ಸುಂಟಿಕೊಪ್ಪ, ಡಿ. 20: ಸುಂಟಿಕೊಪ್ಪ ರಾಮ ಮಂದಿರದ ಸಭಾಂಗಣದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಗ್ರಾ.ಪಂ. ಚುನಾವಣೆಗೆ ಸಂಬಂಧಿಸಿದಂತೆ ಕಾರ್ಯಕರ್ತರ ಸಭೆ ನಡೆಯಿತು. ಸಚಿವ ಸೋಮಣ್ಣ ಅವರು ಮಾತನಾಡಿ, ಕೇಂದ್ರ ಸರ್ಕಾರದ ನರೇಂದ್ರ ಮೋದಿ ಅವರು ಬಡತನ ತೊಲಗಿಸಲು ಹಲವಾರು ಯೋಜನೆಗಳನ್ನು ಕೈಗೊಂಡಿದೆ. ಕುಡಿಯುವ ನೀರಿನ ಯೋಜನೆ 14ನೇ ಹಣಕಾಸು ಯೋಜನೆ ಅನುದಾನ ನೇರವಾಗಿ ಪಂಚಾಯಿತಿ ನಿಧಿಗೆ ವರ್ಗಾಯಿಸಿದ್ದು 2024 ರಲ್ಲಿ ಪ್ರತಿಯೊಬ್ಬ ಪ್ರಜೆಗೂ ಸೂರು ಕಲ್ಪಿಸುವ ಯೋಜನೆಯಿಂದ ಬಡತನ ತೊಲಗಲಿದೆ. ಕೃಷಿಕರಿಗೆ ವಿಶೇಷ ಪ್ಯಾಕೇಜ್ ನೀಡಿದೆ ಎಂದರು. ಸಂಸದ ಪ್ರತಾಪ್ ಸಿಂಹ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಗ್ರಾಮ ಪಂಚಾಯಿತಿಗೆ 14ನೇ ಹಣಕಾಸು ಯೋಜನೆಯ ರೂ. 30 ಲಕ್ಷ ಅನುದಾನವನ್ನು ನೇರವಾಗಿ ಗ್ರಾ.ಪಂ. ಖಾತೆಗೆ ಬಿಡುಗಡೆಗೊಳಿಸಿರುವುದರಿಂದ, ಮಹಾತ್ಮಗಾಂಧಿ ಉದ್ಯೋಗಖಾತ್ರಿ ಯೋಜನೆಯ ರೂ. 1.5 ಕೋಟಿ ಗ್ರಾ.ಪಂ.ಗೆ ಕೇಂದ್ರ ಸರಕಾರ ನೀಡುವುದರಿಂದ ಪಂಚಾಯಿತಿಯ ಅಭಿವೃದ್ಧಿ ಆಗುತ್ತಿದೆ ಎಂದರು.

ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ವಸತಿ ಹೀನರಿಗೆ ಮನೆ ದೊರಕಿಸಿಕೊಡಲು ಈಗಾಗಲೇ 10 ಎಕರೆ ಜಾಗ ಗುರುತಿಸಲಾಗಿದೆ. ಗ್ರಾ.ಪಂ. ಚುನಾವಣೆ ನಂತರ ವಸತಿ ಸಚಿವರಿಂದ ಅದನ್ನು ಅನುಷ್ಠಾನಕ್ಕೆ ತರಲಾಗುವುದು ಎಂದು ಹೇಳಿದರು. ವಿಧಾನ ಪರಿಷತ್ ಎಂ.ಪಿ. ಸುನಿಲ್ ಸುಬ್ರಮಣಿ ಹಳೆಬೆರು ಹೊಸಚಿಗುರು ಎಂಬಂತೆ ಪಕ್ಷ ಬೆಳೆದಾಗ ಅಕಾಂಕ್ಷಿಗಳು ಹೆಚ್ಚಾಗಿದ್ದಾರೆ. ಅಭಿವೃದ್ಧಿ ದೇಶದ ಹಿತಚಿಂತನೆಯಿಂದ ಗ್ರಾಮದ ಅಭಿವೃದ್ಧಿಗೆ ಕಾರ್ಯಕರ್ತರು ಕೆಲಸ ಮಾಡಬೇಕು ಎಂದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ, ರಾಜ್ಯ ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ ಮಾತನಾಡಿದರು.

ಸೋಮವಾರಪೇಟೆ ತಾಲೂಕು ಮಂಡಲ ಬಿಜೆಪಿ ಅಧ್ಯಕ್ಷ ಮನುಕುಮಾರ್ ರೈ, ಮಾಜಿ ಎಂಎಲ್‍ಸಿ ಎಸ್.ಜಿ. ಮೇದಪ್ಪ, ಬಿಜೆಪಿ ತಾಲೂಕು ಮುಖಂಡ ದಾಸಂಡ ರಮೇಶ್, ಪಿ.ಆರ್. ಸುನಿಲ್‍ಕುಮಾರ್, ಶಕ್ತಿ ಕೇಂದ್ರ ಪ್ರಮುಖ್‍ಗಳಾದ ಬಿ.ಕೆ. ಪ್ರಶಾಂತ್, ವಾಸು ಮತ್ತಿತರರು ಉಪಸ್ಥಿತರಿದ್ದರು.

