ಕುಶಾಲನಗರ, ಡಿ. 22: ಕುಶಾಲನಗರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ 2019-20ನೇ ಸಾಲಿನಲ್ಲಿ ಒಟ್ಟು ರೂ. 97 ಕೋಟಿ ವಹಿವಾಟು ನಡೆಸಿ ರೂ. 40.11 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಎಂ.ಎನ್. ಕುಮಾರಪ್ಪ ತಿಳಿಸಿದರು.
ಸಂಘದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಸಂಘವು ಕಳೆದ 77 ವರ್ಷ ಗಳಿಂದ ಸಾದ್ವಿಕ ಸೇವೆಯನ್ನು ತನ್ನ ಸದಸ್ಯರಿಗೆ ಹಾಗೂ ಸದಸ್ಯರೇತರರಿಗೆ ನೀಡುತ್ತಾ ಜಿಲ್ಲೆಯಲ್ಲಿ ಉತ್ತಮ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಂಘ 1693 ಸದಸ್ಯರನ್ನು ಹೊಂದಿದ್ದು ರೂ. 17.25 ಲಕ್ಷ ಪಾಲು ಬಂಡವಾಳ, ರೂ. 682.54 ಲಕ್ಷ ಠೇವಣಿ, ರೂ. 192.10 ಲಕ್ಷ ನಿಧಿಗಳನ್ನು ಹೊಂದಿದೆ. ರೂ. 540.80 ಲಕ್ಷ ಸಾಲ ನೀಡಲಾ ಗಿದ್ದು ರೂ. 12.65 ಕೋಟಿ ವ್ಯಾಪಾರ ವಹಿವಾಟು ಮೂಲಕ ರೂ. 59.88 ಲಕ್ಷ ವ್ಯಾಪಾರ ಲಾಭ ಗಳಿಸಿದೆ ಎಂದು ತಿಳಿಸಿದರು.
ಸಂಘವು ಸೋಮವಾರಪೇಟೆ ತಾಲೂಕಿಗೆ ಪಡಿತರ ವಿತರಣೆಯ ಸಗಟು ನಾಮಿನಿ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದ್ದು, 100 ನ್ಯಾಯಬೆಲೆ ಅಂಗಡಿಗೆ ಪಡಿತರ ವಿತರಣೆ ಮಾಡಲಾಗುತ್ತಿದೆ. ಕುಶಾಲನಗರ ಮುಖ್ಯ ರಸ್ತೆಯಲ್ಲಿ ವ್ಯಾಪಾರ ಸಂಕೀರ್ಣ ಹೊಂದಿದ್ದು, ಗ್ರಾಹಕರ ಶಾಖೆ, ಸ್ಟೇಷನರಿ, ಗೊಬ್ಬರ, ಕ್ರಿಮಿನಾಶಕ, ಬಿತ್ತನೆಬೀಜ, ಕೋವಿ ತೋಟಾ, ಜನತಾ ಬಜಾರ್ ಮೆಡಿಕಲ್ಸ್, 2 ಸುಸಜ್ಜಿತ ಸಭಾಂಗಣಗಳು ಹಾಗೂ 10 ವಸತಿ ಗೃಹಗಳನ್ನು ಹೊಂದಿದೆ.
ಸಂಘದ ಕಾರ್ಯವ್ಯಾಪ್ತಿ ಕುಶಾಲನಗರ ಮತ್ತು ಸುಂಟಿಕೊಪ್ಪ ಹೋಬಳಿಗೆ ಸೀಮಿತವಾಗಿದೆ. ಸಂಘವು ಸ್ವಂತ ಕಚೇರಿ ಕಟ್ಟಡ ಹಾಗೂ ವ್ಯಾಪಾರ ಸಂಕೀರ್ಣ ಹೊಂದಿದ್ದು ವಾರ್ಷಿಕ ಅಂದಾಜು ರೂ. 1 ಕೋಟಿ 20 ಸಾವಿರಗಳಷ್ಟು ಬಾಡಿಗೆ ಆದಾಯ ಬರುತ್ತಿದೆ. ಸಂಘದ ಕಚೇರಿಯಲ್ಲಿ ಅಳವಡಿಸಿರುವ 42 ಕೆ.ವಿ. ಸಾಮರ್ಥ್ಯದ ಸೋಲಾರ್ ವಿದ್ಯುತ್ ಉತ್ಪಾದನಾ ಘಟಕದಿಂದ 2019-2020ನೇ ಸಾಲಿನಲ್ಲಿ ರೂ. 3 ಲಕ್ಷದ 49 ಸಾವಿರ ಆದಾಯ ಲಭಿಸಿದೆ.
