ಸಿದ್ದಾಪುರ, ಡಿ. 22: ಕಳೆದ ಕೆಲವು ದಿನಗಳ ಹಿಂದೆ ಕಾಡಿಗೆ ಅಟ್ಟಲ್ಪಟ್ಟಿದ್ದ ಕಾಡಾನೆಗಳು ಇದೀಗ ಮತ್ತೆ ಕಾಫಿ ತೋಟಗಳಿಗೆ ಲಗ್ಗೆಯಿಟ್ಟು ಕಾಫಿ ತೋಟಗಳಲ್ಲಿ ಬೀಡುಬಿಟ್ಟು ದಾಂಧಲೆ ನಡೆಸುತ್ತಿವೆ. ನೆಲ್ಲಿಹುದಿಕೇರಿ ಗ್ರಾಮದ ನಲ್ವತ್ತೇಕರೆ, ನೆಲ್ಲಿಹುದಿಕೇರಿ, ಭಾಗದಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳನ್ನು ಅರಣ್ಯ ಇಲಾಖಾ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೇರಿ ಒಂದು ತಿಂಗಳ ಹಿಂದೆ ಕಾಫಿ ತೋಟದಿಂದ ಅರಣ್ಯಕ್ಕೆ ಅಟ್ಟಿದ್ದರು. ಆದರೆ ಕಾಡಾನೆಗಳು ಆಹಾರವನ್ನು ಅರಸಿಕೊಂಡು ಇದೀಗ ನೆಲ್ಲಿಹುದಿಕೇರಿ ಮೇರಿಲ್ಯಾಂಡ್ ಕಾಫಿ ತೋಟದಲ್ಲಿ ಬೀಡುಬಿಟ್ಟು ದಾಂಧಲೆ ನಡೆಸುತ್ತಿವೆ.

ಅಲ್ಲದೇ ನೆಲ್ಲಿಹುದಿಕೇರಿ ನಲ್ವತ್ತೇಕರೆ ಭಾಗದಲ್ಲಿ ಭತ್ತದ ಕೃಷಿ ಮಾಡಿದ ಗದ್ದೆಗಳಿಗೆ ಲಗ್ಗೆಯಿಟ್ಟು ಭತ್ತದ ಬೆಳೆಗಳನ್ನು ನಾಶಗೊಳಿಸಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳು ಹಣ್ಣಾದ ಕಾಫಿಗಳನ್ನು ತಿಂದು ರುಚಿ ಕಂಡುಕೊಂಡಿದ್ದು, ಕಾಫಿ ಫಸಲನ್ನು ನಾಶಗೊಳಿಸುತ್ತಿವೆ ಎಂದು ಬೆಳೆಗಾರರು ಅಳಲು ತೋಡಿಕೊಂಡಿದ್ದಾರೆ. ಅಲ್ಲದೇ ಕಾರ್ಮಿಕರು ಕೂಡ ಕಾಫಿ ತೋಟಗಳಿಗೆ ಕೆಲಸಕ್ಕೆ ತೆರಳಲು ಭಯಪಡುತ್ತಿದ್ದಾರೆ. ಕೂಡಲೇ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಕಾಡಿಗಟ್ಟಲು ಶಾಶ್ವತ ಯೋಜನೆಯನ್ನು ರೂಪಿಸಬೇಕೆಂದು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.