ಶನಿವಾರಸಂತೆ: ಸರಕಾರ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿಗೆ ಕೋಟ್ಯಂತರ ರೂಪಾಯಿ ವೆಚ್ಚದ ಯೋಜನೆಗಳನ್ನು ರೂಪಿಸಿದೆ ಎಂದು ಸಚಿವ ಸೋಮಣ್ಣ ಅಭಿಪ್ರಾಯಪಟ್ಟರು.

ಪಟ್ಟಣದ ನಂದೀಶ್ವರ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ಬಿಜೆಪಿ ಪಕ್ಷದ ಕಾರ್ಯಕರ್ತರ ಸಂಘಟನೆ ಹಾಗೂ ಗ್ರಾಮ ಪಂಚಾಯಿತಿ ಅಭ್ಯರ್ಥಿಗಳ ಶುಭ ಹಾರೈಕೆ ಸಭೆಯಲ್ಲಿ ಅವರು ಮಾತನಾಡಿದರು.

ಸರಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸಿ, ಸದುಪಯೋಗಪಡಿಸಿಕೊಳ್ಳಬೇಕು. ಉತ್ತಮ ಕೆಲಸಗಳ ಮೂಲಕ ಗ್ರಾಮಗಳನ್ನು ಅಭಿವೃದ್ಧಿಪಡಿಸಿ ಒಳ್ಳೆಯ ಹೆಸರು ಸಂಪಾದಿಸಿ ಎಂದು ಸಚಿವರು ಹೇಳಿದರು.

ಶಾಸಕ ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಮಾತನಾಡಿದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರಾಬಿನ್ ದೇವಯ್ಯ, ಮಾಜಿ ಅಧ್ಯಕ್ಷ ಭಾರತೀಶ್, ಜಿಲ್ಲಾ ಪಂಚಾಯಿತಿ ಸದಸ್ಯೆ ಸರೋಜಮ್ಮ, ಪ್ರಮುಖ ಮನು ರೈ, ಸ್ಥಳೀಯ ಮುಖಂಡರು, ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರು ಹಾಜರಿದ್ದರು.

ಕುಶಾಲನಗರ: ಪ್ರತಿಯೊಬ್ಬ ಮತದಾರನು ತಮ್ಮ ಹಕ್ಕನ್ನು ಚಲಾಯಿಸುವಂತೆ ನೋಡಿಕೊಳ್ಳುವುದು ಕಾರ್ಯಕರ್ತರ ಜವಾಬ್ದಾರಿಯಾಗಿದೆ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ. ಅವರು ಕುಶಾಲನಗರದ ಎಪಿಸಿಎಂಎಸ್ ಸಭಾಂಗಣದಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಗ್ರಾಮದ ನಾಗರಿಕರ ಬದುಕು, ಬವಣೆಗಳಿಗೆ ಶಾಶ್ವತ ಪರಿಹಾರ ಕಂಡುಹಿಡಿಯಬೇಕು. ಈ ಮೂಲಕ ಹಳ್ಳಿಯ ಜನತೆಯ ಬದುಕು ಹಸನಾಗಿಸಲು ಸಾಧ್ಯ ಎಂದರು. ಸಭೆಯಲ್ಲಿ ಉಪಸ್ಥಿತರಿದ್ದ ಕೊಡಗು ಮೈಸೂರು ಸಂಸದ ಪ್ರತಾಪ್‍ಸಿಂಹ ಮಾತನಾಡಿ, ಗ್ರಾಮ ಪಂಚಾಯಿತಿ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಸರಕಾರದ ಯೋಜನೆಯನ್ನು ಮನೆಮನೆಗೆ ತಲುಪಿಸುವುದು ಕಾರ್ಯಕರ್ತರ ಆದ್ಯ ಕರ್ತವ್ಯವಾಗಿದೆ ಎಂದರು.

ಶಾಸಕ ರಂಜನ್ ಮಾತನಾಡಿ, ಅಭ್ಯರ್ಥಿಗಳ ಗೆಲುವು ಕಾರ್ಯಕರ್ತರ ಗೆಲುವಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಬೆಂಬಲಿತ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಬೇಕೆಂದು ಕರೆ ನೀಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಸಮಿತಿ ಅಧ್ಯಕ್ಷ ರವಿ ಕುಶಾಲಪ್ಪ, ಮಾಜಿ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್, ತಾಲೂಕು ಅಧ್ಯಕ್ಷ ಮನುಕುಮಾರ್ ರೈ, ಜಿ.ಪಂ. ಸದಸ್ಯೆ ಮಂಜುಳಾ, ಎಸ್ಸಿ ಮೋರ್ಚಾದ ಪ್ರತಾಪ್ ಮತ್ತಿತರರು ಇದ್ದರು.