ಇವರು ನಾಯಕಂಡ ಬೇಬಿ ಚಿಣ್ಣಪ್ಪ, ಪುದಿಯತಂಡ ಬಿ. ಜೋಯಪ್ಪ, ಚೋಂದವ್ವ ದಂಪತಿಗಳ ಪುತ್ರಿ. ಬೇಬಿಯವರು ಅರಮೇರಿ ಗ್ರಾಮದ ನಾಯಕಂಡ ಚಿಣ್ಣಪ್ಪ ಅವರನ್ನು ವಿವಾಹ ವಾಗಿದ್ದಾರೆ. ಇವರು ವೀರಾಜಪೇಟೆ ತಾಲೂಕಿನ ಕೆ. ಬೋಯಿಕೇರಿ ಗ್ರಾಮದಲ್ಲಿ ವಾಸವಾಗಿದ್ದಾರೆ. ಮಡಿಕೇರಿ ಆಕಾಶವಾಣಿಯಲ್ಲಿ ಇವರ ಹಲವಾರು ಚಿಂತನ ಕಾರ್ಯಕ್ರಮಗಳು, ಕೊಡವ ಸಿರಿ ಕಾರ್ಯಕ್ರಮದಲ್ಲಿ ಸಣ್ಣ ಕಥೆಗಳು, ಹಬ್ಬಗಳ ಮಹತ್ವಗಳು, ಮತ್ತು ಭಕ್ತಿ ಗೀತೆಗಳು ಪ್ರಸಾರವಾಗಿವೆ. ಓದುವುದು, ಬರೆಯುವುದು, ಕಸೂತಿ ಹೆಣೆಯುವುದು, ಪೆಯಿಟಿಂಗ್, ಹಾಡುಗಾರಿಕೆ ಇತ್ಯಾದಿಗಳ ಹವ್ಯಾಸಿ ಮನೆ-ಮನೆಯಿಂದ ಕಾವ್ಯಗೋಷ್ಠಿ ಸಂವರ್ಧಕ ಪರಿಷತ್ತಿನ ಹಲವಾರು ಕಾರ್ಯಕ್ರಮ ಮತ್ತು ರೇಡಿಯೋ ಕವನ ಮಾಲಿಕೆಗಳಲ್ಲಿಯೂ ಭಾಗವಹಿಸಿದ್ದಾರೆ.

ಇವರು ಕೊಡವ ಭಾಷೆಯಲ್ಲಿ ಹನ್ನೊಂದು ಸಾಂಸಾರಿಕ ಕಾದಂಬರಿಗಳನ್ನೂ ಕನ್ನಡದಲ್ಲಿ ಮೂರು ಕಾದಂಬರಿ, ಕವನ ಸಂಕಲನ ಮತ್ತು ಕಥೆಗಳನ್ನೂ ಲೋಕಾರ್ಪಣೆ ಮಾಡಿದ್ದಾರೆ. ಕೊಡಗಿನ ದಸರಾ ಬಹುಭಾಷಾ ಕವಿಗೋಷ್ಠಿ ಗಳಲ್ಲಿ, ಬೆಂಗಳೂರು, ಮಂಡ್ಯ ಮತ್ತಿತರೆಡೆಗಳಲ್ಲಿ ನಡೆದ ಕವಿಗೋಷ್ಠಿ, ದಸರಾ ಚುಟುಕು ಕವಿಗೋಷ್ಠಿ, ಕುಶಾಲನಗರದಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹೀಗೆ ಹಲವಾರು ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ಕೆ. ಬೋಯಿಕೇರಿ ಕಾವೇರಿ ಮಹಿಳಾ ಸಮಾಜದ ಅಧ್ಯಕ್ಷರಾಗಿ, ಕೊಡಗು ಜಿಲ್ಲಾ ಕೈಗಾರಿಕಾ ಸರಬರಾಜು ಮಾರಾಟ ಸಹಕಾರ ಸಂಘದ ಮಾಜಿ ಅಧ್ಯಕ್ಷರಾಗಿ, ತಾಲೂಕು ಮಹಿಳಾ ಒಕ್ಕೂಟದ ಮಾಜಿ ಅಧ್ಯಕ್ಷರಾಗಿ, ವೀರಾಜಪೇಟೆ ಕೊಡವ ಸಮಾಜದ ನಿರ್ದೇಶಕಿಯಾಗಿ ಹಾಗೂ ಇನ್ನೂ ಹಲವಾರು ಸಂಘ ಸಂಸ್ಥೆಗಳ ಸದಸ್ಯರಾಗಿ ನಿರ್ದೇಶಕಿಯಾಗಿ ಸಮಾಜ ಸೇವೆ ಮಾಡಿದ್ದಾರೆ.

