ಗೋಣಿಕೊಪ್ಪಲು, ಡಿ.21: ತಿತಿಮತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಭದ್ರಗೊಳ ಸಮೀಪ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಬೈಕ್ ಸವಾರ ಸಿದ್ದಾರ್ಥ್(30) ಸ್ಥಳದಲ್ಲಿಯೇ ಮೃತಪಟ್ಟ ಘಟನೆ ವರದಿಯಾಗಿದೆ. ಸೋಮವಾರ ಮಧ್ಯಾಹ್ನದ ವೇಳೆ ಲಾರಿ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ್ದು ಸಿದ್ದಾರ್ಥ್ನ ತಲೆಯ ಭಾಗವು ಸಂಪೂರ್ಣ ಜಜ್ಜಿ ಹೋಗಿವೆ.
ಮೃತ ವ್ಯಕ್ತಿಯು ಕಣ್ಣನೂರಿನಿಂದ ಬೆಂಗಳೂರಿಗೆ ತನ್ನ ಬೈಕಿನಲ್ಲಿ ಪ್ರಯಾಣ ಬೆಳೆಸಿದ್ದ. ಭದ್ರಗೊಳ ಸಮೀಪ ತಲುಪುತ್ತಿದ್ದ ವೇಳೆ ವಾಹನವೊಂದನ್ನು ಓವರ್ಟೆಕ್ ಮಾಡಲು ಪ್ರಯತ್ನಿಸಿದಾಗ ಆಯತಪ್ಪಿದ ಈತ ಎದುರುಗಡೆಯಿಂದ ಗೋಣಿಕೊಪ್ಪ ಕಡೆಗೆ ಬರುತ್ತಿದ್ದ ಲಾರಿಯ ಮುಂದಿನ ಚಕ್ರಕ್ಕೆ ಬೈಕ್ ಸಹಿತ ಸಿಲುಕಿಕೊಂಡಿದ್ದಾನೆ. ಇದರಿಂದ ಆತ ಸ್ಥಳದಲ್ಲಿಯೇ ಅಸುನೀಗಿದ್ದಾನೆ ಎಂದು ಅಲ್ಲಿನ ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಬೈಕ್ ಸವಾರನ ಸ್ನೇಹಿತ ಇನ್ನೊಂದು ಬೈಕಿನಲ್ಲಿ ಮುಂದೆ ಸಾಗಿ ಹೋಗಿದ್ದ. ನಂತರ ಸುದ್ದಿ ತಿಳಿದು ವಾಪಸ್ಸು ಬಂದು ಈತನ ಮಾಹಿತಿಯನ್ನು ಪೊಲೀಸರಿಗೆ ತಿಳಿಸಿದ್ದಾನೆ.
ಗೋಣಿಕೊಪ್ಪ ಠಾಣಾಧಿಕಾರಿ ಹೆಚ್.ಸುಬ್ಬಯ್ಯ, ವೃತ್ತ ನಿರೀಕ್ಷಕ ರಾಮರೆಡ್ಡಿ ಹಾಗೂ ಸಿಬ್ಬಂದಿ ಘಟನೆ ಸ್ಥಳಕ್ಕೆ ತೆರಳಿ ಮಹಜರು ನಡೆಸಿದ್ದಾರೆ. ಮೃತ ಶರೀರವನ್ನು ಗೋಣಿಕೊಪ್ಪ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಲಾಗಿದೆ. ಲಾರಿಯನ್ನು ವಶಕ್ಕೆ ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೈಸೂರು ಗೋಣಿಕೊಪ್ಪ ಮುಖ್ಯ ರಸ್ತೆಯಲ್ಲಿ ಸಂಭವಿಸಿದ ಈ ಅಪಘಾತದಿಂದ ಕೆಲ ಕಾಲ ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು.
-ಜಗದೀಶ್ / ದಿನೇಶ್