೊದಲಾದವರು ಸಭಾಧ್ಯಕ್ಷ ಆರ್.ಕೆ. ಚಂದ್ರು ಅವರಲ್ಲಿ ಆಗ್ರಹಿಸಿದರು. ಹಣ ದುರುಪ ಯೋಗ ಮಾಡಿರುವವರ ವಿರುದ್ಧ ಕಠಿಣ ಕ್ರಮವಾಗಬೇಕು. ಸಂಘದಲ್ಲಿ ದುರುಪಯೋಗವಾಗಿರುವ ಹಣವನ್ನು ಕೂಡಲೇ ಕಟ್ಟಿಸಿ ಕೊಳ್ಳಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಸ್ಪಷ್ಟೀಕರಣ ನೀಡಿದ ಹಿಂದಿನ ಅಧ್ಯಕ್ಷ ಎಸ್.ಎನ್. ರಾಜರಾವ್, ಸಂಘದ ಸದಸ್ಯರಾದ ಗಿರಿಜನರು ಅರಣ್ಯದಲ್ಲಿ ಸಂಗ್ರಹಿಸಿದ ಸೀಗೆಕಾಯಿ ಖರೀದಿಸಲು, ಹಾಗೆಯೇ ಸಂಘದ ಕಟ್ಟಡದ ಮೇಲೆ ಮೇಲ್ಛಾವಣಿ ನಿರ್ಮಿಸಲು, ಹಾಗೆಯೇ ಸಂಘದ ಅವರಣದಲ್ಲಿ ನಿರ್ಮಿಸಲುದ್ದೇಶಿಸಿರುವ ರೂ 5 ಕೋಟಿ ವೆಚ್ಚದ ಕಟ್ಟಡ ಕಾಮಗಾರಿಯ ಕ್ರಿಯಾ ಯೋಜನೆ ಸಿದ್ಧಪಡಿಸಿ ಸರ್ಕಾರದ ಹಂತದಲ್ಲಿ ವ್ಯವಹಾರ ನಡೆಸಲು ಲಕ್ಷಾಂತರ ರೂಗಳ ಹಣ ವ್ಯಯವಾಗಿದೆ. ಇದು ದುರುಪಯೋಗವಲ್ಲ. ಸಂಘದ ಅಭಿವೃದ್ದಿಯ ನಿಟ್ಟಿನಲ್ಲಿ ನಾನು ವ್ಯಯ ಮಾಡಿರುವ ಹಣವನ್ನು ಕಳೆದು ಉಳಿದ ಹಣವನ್ನು ಸಂಘಕ್ಕೆ ಪಾವತಿಸಲು ಸಿದ್ಧನಿದ್ದೇನೆ ಎಂದು ಹೇಳಿದರು.
ಬಳಿಕ ಮಾಹಿತಿ ನೀಡಿದ ಸಭಾಧ್ಯಕ್ಷ ಆರ್.ಕೆ.ಚಂದ್ರು ಈ ಹಿಂದಿನ ಅವಧಿಯಲ್ಲಿನ ಸಂಘದ ಅಧ್ಯಕ್ಷ ರಾಜರಾವ್ ಹೇಳುವಂತೆ ಸಂಘದ ಹಣವನ್ನು ಬಳಕೆ ಮಾಡಿಕೊಂಡಿರುವ ಬಗ್ಗೆ ಸಂಘದಲ್ಲಿ ಯಾವುದೇ ದಾಖಲೆಗಳು ಇಲ್ಲ. ದಾಖಲೆಗಳಿದ್ದರೆ ಸಂಘಕ್ಕೆ ತಂದಿಡಲಿ. ಹಣ ದುರುಪಯೋಗದ ಬಗ್ಗೆ ಒಪ್ಪಿಕೊಳ್ಳಲಿ ಎಂದÀರು.
ನಂತರ ಮಾತನಾಡಿದ ರಾಜರಾವ್, ಲೆಕ್ಕಪರಿಶೋಧನಾ ವರದಿಯಲ್ಲಿರುವಂತೆ 31 ಲಕ್ಷ ರೂಗಳ ಹಣ ದುರುಪಯೋಗ ಖಂಡಿತ ತಪ್ಪು ಮಾಹಿತಿ. ಸಂಘದ ಅಭಿವೃದ್ದಿಯ ದೃಷ್ಟಿಯಿಂದ ನಾನು ಸಂಘದಲ್ಲಿದ್ದ ಹಣವನ್ನು ವ್ಯಯಿಸಿದ್ದೇನೆ. ನಾನು ಖರ್ಚು ಮಾಡಿದ ಹಣವನ್ನು ಕಳೆದು ಉಳಿದ ಹಣವನ್ನು ಕಟ್ಟಲು ಸಿದ್ಧನಿದ್ದೇನೆ ಎಂದು ಸಭೆಗೆ ಮಾಹಿತಿ ನೀಡಿದರು.
ಅಮಾಯಕ ಗಿರಿಜನರ ಹೆಸರಿನಲ್ಲಿ ಸಂಘವನ್ನು ಮುನ್ನಡೆಸುತ್ತಿರುವವರು ಸಂಘದ ಅಭಿವೃದ್ದಿ ಮರೆತು ಸ್ವಹಿತ ಸಾಧಿಸುತ್ತಿದ್ದು ಸಂಘವನ್ನು ನಷ್ಟದ ದಾರಿಯಲ್ಲಿ ಕೊಂಡೊಯ್ಯುತ್ತಿದ್ದಾರೆ ಎಂದು ಸದಸ್ಯರಾದ ನಂಜುಂಡಸ್ವಾಮಿ, ಪಾರ್ವತಮ್ಮ ಮತ್ತಿತರರು ಸಭೆಯಲ್ಲಿ ವಿಷಾದಿಸಿದರು.
