ಸುಂಟಿಕೊಪ್ಪ, ಡಿ.22: ಗ್ರಾಮ ಪಂಚಾಯಿತಿಯ ಮೊದಲ ಹಂತದ ಚುನಾವಣೆಯು ಮಂಗಳವಾರ ಬಿರುಸಿನಿಂದ ಸಾಗಿತ್ತು ಸುಂಟಿಕೊಪ್ಪ ದಲ್ಲಿ ಶಾಂತಿಯುತ ಮತದಾನ ನಡೆಯಿತು.

ಸುಂಟಿಕೊಪ್ಪ ಮಾದಾಪುರ ರಾಜ್ಯ ಹೆದ್ದಾರಿಯ ನಡುವೆ ಸಂತ ಅಂತೋಣಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 6 ಮತಗಟ್ಟೆಗಳಿದ್ದು, ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ 4 ಮತಗಟ್ಟೆ ಕೇಂದ್ರಗಳಿವೆ.

ಸುಂಟಿಕೊಪ್ಪದಲ್ಲಿ ಬೆಳಿಗ್ಗೆ 7 ಗಂಟೆಯಿಂದ ಪ್ರಾರಂಭವಾದ ಮತದಾನಕ್ಕೆ ಮೊದಲಿಗೆ ಹೆಚ್ಚಿನ ಮತದಾರರು ಸರತಿ ಸಾಲಿನಲ್ಲಿ ಕಂಡುಬಂದರು. ಆದರೆ 10 ಗಂಟೆಯ ನಂತರ ಮತದಾರರ ಸಂಖ್ಯೆ ಇಳಿಮುಖಗೊಂಡಿತ್ತು. ಆದರೆ ತೋಟ ಕೆಲಸ ಸೇರಿದಂತೆ ಇತರೆ ಕೆಲಸಗಳಿಗೆ ತೆರಳಿದ್ದ ಕಾರ್ಮಿಕರು ಮಧ್ಯಾಹ್ನದ ನಂತರ ಆಗಮಿಸಿದ್ದರಿಂದ ಬಹಳ ದೂರದ ವರೆಗೆ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.

ಸುಂಟಿಕೊಪ್ಪ ಮಾದಾಪುರ ರಾಜ್ಯ ಹೆದ್ದಾರಿಯಲ್ಲಿ ಅಭ್ಯರ್ಥಿಗಳು ತಮ್ಮ ಮತದಾರರೊಂದಿಗೆÀ ಮತಯಾಚನೆ ಮಾಡುತ್ತಿದ್ದರಿಂದ ವಾಹನಗಳ ಸಂಚಾರಕ್ಕೂ ತೊಡಕು ಉಂಟಾಗಿತ್ತು.

ಬೆಳಿಗ್ಗೆಯಿಂದ ಅಭ್ಯರ್ಥಿಗಳು ಮತ್ತು ಕಾರ್ಯಕರ್ತರುಗಳು ಮತಗಟ್ಟೆಯಿರುವ ಆವರಣದೊಳಗೆ ಮತ ಪ್ರಚಾರ ಮಾಡುತ್ತಿದ್ದರು. ಅದನ್ನು ಕಂಡ ಸುಂಟಿಕೊಪ್ಪ ಠಾಣಾಧಿಕಾರಿ ವೆಂಕಟರಮಣ ಮತ್ತು ಪೊಲೀಸರು ಎಚ್ಚರಿಕೆ ನೀಡಿ ಕಳುಹಿಸಿದರು. ನಂತರ ಮತ್ತೆ 100 ಮೀಟರಿನೊಳಗೆ ಮತದಾರರನ್ನು ಓಲೈಸುವ ಕೆಲಸದಲ್ಲಿ ನಿರತರಾಗಿದ್ದವರನ್ನು ಪುನಃ ಗದರಿಸಿ ಓಡಿಸಿದರು.

ಸುಂಟಿಕೊಪ್ಪದ ಎಲ್ಲ ಮತಗಟ್ಟೆಗಳಿಗೆ ಬೆಳಿಗ್ಗೆ 8.ಗಂಟೆಗೆ ಜಿಲ್ಲಾ ಉಪವಿಭಾಗಾಧಿಕಾರಿ ಈಶ್ವರ ಕುಮಾರ್ ಖಂಡು ಅವರು ಭೇಟಿ ನೀಡಿ ಪರಿಶೀಲಿಸಿದರು.

ಸುಂಟಿಕೊಪ್ಪದ 7 ವಾರ್ಡುಗಳು, ಹರದೂರು ಗ್ರಾ.ಪಂ.ಯ ಹರದೂರು, ಗುಂಡುಗುಟ್ಟಿ, ನಾಕೂರು ಕಾನ್‍ಬೈಲ್, ಕೊಡಗರಹಳ್ಳಿ, ಏಳನೇ ಹೊಸಕೋಟೆ ಗಳಲ್ಲಿ ಯಾವುದೇ ಗೊಂದಲಗಳಿಲ್ಲದೆ ಶಾಂತಿಯುತ ಮತದಾನ ನಡೆಯಿತು.

ಸಂಜೆ ವೇಳೆ ಮೈಸೂರು ರಾಷ್ಟ್ರೀಯ ಹೆದ್ದಾರಿ ಭೂಸ್ವಾಧೀನ ಪ್ರಾಧಿಕಾರ ಅಧಿಕಾರಿ ಹಾಗೂ ಚುನಾವಣಾ ವೀಕ್ಷಕರಾದ ದೇವರಾಜು ಹಾಗೂ ಪ್ರಮೋದ್ ಇವರುಗಳು ಭೇಟಿ ನೀಡಿದರು. - ರಾಜು ರೈ