ಕೂಡಿಗೆ, ಡಿ.21: ಕೂಡಿಗೆಯ ಸರಕಾರಿ ಹಂದಿ ಸಾಕಾಣಿಕೆ ಕೇಂದ್ರದಲ್ಲಿ ಕಳೆದ ಆರು ತಿಂಗಳ ಹಿಂದೆ ರಾಜ್ಯದಲ್ಲಿ ಪ್ರಥಮವಾಗಿ ಹಂದಿ ಮರಿಗಳ ಕೃತಕ ಗರ್ಭಧಾರಣೆ ಮಾಡಲಾಗಿತ್ತು. ಕೆನಡಾದಿಂದ ತರಿಸಿದ್ದ ವೀರ್ಯಾಣುವಿನಿಂದ ಹಂದಿ ಮರಿಗಳ ಕೃತಕ ಗರ್ಭಧಾರಣೆ ಮಾಡಲಾಗಿತ್ತು. ಅದರಲ್ಲಿ ಜನಿಸಿದ ಗಂಡು ಹಂದಿ ಮರಿಗಳನ್ನು ಇಲಾಖೆಯ ಮೂಲಕ ಸರಕಾರ ನಿಗಧಿ ಮಾಡಿದ ಮೊತ್ತದ ಮುಖೇನ ರೈತರಿಗೆ ಮಾರಾಟ ಮಾಡಲು ಈ ಕೇಂದ್ರ ಸಿದ್ದವಾಗಿದೆ.

ಕೂಡಿಗೆಯ ಹಂದಿ ಸಾಕಾಣಿಕೆಯ ಕೇಂದ್ರದಲ್ಲಿ ಕಳೆದ ಆರು ತಿಂಗಳುಗಳ ಹಿಂದೆ ಹತ್ತು ಹೆಣ್ಣು ಹಂದಿಗಳಿಗೆ ಕೃತಕ ಗರ್ಭಧಾರಣೆ ಮಾಡಲಾಗಿತ್ತು. ಇವುಗಳ ಮೂಲಕ 80 ಹಂದಿ ಮರಿಗಳು ಜನಿಸಿದ್ದು ಇವುಗಳಲ್ಲಿ 36 ಹೆಣ್ಣು ಹಂದಿ ಮರಿಗಳು 44 ಗಂಡು ಹಂದಿ ಮರಿಗಳಿವೆ . ಹೆಣ್ಣು ಹಂದಿ ಮರಿಗಳನ್ನು ರಾಜ್ಯದಲ್ಲಿರುವ ಸರಕಾರದ ಹಂದಿ ಸಾಕಾಣಿಕೆ ಕೇಂದ್ರಕ್ಕೆ ನೀಡಲಾಗಿದೆ .

ರಾಜ್ಯದಲ್ಲಿ ಸರಕಾರದ ಪಶುಪಾಲನಾ ಇಲಾಖೆಯ ಅಧೀನದಲ್ಲಿ 5 ಕಡೆಗಳಲ್ಲಿ ಹಂದಿ ಸಾಕಾಣಿಕೆ ಕೆಂದ್ರಗಳಿವೆ. ಇವುಗಳಲ್ಲಿ ಪ್ರಥಮವಾಗಿ ಕೃತಕ ಗರ್ಭಧಾರಣೆ ಮಾಡುವ ಯೋಜನೆಯನ್ನು ಸರಕಾರ ಕೂಡಿಗೆ ಮತ್ತು ಹೆಸರುಘಟ್ಟ ಕೇಂದ್ರಗಳಿಗೆ ಅನುಮತಿಯನ್ನು ನೀಡಿದ್ದು ಈ ಮೂಲಕ ಗರ್ಭಧಾರಣೆ ಮಾಡಲಾಗಿತ್ತು.

ಕೂಡಿಗೆ ಕೇಂದ್ರದ ಹೆಣ್ಣು ಹಂದಿ ಮರಿಗಳನ್ನು ಚಿಕ್ಕಮಗಳೂರು ಜಿಲ್ಲೆಯ ಕಳಸ ಮತ್ತು ಮಂಗಳೂರು ಜಿಲ್ಲೆಯ ಕೂಲ್ಯಾ ಹಂದಿ ಸಾಕಾಣಿಕೆ ಕೇಂದ್ರಗಳಿಗೆ ನೀಡಲಾಗಿದೆ. ಅದೇ ರೀತಿಯಲ್ಲಿ ಹೆಸರುಘಟ್ಟದ ಕೇಂದ್ರದವರು ಹೆಣ್ಣು ಮರಿಗಳನ್ನು ಕೋಲಾರ ಜಿಲ್ಲೆಯ ಬಂಗಾರಪೇಟೆ ಕೇಂದ್ರಕ್ಕೆ ನೀಡಿದ್ದಾರೆ.

