ಸಿದ್ದರಾಮಯ್ಯ ಹೇಳಿಕೆಗೆ ಬೆಂಗಳೂರು ಸಮಾಜ ಖಂಡನೆ
ಮಡಿಕೇರಿ, ಡಿ. ೨೩: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಡವ ಜನಾಂಗದ ವಿರುದ್ಧ ನೀಡಿದ್ದ ಬಾಲಿಶ ಹೇಳಿಕೆಯನ್ನು ಬೆಂಗಳೂರು ಕೊಡವ ಸಮಾಜ ಖಂಡಿಸಿದೆ. ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಸಮಾಜದ ಅಧ್ಯಕ್ಷ ಮುಕ್ಕಾಟಿರ ಟಿ. ನಾಣಯ್ಯ ಅವರು ಹೇಳಿಕೆ ಬಗ್ಗೆ ವಿಷಾದ ವ್ಯಕ್ತಪಡಿಸಿದ ಮಾತ್ರಕ್ಕೆ ಜನಾಂಗಕ್ಕೆ ಆಗಿರುವ ನೋವನ್ನು ಸರಿಪಡಿಸಲು ಸಾಧ್ಯವಿಲ್ಲ. ಇವರಿಗೆ ಈ ನೆಲದ ಸನಾತನ ಧರ್ಮ- ಸಂಸ್ಕೃತಿ ಆಚರಣೆಗಳ ಬಗ್ಗೆ ತಾತ್ಸಾರವಿರುವಂತಿದೆ. ಈ ಹಿಂದೆಯೂ ಟಿಪ್ಪು ಜಯಂತಿ ಮೂಲಕ ಜನಾಂಗಕ್ಕೆ ಅಪಚಾರ ವೆಸಗಿದ್ದರು. ಇಂತಹ ಹಗುರ ಹೇಳಿಕೆ ವಿರುದ್ಧ ಮುಂದಿನ ದಿನಗಳಲ್ಲಿ ಎಲ್ಲರೂ ಒಟ್ಟಾಗಿ ಪಾಠ ಕಲಿಸಲಿದ್ದಾರೆ ಎಂದು ಹೇಳಿದ್ದಾರೆ.