ಕುಶಾಲನಗರ, ಡಿ. ೨೩ : ಪಟ್ಟಣದ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ (ಎಪಿಸಿಎಂಎಸ್) ೨೦೧೯-೨೦ನೇ ಸಾಲಿನ ವಾರ್ಷಿಕ ಮಹಾಸಭೆ ರೈತ ಸಹಕಾರ ಭವನದಲ್ಲಿ ನಡೆಯಿತು. ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಎಂ.ಎನ್. ಕುಮಾರಪ್ಪ, ಪ್ರಸಕ್ತ ಸಾಲಿನಲ್ಲಿ ಸಂಘ ಒಟ್ಟು ರೂ. ೯೭ ಕೋಟಿ ವಹಿವಾಟು ನಡೆಸಿ ರೂ. ೪೦.೧೧ ಲಕ್ಷ ನಿವ್ವಳ ಲಾಭ ಗಳಿಸಿದೆ.

ಸಂಘವು ಸೋಮವಾರಪೇಟೆ ತಾಲೂಕಿಗೆ ಪಡಿತರ ವಿತರಣೆಯ ಸಗಟು ನಾಮಿನಿ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ೧೦೦ ನ್ಯಾಯಬೆಲೆ ಅಂಗಡಿಗೆ ಪಡಿತರ ವಿತರಣೆ ಮಾಡಲಾಗುತ್ತಿದೆ. ಕುಶಾಲನಗರ ಮುಖ್ಯ ರಸ್ತೆಯಲ್ಲಿ ವ್ಯಾಪಾರ ಸಂಕೀರ್ಣ ಹೊಂದಿದ್ದು, ಗ್ರಾಹಕರ ಶಾಖೆ, ಸ್ಟೇಷನರಿ, ಗೊಬ್ಬರ, ಕ್ರಿಮಿನಾಶಕ, ಬಿತ್ತನೆಬೀಜ, ಕೋವಿ-ತೋಟಾ, ಜನತಾ ಬಜಾರ್ ಮೆಡಿಕಲ್ಸ್, ಹಾಗೂ ೨ ಸುಸಜ್ಜಿತ ಸಭಾಂಗಣಗಳು ಹಾಗೂ ೧೦ ವಸತಿ ಗೃಹಗಳನ್ನು ಹೊಂದಿದೆ. ಹಲವು ಹೊಸ ಯೋಜನೆಗಳ ಬಗ್ಗೆ ಚಿಂತನೆ ಹರಿಸಲಾಗಿದ್ದು ಸರಕಾರದಿಂದ ದೊರೆಯುವ ಆರ್ಥಿಕ ಸೌಲಭ್ಯವನ್ನು (ನಬಾರ್ಡ್) ಬಳಸಿಕೊಂಡು ಶೀತಲೀಕರಣ ಘಟಕ ಸ್ಥಾಪನೆ, ಸಂಘದ ಹಾಲಿ ಕಚೇರಿಯ ಮೇಲ್ಬಾಗದಲ್ಲಿ ೫೦x೪೦ ಅಳತೆಯ ಮೀಟಿಂಗ್ ಸಭಾಂಗಣ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು.

ಸಂಘವು ಸ್ವಂತ ಕಚೇರಿ ಕಟ್ಟಡ ಹಾಗೂ ವ್ಯಾಪಾರ ಸಂಕೀರ್ಣ ಹೊಂದಿದ್ದು ವಾರ್ಷಿಕ ಅಂದಾಜು ರೂ ೧ ಕೋಟಿ ೨೦ ಸಾವಿರಗಳಷ್ಟು ಬಾಡಿಗೆ ಆದಾಯ ಬರುತ್ತಿದೆ, ಸಂಘದ ಕಚೇರಿಯಲ್ಲಿ ಅಳವಡಿಸಿರುವ ೪೨ ಕೆವಿ ಸಾಮರ್ಥ್ಯದ ಸೋಲಾರ್ ವಿದ್ಯುತ್ ಉತ್ಪಾದನಾ ಘಟಕದಿಂದ ೨೦೧೯-೨೦೨೦ ನೇ ಸಾಲಿನಲ್ಲಿ ರೂ. ೩ ಲಕ್ಷದ ೪೯ ಸಾವಿರ ಆದಾಯ ಲಭಿಸಿದೆ ಎಂದು ತಿಳಿಸಿದರು.

ಸಂಘದ ಸದಸ್ಯರಿಗೆ ಮರಣ ನಿಧಿ ಸ್ಥಾಪನೆ ಕುರಿತು ಸಭೆಯಲ್ಲಿ ಚರ್ಚೆಗಳು ನಡೆಯಿತು. ಸಂಘದ ಕಾರ್ಯವ್ಯಾಪ್ತಿಯಲ್ಲಿ ಬರುವ ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಓದಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಟಿ.ಬಿ.ಜಗದೀಶ್, ನಿರ್ದೇಶಕರುಗಳು ಸೇರಿದಂತೆ ಸಂಘದ ಕಾರ್ಯದರ್ಶಿ ಬಿ.ಎಂ.ಪಾರ್ವತಿ ಇದ್ದರು.