ಸಂಘದ ಕಾರ್ಯವ್ಯಾಪ್ತಿಯಲ್ಲಿ ಬರುವ ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಅಭ್ಯಸಿಸುವ 10ನೇ ತರಗತಿ ಮತ್ತು ಪಿ.ಯು.ಸಿ. ವಿಭಾಗದಲ್ಲಿ ಅತಿ ಹೆಚ್ಚು ಅಂಕ ಪಡೆಯುವ ಇಬ್ಬರು ವಿದ್ಯಾರ್ಥಿಗಳಿಗೆ ಮಹಾಸಭೆಯಲ್ಲಿ ಪ್ರಥಮ ಬಹುಮಾನ ರೂ. 5000 ದ್ವಿತೀಯ ಬಹುಮಾನ ರೂ. 3000 ನಗದು ವಿತರಿಸಲಾಗುತ್ತಿದೆ. ಸಂಘದ ಕಾರ್ಯವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಶಾಲೆಯ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ 5 ಕಡು ಬಡ ವಿದ್ಯಾರ್ಥಿಗಳಿಗೆ ಸಂಘದ ವತಿಯಿಂದ ಉಚಿತ ಟ್ಯಾಬ್ ವಿತರಿಸುವ ಯೋಜನೆ ಹಾಕಿಕೊಳ್ಳ ಲಾಗಿದೆ.
ಹಲವು ಹೊಸ ಯೋಜನೆಗಳ ಬಗ್ಗೆ ಚಿಂತನೆ ಹರಿಸಲಾಗಿದ್ದು ಸರ್ಕಾರದಿಂದ ದೊರೆಯುವ ಆರ್ಥಿಕ ಸೌಲಭ್ಯವನ್ನು (ನಬಾರ್ಡ್) ಬಳಸಿ ಕೊಂಡು ಶೀಥÀಲೀಕರಣ ಘಟಕ ಸ್ಥಾಪನೆ, ಸಂಘದ ಹಾಲಿ ಕಚೇರಿಯ ಮೇಲ್ಬಾಗದಲ್ಲಿ 50x40 ಅಳತೆಯ ಮೀಟಿಂಗ್ ಸಭಾಂಗಣ ನಿರ್ಮಾಣಕ್ಕೆ ಮಹಾಸಭೆಯ ಅನುಮತಿ ಮೇರೆಗೆ ಕೈಗೊಳ್ಳಲಾಗುವುದು. ಕಳೆದ ಮಹಾಸಭೆಯಲ್ಲಿ ಚರ್ಚಿಸಿದಂತೆ ರೈತ ಸಹಕಾರ ಭವನದಲ್ಲಿ ವೆಜ್ (ಸಸ್ಯಹಾರಿ) ಅಡುಗೆ ಕೊಠಡಿಯನ್ನು ಹಾಗೂ ಪಾತ್ರೆಗಳನ್ನು ಸಹ ಪ್ರತೇಕವಾಗಿ ಇಡುವ ವ್ಯವಸ್ಥೆ ಕೈಗೊಳ್ಳಲು 2019-20ನೇ ಸಾಲಿನ ಲಾಭಾಂಶ ವಿಂಗಡಣೆಯಲ್ಲಿ ರೂ. 4 ಲಕ್ಷದ 56 ಸಾವಿರದಷ್ಟು ಕಾಯ್ದಿರಿಸಲಾಗಿದೆ.
2019-2020ನೇ ಸಾಲಿನ ವಾರ್ಷಿಕ ಮಹಾಸಭೆ ಡಿ. 23 ರಂದು ರೈತ ಸಹಕಾರ ಭವನದದಲ್ಲಿ ಹಮ್ಮಿಕೊಳ್ಳಲಾಗಿದ್ದು ಸಂಘದ ಸದಸ್ಯರಿಗೆ ಶೇ. 25 ರಷ್ಟು ಡಿವಿಡೆಂಡ್ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಟಿ.ಬಿ. ಜಗದೀಶ್, ನಿರ್ದೇಶಕರುಗಳಾದ ಕೆ.ಎಂ. ಪ್ರಸನ್ನ, ನೀಲಮ್ಮ .ಎ.ಪಿ ಆರ್.ಕೆ. ಚಂದ್ರ, ಕೆ.ಎಸ್. ರತೀಶ್, ಹೆಚ್.ಟಿ. ನಾಗೇಶ್, ಪಿ.ಪಿ. ತಿಲಕ್‍ಕುಮಾರ್, ಹೆಚ್.ಜೆ. ದೊಡ್ಡಯ್ಯ, ಹೆಚ್.ಟಿ. ಮೋಹನ್, ಸಿ.ಜಿ. ಲತಾ, ಮೊಹಮ್ಮದ್ ಸಾಲೇಹ್, ಡಿ.ಸಿ.ಸಿ. ಬ್ಯಾಂಕ್ ನಾಮಿನಿ ಉಷಾ ತೇಜಸ್ವಿ, ಕಾರ್ಯದರ್ಶಿ ಬಿ.ಎಂ. ಪಾರ್ವತಿ ಇದ್ದರು.