ಸೋಮವಾರಪೇಟೆ, ಡಿ. 20: ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳೇ ನೇರವಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಮನೆಯೊಳಗೆ ಸಂಗ್ರಹಿಸಿಟ್ಟಿದ್ದ ವಿವಿಧ ಜಾತೀಯ ಮರಗಳನ್ನು ಪತ್ತೆಹಚ್ಚಿದ್ದು, ಪರ್ಮಿಟ್ ಇಲ್ಲದ್ದರಿಂದ ಮರಗಳನ್ನು ಅರಣ್ಯ ಇಲಾಖೆಯ ವಶಕ್ಕೆ ಪಡೆಯಲಾಗಿದೆ.
ಹಾನಗಲ್ಲು ಗ್ರಾಮದ ಹೆಚ್.ವಿ. ಮಿಥುನ್ ಎಂಬವರ ಮನೆಯೊಳಗೆ ಸಂಗ್ರಹಿಸಿಟ್ಟಿದ್ದ ಬೀಟೆ, ತೇಗ, ಹೊನ್ನೆ, ನಂದಿ, ಅರಶಿಣ ತೇಗದ ಮರಗಳನ್ನು ಅರಣ್ಯಾಧಿಕಾರಿಗಳು ವಶಪಡಿಸಿ ಕೊಂಡಿದ್ದಾರೆ.
ನಿನ್ನೆ ದಿನ ಕಾಜೂರು ನರ್ಸರಿಗೆ ಭೇಟಿ ನೀಡಿದ್ದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್ ಅವರು, ನಂತರ ಸೋಮವಾರಪೇಟೆ ಕಚೇರಿಗೆ ಭೇಟಿ ನೀಡಿ, ಇಲ್ಲಿಂದ ಶನಿವಾರಸಂತೆಗೆ ತೆರಳಿದ್ದರು. ಈ ಸಂದರ್ಭ ದೊರೆತ ಖಚಿತ ಮಾಹಿತಿಯ ಮೇರೆ ವಾಪಸ್ ಸೋಮವಾರಪೇಟೆಗೆ ಆಗಮಿಸುವ ಸಂದರ್ಭ, ನೇರವಾಗಿ ಹಾನಗಲ್ಲು ಗ್ರಾಮದ ಹೆಚ್.ವಿ. ಮಿಥುನ್ ಮನೆಗೆ ತೆರಳಿ, ಪರಿಶೀಲಿಸಿದ್ದು, ಅಲ್ಲಿ ಪರ್ಮಿಟ್ ರಹಿತವಾಗಿ ಬೆಲೆಬಾಳುವ ಮರಗಳನ್ನು ಸಂಗ್ರಹಿಸಿಟ್ಟಿರುವದು ಪತ್ತೆಯಾಗಿದೆ.
ನಂತರ ಈ ಬಗ್ಗೆ ಎಸಿಎಫ್ ಕೊಚ್ಚೇರ ನೆಹರು ಅವರಿಗೆ ಮಾಹಿತಿ ನೀಡಿ, ಸ್ಥಳಕ್ಕೆ ಕರೆಸಿಕೊಂಡ ಡಿಎಫ್‍ಓ ಪ್ರಭಾಕರನ್ ಅವರು ಪ್ರಕರಣದ ಬಗ್ಗೆ ಮುಂದಿನ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದಾರೆ. ಡಿಎಫ್‍ಓ ಸೂಚನೆ ಮೇರೆಗೆ ಸೋಮವಾರಪೇಟೆ ಆರ್‍ಎಫ್‍ಓ ಎ. ಸುಮಂತ್, ಶನಿವಾರಸಂತೆಯ ಆರ್‍ಎಫ್‍ಓ ಪ್ರಫುಲ್ ಶೆಟ್ಟಿ, ಕುಶಾಲನಗರ ಆರ್‍ಎಫ್‍ಓ ಅನನ್ಯಕುಮಾರ್, ಬೇಳೂರು ಶಾಖೆಯ ಡಿಆರ್‍ಎಫ್‍ಓ ನಾರಾಯಣ ಮೂಲ್ಯ, ಡಿಆರ್‍ಎಫ್‍ಓ ರಾಕೇಶ್,ಅರಣ್ಯ ರಕ್ಷಕ ಮೋಹನ್‍ಕುಮಾರ್, ಸಿಬ್ಬಂದಿಗಳಾದ ವಿಜಯ, ಸುಂದರ, ಸೋಮವಾರಪೇಟೆ ಪೊಲೀಸ್ ಠಾಣಾಧಿಕಾರಿ ಶ್ರೀಧರ್ ಸೇರಿದಂತೆ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿದ್ದಾರೆ.
ಮನೆಯೊಳಗೆ ಸಂಗ್ರಹಿಸಿಟ್ಟಿದ್ದ ಬೀಟೆ, ತೇಗ, ಹೊನ್ನೆ, ನಂದಿ, ಅರಶಿಣ ತೇಗದ ಸೈಜ್‍ಗಳನ್ನು 2 ಪಿಕ್‍ಅಪ್ ಹಾಗೂ 2 ಟ್ರ್ಯಾಕ್ಟರ್‍ನಲ್ಲಿ ಸೋಮವಾರಪೇಟೆ ಅರಣ್ಯ ಇಲಾಖಾ ಕಚೇರಿಗೆ ಸಾಗಿಸಲಾಗಿದೆ.
ಮನೆಯೊಳಗೆ ಸಂಗ್ರಹಿಸಿಟ್ಟಿದ್ದ 24 ಸಿಎಫ್‍ಟಿ ಬೀಟೆ, 71 ಸಿಎಫ್‍ಟಿ ನಂದಿ, 71 ಸಿಎಫ್‍ಟಿ ಹೊನ್ನೆ, 7 ಸಿಎಫ್‍ಟಿ ತೇಗ, 3 ಸಿಎಫ್‍ಟಿ ಅರಶಿಣ ತೇಗದ ಸೈಜ್ ಸೇರಿದಂತೆ ಒಟ್ಟು 176 ಸಿಎಫ್‍ಟಿ ಮರಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅರಣ್ಯ ಇಲಾಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಮರಗಳಿಗೆ ಪರ್ಮಿಟ್ ಇದೆ ಎಂದು ಮಿಥುನ್ ತಿಳಿಸಿದ್ದರಿಂದ ಮೊಕದ್ದಮೆ ದಾಖಲಿಸದೇ ಮರವನ್ನು ವಶಕ್ಕೆ ಪಡೆಯಲಾಗಿದೆ. ಪರ್ಮಿಟ್ ನೀಡಲು ವಿಫಲರಾದರೆ ಮೊಕದ್ದಮೆ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವದು. ಪರ್ಮಿಟ್ ನೀಡಿದರೆ ಮಾಲೀಕರಿಗೆ ಮರ ವಾಪಸ್ ನೀಡಲಾಗುವದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.