ಇವರಿಗೆ ಬೆಂಗಳೂರಿನ ಕನ್ನಡ ಅಭಿವೃದ್ಧಿ ಬಳಗದ ವತಿಯಿಂದ ಕುವೆಂಪು ಶ್ರೀ ಪ್ರಶಸ್ತಿ, ಮಂಡ್ಯದ ಕವಿ ಕಾವ್ಯ ಶ್ರೀ ಪ್ರಶಸ್ತಿ,ಹಾಗೂ ಕೊಡಗು ಜಿಲ್ಲಾ ಲೇಖಕರ ಬಳಗದ ವತಿಯಿಂದ ಸನ್ಮಾನ, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಹಾಗೂ ತಾಲೂಕು ಘಟಕಗಳಿಂದ ಸನ್ಮಾನ, ಕೊಡವ ಸಮಾಜ ಬೆಂಗಳೂರು, ಕೆ ಬೋಯಿಕೇರಿ ಗ್ರಾಮದ ಕೊಡವಕೇರಿ ಇವರಿಂದ ನಾಯಕಂಡ ಕುಟುಂಬದ ವತಿಯಿಂದ, ವೀರಾಜಪೇಟೆ ಮಹಿಳಾ ಸಮಾಜದ ವತಿಯಿಂದ ವರ್ಷದ ಮಹಿಳೆಯೆಂದು ಮತ್ತು ಈಗಿನ ಕುಶಾಲನಗರ ತಾಲೂಕಿನ ಕಣಿವೆ ಗ್ರಾಮದಲ್ಲಿ ನಡೆದ ಕೊಡಗು ಜಿಲ್ಲಾ ಪ್ರಥಮ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ, ಹಾಗೂ ವೀರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ 2019 ರ ಸಮ್ಮೇಳನಾಧ್ಯಕ್ಷರಾಗಿ ಗೌರವ ಸನ್ಮಾನ ಸ್ವೀಕರಿಸಿದ್ದಾರೆ. ಇವರಿಗೆ ಮೂವರು ಪುತ್ರಿಯರು ಮತ್ತು ಓರ್ವ ಪುತ್ರ ಇದ್ದಾರೆ. "ನಾವು ಸುಮ್ಮನೆ ಸಮಯವನ್ನು ವ್ಯರ್ಥ ಮಾಡದೇ ಓದು ಬರಹ ಮತ್ತು ಇನ್ನಿತರ ಸಾಹಿತ್ಯಿಕ ಸಾಂಸ್ಕøತಿಕ ಮತ್ತು ಸಮಾಜ ಸೇವೆಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ನಮ್ಮನ್ನು ತೊಡಗಿಸಿಕೊಂಡರೆ ನಿಜವಾಗಿಯೂ ಬದುಕಿನಲ್ಲಿ ಶ್ರೇಯಸ್ಸು ಕಾಣಬಹುದು. ಸಮಯ ವೆಂಬುದು ಬಹು ಅಮೂಲ್ಯ. ದಯವಿಟ್ಟು ಸಮಯಾವಕಾಶ, ಸದಾವಕಾಶವನ್ನು ಬಳಸಿಕೊಳ್ಳಲು ಇಂದಿನ ಕವಿ ಕವಯಿತ್ರಿಯರಿಗೆ ಕಿವಿಮಾತು ಹೇಳುತ್ತಾರೆ.

-ಪಿ. ಎಸ್. ವೈಲೇಶ್, ಕೊಡಗು.