ಶನಿವಾರಸಂತೆ, ಡಿ. 21: ಪಟ್ಟಣದ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ಪ್ರಗತಿ ಪಥದತ್ತ ಸಾಗುತ್ತಿದ್ದು, 2019-20ನೇ ಸಾಲಿಗೆ ರೂ. 15,53,949 ಲಕ್ಷ ಲಾಭಗಳಿಸಿದೆ ಎಂದು ಆಡಳಿತ ಮಂಡಳಿ ಅಧ್ಯಕ್ಷ ಜಿ.ಜಿ. ಪರಮೇಶ ಹೇಳಿದರು.

ಸಂಘವು ರೈತೋಪಯೋಗಿ ವಸ್ತುಗಳನ್ನು ವ್ಯಾಪಾರ ಮಾಡುತ್ತಿದ್ದು ನಿಯಂತ್ರಿತ ಬೆಳೆಯ ಸಾಮಗ್ರಿಗಳನ್ನು ರಸಗೊಬ್ಬರಗಳನ್ನು ಹಾಗೂ ಇತರ ಅಗತ್ಯ ಸಾಮಗ್ರಿಗಳಾದ ಪ್ಲಾಸ್ಟಿಕ್, ಕ್ರಿಮಿನಾಶಕ, ವ್ಯವಸಾಯ ಹತ್ಯಾರು, ಕೋವಿ-ತೋಟಗಳು, ಸುಣ್ಣ, ಪಶು ಆಹಾರ ಇತ್ಯಾದಿಗಳನ್ನು ಸಂಘದಲ್ಲೇ ಕೊಂಡುಕೊಂಡಲ್ಲಿ ಸಂಘ ಇನ್ನಷ್ಟು ಹೆಚ್ಚಿನ ಲಾಭದಾಯಕವಾಗುತ್ತಿತ್ತು. ಸದಸ್ಯರು, ಸದಸ್ಯೇತರು ಸಂಪೂರ್ಣ ಸಹಕಾರ ನೀಡುವಂತೆ ಹಾಗೂ ಪ್ರತಿ ವರ್ಷ ಮಹಾಸಭೆ ನಡೆಸಲು ಸ್ಥಳೀಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣ ಬಿಟ್ಟುಕೊಡುತ್ತಿರುವ ಬಗ್ಗೆ ಕೃತಜ್ಞತೆ ಸಲ್ಲಿಸಿದರು.

ಸಂಘದ ಸದಸ್ಯರುಗಳಾದ ಆರ್.ಪಿ. ಲಕ್ಷ್ಮಣ, ಮುತ್ತಪ್ಪ, ಚಂದ್ರೇಗೌಡ, ಸಿ.ಕೆ. ಕುಮಾರಪ್ಪ, ಪ್ರೇಮನಾಥ, ಪುಟ್ಟಪ್ಪ, ಸುಬ್ಬಪ್ಪ, ಮಹಮ್ಮದ್ ಪಾಶ ಚರ್ಚೆಯಲ್ಲಿ ಭಾಗವಹಿಸಿ ಅಧಿಕೃತ ಬಿತ್ತನೆ ಬೀಜಗಳನ್ನು ಮಾರಾಟ ಮಾಡಿದ್ದಲ್ಲಿ ರೈತರಿಗೆ ಅನುಕೂಲವಾಗುತ್ತದೆ. ಹಾಸನ ಕೋಮಾರ್ಕ್, ಕಾಫಿ ಖರೀದಿ ಮಾಡುತ್ತಿದೆ. ಬೆಳೆಗಾರರು ನಮ್ಮ ಸದಸ್ಯರು ಸಂಸ್ಥೆಗೆ ಕಾಫಿ ಕೊಡುವಂತೆ ಕೋರಿದರು. ಸಭೆಯಲ್ಲಿ ನಿಡ್ತ ಗ್ರಾಮದ ವಿದ್ಯಾರ್ಥಿನಿ ಎನ್.ಎಂ. ಮೇನಕ ಬಸವನಹಳ್ಳಿ ಮೊರಾರ್ಜಿ ವಸತಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿ ಎಸ್.ಎಸ್.ಎಲ್.ಸಿ.ಯಲ್ಲಿ ಶೇ. 95, ನಿಡ್ತ ಗ್ರಾಮದ ಎನ್.ಎಂ. ತನುಶ್ರೀ ಶನಿವಾರಸಂತೆ ವಿಘ್ನೇಶ್ವರ ಬಾಲಿಕಾ ಪ್ರೌಢಶಾಲೆಯ ಪಿ.ಯು.ಸಿ.ಯಲ್ಲಿ ಶೇ. 78.68 ಹಾಗೂ ಗೋಪಾಲಪುರ ಜಿ.ಪಿ. ತೇಜಸ್ವಿನಿ ಗರಗಂದೂರು ಮೊರಾರ್ಜಿ ವಸತಿ ಶಾಲೆಯ ಪಿ.ಯು.ಸಿ.ಯಲ್ಲಿ ಶೇ. 76 ರಷ್ಟು ಅಂಕಗಳಿಸಿದ ವಿದ್ಯಾರ್ಥಿನಿಯರನ್ನು ಹಾಗೂ ಸಂಘದ ಮಾಜಿ ನೌಕರ ಹೆಚ್.ಬಿ. ನಟೇಶ್ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಸಭೆಯಲ್ಲಿ ಉಪಾಧ್ಯಕ್ಷ ಬಿ.ಎಸ್. ಮಂಜುನಾಥ್, ನಿರ್ದೇಶಕರುಗಳಾದ ಎಸ್.ಸಿ. ಶರತ್‍ಶೇಖರ್, ಡಿ.ಬಿ. ಧರ್ಮಪ್ಪ, ಹೆಚ್.ಪಿ. ಮಹಾಂತಪ್ಪ, ಗಿರಿಜಾಕರುಣಾಕರ್, ದೇವಾಂಬಿಕ ಮಹೇಶ್, ಎಸ್.ಜೆ. ರವಿಕುಮಾರ್, ಹೆಚ್.ಸಿ. ದೀಪಕ್, ಜಿ.ಬಿ. ಪರಮೇಶ್, ಹೆಚ್.ಎನ್. ಕುಮಾರ್, ರಾಮಯ್ಯ, ಎಸ್.ಎಸ್. ಸಾಗರ್ ಉಪಸ್ಥಿತರಿದ್ದರು. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎನ್.ಪಿ. ಶಿವರಾಜ್ ಸ್ವಾಗತಿಸಿ, ವರದಿ ಮಂಡಿಸಿದರು. ನಿರ್ದೇಶಕಿ ಗಿರಿಜಾ ಕರುಣಾಕರ್ ವಂದಿಸಿದರು.