ಮಡಿಕೇರಿ, ಡಿ. ೨೩ : ಮಡಿಕೇರಿ ನಗರಕ್ಕೆ ಕಗ್ಗಂಟಾಗಿರುವ ಕಸದ ಸಮಸೈ ಬಗೆಹರಿಸುವ ನಿಟ್ಟಿನಲ್ಲಿ ಮುಂದಿನ ನಾಲ್ಕು ವಾರಗಳಲ್ಲಿ ಜಾಗ ನಿಗದಿಪಡಿ ಸುವಂತೆ ರಾಜ್ಯ ಉಚ್ಚ ನ್ಯಾಯಾಲಯ ಸರಕಾರ ಹಾಗೂ ನಗರಸಭೆಗೆ ಗಡುವು ನೀಡಿದೆ.
ಮಡಿಕೇರಿ ನಗರದಲ್ಲಿ ಉದ್ಭವಿಸಿರುವ ಕಸ, ತ್ಯಾಜ್ಯ ವಿಲೇವಾರಿ ಸಮಸ್ಯೆ ಸಂಬAಧ ನಗರದ ಸುಬ್ರಮಣ್ಯ ನಗರ, ರೈಫಲ್ ರೇಂಜ್, ವಿದ್ಯಾನಗರ ಹಾಗೂ ಕನ್ನಿಕಾ ಬಡಾವಣೆಯ ನಿವಾಸಿಗಳು ಎಸ್ ಆರ್ ವಿ ಕೆ ಸಂಘದ ಮೂಲಕ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಸಂಬAಧ ನ್ಯಾಯಾಲಯ ಕಸ ವಿಲೇವಾರಿಗೆ ಸೂಕ್ತ ಜಾಗ ಗುರುತಿಸುವಂತೆ ನಗರಸಭೆಗೆ ಸೂಚನೆ ನೀಡಿತ್ತು. ಎಸ್ಆರ್ವಿಕೆ ಸಂಘದ ಸದಸ್ಯರು ನಗರಸಭೆ ಆಯುಕ್ತರು ಹಾಗೂ ತಹಶೀಲ್ದಾರರನ್ನು ಕರೆದೊಯ್ದು ಎರಡನೇ ಮೊಣ್ಣಂಗೇರಿ ವ್ಯಾಪ್ತಿಯಲ್ಲಿ ಜಾಗ ಗುರುತಿಸಿದ್ದರು. ಈ ಬಗ್ಗೆ ನಗರಸಭೆಯ ವಕೀಲರು ನ್ಯಾಯಾಲಯದಲ್ಲಿ ಪ್ರಸ್ತಾಪಿಸಿ ಸರಕಾರದ ಮೂಲಕ ಜಾಗ ಮಂಜೂರು ಮಾಡಿಸಿಕೊಡುವಂತೆ ಕೋರಿಕೆ ಸಲ್ಲಿಸಿದ್ದರು. ಈ ಬಗ್ಗೆ ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ಸರಕಾರಿ ವಕೀಲರಿಗೆ ಸೂಚಿಸಿದ್ದ ನ್ಯಾಯಾಲಯ ವಿಚಾರಣೆಯನ್ನು ತಾ.೨೨ಕ್ಕೆ ನಿಗದಿಪಡಿಸಿತ್ತು.