ರಾಜ್ಯದಲ್ಲಿ ಪ್ರಮುಖವಾಗಿ ಹಂದಿ ಸಾಕಾಣಿಕೆಯ ಕಸುಬನ್ನು ಅಳವಡಿಸಿಕೊಂಡಿರುವ ರಾಜ್ಯದ ವಿವಿಧ ಜಿಲ್ಲೆಯ ರೈತರು ಈಗಾಗಲೇ ಗಂಡು ಹಂದಿ ಮರಿಗಳನ್ನು ಖರೀದಿಸಿಕೊಂಡು ಹೋಗುತ್ತಿದ್ದಾರೆ. ರಾಜ್ಯದಲ್ಲಿ 200 ಕ್ಕೂ ಹೆಚ್ಚು ಖಾಸಗಿ ಹಂದಿ ಸಾಕಾಣಿಕೆ ಕೇಂದ್ರಗಳು ಇವೆ. ಈ ಹಂದಿ ಮರಿಗಳು ಕೆಲವೇ ತಿಂಗಳುಗಳಲ್ಲಿ ಹೆಚ್ಚು ತೂಕ ಬರುವ ಶುದ್ಧ ತಳಿಗಳಾಗಿರುತ್ತವೆ. ಈಗಾಗಲೇ ಕೂಡಿಗೆಯ ಹಂದಿ ಸಾಕಾಣಿಕೆ ಕೇಂದ್ರದಿಂದ ಚಿಕ್ಕಮಗಳೂರು ಜಿಲ್ಲೆಯ ಮೂಡಗೆರೆ , ಬಾಗಲಕೋಟೆ ನಂಜನಗೂಡು ಜಿಲ್ಲೆಯ ಕೆಲ ಖಾಸಗಿ ಹಂದಿ ಸಾಕಾಣಿಕೆ ಕೇಂದ್ರದ ರೈತರು ಸರಕಾರ ನಿಗದಿ ಮಾಡಿದ ಮೊತ್ತವನ್ನು ಪಾವತಿ ಮಾಡಿ ಖರೀದಿಸಿ ತೆಗೆದುಕೊಂಡು ಹೋಗಿದ್ದಾರೆ.

ಕೂಡಿಗೆ ಹಂದಿ ಸಾಕಾಣಿಕೆ ಕೇಂದ್ರದಲ್ಲಿ ಶುದ್ಧ ತಳಿಯ ಹಂದಿ ಗಂಡು ಮರಿಗಳು 4- 5 ತಿಂಗಳುಗಳಿಗೆ 40 ಕೆ ಜಿ ಯಷ್ಟು ತೂಕವಿದ್ದು ದೇಹದ ಅಳತೆಯಲ್ಲಿ ಬೇರೆ ಹಂದಿಗಳಿಗಿಂತ ಉದ್ದ ಮತ್ತು ಅಡ್ಡವಿದ್ದು ದಪ್ಪನೆಯ ದೇಹವನ್ನು ಹೊಂದಿರುತ್ತವೆ. ಜಿಲ್ಲೆಯಲ್ಲಿ ಹೆಚ್ಚು ರೈತರು ಹಂದಿ ಸಾಕಾಣಿಕೆ ಕಾರ್ಯದಲ್ಲಿ ತೊಡಗಿರುವುದು ಕಂಡುಬರುತ್ತಿದ್ದು ಹೊಸ ತಳಿಯ ಹಂದಿಗಳನ್ನು ಸಾಕುವುದರಿಂದ ತಮ್ಮ ಆರ್ಥಿಕ ಮಟ್ಟವನ್ನು ಹೆಚ್ಚಿಸಿಕೊಳ್ಳಲು ಪೂರಕವಾಗಿರುತ್ತದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. -ಕೆ.ಕೆ. ನಾಗರಾಜಶೆಟ್ಟಿ