ಸಂಘದ ಹಿರಿಯ ಸದಸ್ಯ ನಿಂಗನಾಯ್ಕ ಮಾತನಾಡಿ, ಲ್ಯಾಂಪ್ಸ್ ಗೆ ತನ್ನದೇ ಆದ ಹಿರಿಮೆ ಇದೆ. ಬದ್ಧತೆಯಿಲ್ಲದವರು ಆಡಳಿತ ಮಂಡಳಿಗೆ ಆಯ್ಕೆಯಾಗಿ ಸಂಘವನ್ನು ಹಾಳು ಮಾಡಬಾರದು. ಸಂಘಕ್ಕೆ ಅರಣ್ಯ, ಸಹಕಾರ ಹಾಗೂ ಲ್ಯಾಂಪ್ಸ್ ಇಲಾಖೆ ಅಧಿಕಾರಿಗಳು, ಅವಿದ್ಯಾವಂತ ಹಾಗೂ ಮುಗ್ಧ ಗಿರಿಜನರಿಗೆ ಸರ್ಕಾರದ ಸೌಲಭ್ಯಗಳ ಕುರಿತು ಮಾಹಿತಿ ನೀಡುವ ಮೂಲಕ ಗಿರಿಜನರನ್ನು ಅಭಿವೃದ್ದಿ ಪಡಿಸಲು ಸರ್ಕಾರ ನಾಮನಿರ್ದೇಶನ ಗೊಳಿಸುತ್ತದೆ ಆದರೆ ಮಹಾಸಭೆಗೆ ಯಾವೊಬ್ಬ ಪ್ರತಿನಿಧಿಯೂ ಧಾವಿಸದಿರುವುದು ಬೇಸರದ ಸಂಗತಿ ಎಂದರು.
ಸಭಾಧ್ಯಕ್ಷ ಆರ್.ಕೆ.ಚಂದ್ರು ಮಾತನಾಡಿ, ಕಾಡ್ಗಿಚ್ಚಿನಿಂದಾಗಿ ಅರಣ್ಯ ಉತ್ಪನ್ನಗಳಾದ ಜೇನು, ಸೀಗೆ, ಅಂಟುವಾಳ, ನೆಲ್ಲಿ ಮೊದಲಾದ ಕಿರು ಅರಣ್ಯ ಉತ್ಪನ್ನಗಳು ಕಡಿಮೆ ಯಾಗುತ್ತಿವೆ. ಈ ಉತ್ಪನ್ನಗಳನ್ನು ಸಂಗ್ರಹಿಸಿ ಸಂಘಕ್ಕೆ ತರುತ್ತಿದ್ದ ಕಾಡಂಚಿನ ಗಿರಿಜನರಿಗೂ ಆದಾಯ ವಿಲ್ಲ. ಇದರಿಂದಾಗಿ ಸಂಘಕ್ಕೆ ಆದಾಯದ ಮೂಲಗಳಿಲ್ಲದೆ ಸಂಘ ನಷ್ಟದ ಹಾದಿಯಲ್ಲಿದೆ. ಸಿಬ್ಬಂದಿಗಳಿಗೆ ವೇತನ ಕೊಡಲು ಕೂಡ ಸಂಕಷ್ಟವಾಗುತ್ತಿದೆ. ಆದರೂ ಕೂಡ ಹಿರಿಯರು ಕಟ್ಟಿದ ಸಂಘವನ್ನು ಮುಚ್ಚಲು ಬಿಡಬಾರದು. ಈಗಾಗಲೇ ದುರುಪಯೋಗವಾಗಿರುವ ಹಣವನ್ನು ವಸೂಲಿ ಮಾಡಬೇಕಿದೆ. ಈ ಹಿಂದೆಯೇ ರಾಜರಾವ್ ಲಿಖಿತವಾಗಿ ಒಪ್ಪಿಗೆ ನೀಡಿದ್ದು, ಲೆಕ್ಕಪರಿಶೋಧನಾ ವರದಿ ಬಂದ ಬಳಿಕ ಪಾವತಿ ಸುವುದಾಗಿ ಒಪ್ಪಿದ್ದಾರೆ ಎಂದು ಮಾಹಿತಿ ನೀಡಿದರು.
ಸಂಘದ ಉಪಾಧ್ಯಕ್ಷ ಬಿ.ಎನ್. ಮನು, ನಿರ್ದೇಶಕರಾದ ಸಿ.ಕೆ. ಉದಯಕುಮಾರ್, ಬಿ.ಎಂ. ಯಶೋಧ, ಬಿ.ಆರ್. ಸುರೇಶ್, ಅಣ್ಣಯ್ಯ, ಎಸ್.ಆರ್. ಕಮಲ, ಕಾವೇರಿ, ಸಂಘದ ಕಾರ್ಯ ನಿರ್ವಹಣಾಧಿಕಾರಿ ಬಿ.ಜಿ. ಹನಿ ಕುಮಾರ್, ಲೆಕ್ಕಿಗ ಯಶವಂತ ಮೊದಲಾದವರಿದ್ದರು.