ಈ ಹಿನ್ನೆಲೆಯಲ್ಲಿ ವಿಚಾರಣೆ ಕೈಗೆತ್ತಿಕೊಂಡ ಹಿರಿಯ ನ್ಯಾಯಾಧೀಶ ಅಭಯ್ ಶ್ರೀನಿವಾಸ್ ಒಕ ಹಾಗೂ ವಿಶ್ವಜಿತ್ ಶೆಟ್ಟಿ ಅವರುಗಳನ್ನೊಳ ಗೊಂಡ ವಿಭಾಗೀಯ ಪೀಠ ಜಾಗ ಮಂಜೂರಾತಿ ಬಗ್ಗೆ ಸರಕಾರೀ ವಕೀಲರಾದ ವಿಜಯಕುಮಾರ್ ಪಾಟೀಲ ಅವರಲ್ಲಿ ಸಮಜಾಯಿಷಿಕೆ ಬಯಸಿದ ಸಂದರ್ಭ ವಕೀಲರು ಪ್ರಸ್ತುತ ಚುನಾವಣಾ ಸಮಯವಾ ಗಿರುವದರಿಂದ ಅಧಿಕಾರಿ ವರ್ಗದವರು ಚುನಾವಣಾ ಕಾರ್ಯನಿಮಿತ್ತ ಕೆಲಸ ಕಾರ್ಯಗಳಲ್ಲಿ ತೊಡಗಿರುವದರಿಂದ ಪ್ರಕ್ರಿಯೆ ಮುನ್ನಡೆಸಲು ವಿಳಂಬವಾಗಿದೆ. ಈ ಹಿನ್ನೆಲೆಯಲ್ಲಿ ನಾಲ್ಕು ವಾರಗಳ ಕಾಲಾವಕಾಶ ಕೋರಿದರು. ವಕೀಲರ ಕೋರಿಕೆಗೆ ಮನ್ನಣೆ ನೀಡಿದ ನ್ಯಾಯಾಧೀಶರು ನಾಲ್ಕು ವಾರಗಳ ಕಾಲಾವಕಾಶ ನೀಡಿ ವಿಚಾರಣೆಯನ್ನು ಮುಂದೂಡಿದರು.
ಒಳಚರAಡಿ ಮುಗಿಸಿ :
ಈ ನಡುವೆ ಮಡಿಕೇರಿ ನಗರದಲ್ಲಿ ಕೈಗೊಳ್ಳಲಾಗಿರುವ ಒಳಚರಂಡಿ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಸಂಸ್ಕರಣಾ ಘಟಕ ನಿರ್ಮಾಣವಾಗಿಲ್ಲ, ಇದರಿಂದಾಗಿ ನಗರದಲ್ಲಿ ಮತ್ತೆ ತ್ಯಾಜ್ಯ ಸಮಸ್ಯೆ ತಲೆದೋರಲಿದೆ. ಈ ಪ್ರಕ್ರಿಯೆಯನ್ನೂ ಕೂಡ ಪೂರ್ಣ ಗೊಳಿಸುವಂತೆ ಎಸ್ಆರ್ವಿಕೆ ಪರ ವಕೀಲರಾದ ಅನುಚಂಗಪ್ಪ ನ್ಯಾಯಾಲಯದ ಗಮನಕ್ಕೆ ತಂದರು. ಪ್ರತಿಕ್ರಿಯಿಸಿದ ನಗರಸಭೆ ಪರ ವಕೀಲರಾದ ಅನುಸೂಯದೇವಿ ಅವರು, ಈಗ ಸ್ಟೋನ್ ಹಿಲ್ ಬಳಿ ಸಂಗ್ರಹವಾಗಿರುವ ಕಸ ವಿಲೇವಾರಿ ಮಾಡಲು ಕನಿಷ್ಟ ಒಂದು ವರ್ಷ ಕಾಲಾವಧಿ ಬೇಕಾಗಲಿದೆ. ಕಸ ವಿಲೇವಾರಿ ಬಳಿಕ ಒಳಚರಂಡಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟರು.
ಕಸ, ತ್ಯಾಜ್ಯ ಸಮಸ್ಯೆ ವಿಚಾರವನ್ನು ನ್ಯಾಯಾಲಯವು ಗಂಭೀರವಾಗಿ ಪರಿಗಣಿಸಿರುವದರಿಂದ ಸದ್ಯದಲ್ಲೇ ಸಮಸ್ಯೆ ಬಗೆಹರಿಯುವ ಸೂಚನೆ ಕಂಡು ಬರುತ್ತಿದೆ.