ಪಂಜಾಬ್ ರೈತ ಆತ್ಮಹತ್ಯೆಗೆ ಶರಣು
ಚಂಡೀಗಢ, ಡಿ. 20: ಕೇಂದ್ರ ಸರ್ಕಾರದ ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ರಾಷ್ಟ್ರ ರಾಜಧಾನಿ ದೆಹಲಿಯ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರೊಬ್ಬರು ಮನೆಗೆ ಬಂದು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ನಡೆದಿದೆ. ಪ್ರತಿಭಟನಾ ಸ್ಥಳದಿಂದ ಮನೆಗೆ ಬಂದಿದ್ದ 22 ವರ್ಷದ ಪಂಜಾಬ್ ರೈತ, ಕೆಲವು ವಿಷಕಾರಿ ವಸ್ತುಗಳನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಿರುವ ರೈತ ಬತಿಂಡಾ ಜಿಲ್ಲೆಯ ದಯಾಲ್ಪುರ ಮಿರ್ಜಾ ಗ್ರಾಮದ ನಿವಾಸಿ ಗುಲಾಭ್ ಸಿಂಗ್ ಎಂದು ಗುರುತಿಸಲಾಗಿದ್ದು, ದೆಹಲಿಯ ಗಡಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯ ಭಾಗವಾಗಿದ್ದರು. ಕಳೆದ ಶುಕ್ರವಾರ ತಮ್ಮ ಗ್ರಾಮಕ್ಕೆ ಮರಳಿದ್ದ ರೈತ, ಶನಿವಾರ ತಮ್ಮ ಮನೆಯಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ರೈತನ ಆತ್ಮಹತ್ಯೆಯ ಹಿಂದಿನ ಕಾರಣ ಇನ್ನೂ ಸ್ಪಷ್ಟವಾಗಿ ತಿಳಿದುಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಹೊಸ ವರ್ಷದ ಪಾರ್ಟಿಗಳಿಗೆ ನಿಷೇಧ
ಬೆಂಗಳೂರು, ಡಿ. 20: ಕೋವಿಡ್ ಎರಡನೇ ಅಲೆ ಭೀತಿ ಹಿನ್ನೆಲೆ ಸೋಂಕು ಹರಡುವಿಕೆ ತಡೆಯುವ ಉದ್ದೇಶದಿಂದ ಹೊಸ ವರ್ಷ ಆಚರಣೆ ಸಂದರ್ಭ ನಗರದಲ್ಲಿರುವ ಎಲ್ಲಾ ಪಬ್ ಹಾಗೂ ರೆಸ್ಟೋರೆಂಟ್ಗಳಲ್ಲಿ ಪಾರ್ಟಿಗಳ ಮೇಲೆ ನಿಷೇಧ ಹೇರಲಾಗಿದೆ. ಈ ಕುರಿತು ಮಾತನಾಡಿರುವ ಬಿಬಿಎಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರು, ಎಂ.ಜಿ. ರಸ್ತೆ, ಚರ್ಚ್ ಸ್ಟ್ರೀಟ್, ಬ್ರಿಗೇಡ್ ರಸ್ತೆ ಹಾಗೂ ಕೋರಮಂಗಲ ಸೇರಿದಂತೆ ನಗರದ ಎಲ್ಲಾ ಜನನಿಬಿಡ ಪ್ರದೇಶಗಳಲ್ಲಿ ಪಾರ್ಟಿಗಳ ಮೇಲೆ ನಿಷೇಧ ಹೇರಲಾಗಿದೆ. ಪಬ್ ಹಾಗೂ ರೆಸ್ಟೋರೆಂಟ್ಗಳಲ್ಲೂ ಸಂಭ್ರಮಾಚರಣೆಗೆ ನಿಷೇಧ ಹೇರಲಾಗಿದೆ ಎಂದು ಹೇಳಿದ್ದಾರೆ. ಆರೋಗ್ಯ ಸಚಿವ ಸುಧಾಕರ್ ಅವರು ಮಾತನಾಡಿ, ಹೊಸ ವರ್ಷ ಸಂಭ್ರಮದ ವೇಳೆ ಹೆಚ್ಚೆಚ್ಚು ಜನರು ಸೇರಿ ಸಂಭ್ರಮವನ್ನಾಚರಿಸುತ್ತಾರೆ. ಅದರಲ್ಲೂ ಬೆಂಗಳೂರು ನಗರದಲ್ಲಿ ಪಾರ್ಟಿಗಳನ್ನು ಹೆಚ್ಚಾಗಿ ನಡೆಸಲಾಗುತ್ತದೆ. ಹೆಚ್ಚೆಚ್ಚು ಜನರು ಸೇರುವುದನ್ನು ತಡೆಯಬೇಕಿದೆ. ಹೀಗಾಗಿ ಸಾರ್ವಜನಿಕ ಸಂಭ್ರಮಗಳ ಕುರಿತು ರಾಜ್ಯ ಸರ್ಕಾರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಬೇಕಿದೆ ಎಂದು ಹೇಳಿದ್ದಾರೆ.
ಜೆ.ಡಿ.ಎಸ್. ಬಿಜೆಪಿಯೊಂದಿಗೆ ವಿಲೀನವಾಗಲ್ಲ
ಬೆಂಗಳೂರು, ಡಿ. 20: ಜಾತ್ಯತೀತ ಜನತಾದಳದ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ. ಕುಮಾರಸ್ವಾಮಿಯವರು ವಿಧಾನ ಪರಿಷತ್ ಸಭಾಪತಿಗಳ ವಿಚಾರದಲ್ಲಿ ನಮ್ಮ ಪಕ್ಷಕ್ಕೆ ಬೆಂಬಲ ನೀಡಿದ್ದಾರೆ. ಆದರೆ ಯಾವುದೇ ಜೆ.ಡಿ.ಎಸ್. ಶಾಸಕರು ಭಾರತೀಯ ಜನತಾ ಪಕ್ಷಕ್ಕೆ ಬರುವುದಾಗಲೀ ಅಥವಾ ಜೆ.ಡಿ.ಎಸ್. ಪಕ್ಷವನ್ನು ಭಾರತೀಯ ಜನತಾ ಪಕ್ಷದಲ್ಲಿ ವಿಲೀನಗೊಳಿಸುವಂತಹ ಗೊಂದಲದ ವರದಿಗಳು ಶುದ್ಧ ಸುಳ್ಳು. ಅಂತಹ ಯಾವುದೇ ಸಂದರ್ಭ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಭಾನುವಾರ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಸಿಎಂ, ಕೇವಲ ಪರಿಷತ್ ಸಭಾಪತಿ ವಿಚಾರದಲ್ಲಿ ಮಾತ್ರ ನಮಗೆ ಸಹಕಾರ ನೀಡುತ್ತಿದ್ದಾರೆಯೇ ವಿನಃ ಮತ್ತೇನೂ ಇಲ್ಲ. ಗೋಹತ್ಯೆ ನಿಷೇಧದ ಬಗ್ಗೆ ನಮ್ಮ ಬೆಂಬಲವಿಲ್ಲ ಎಂದು ಸಹ ಕುಮಾರಸ್ವಾಮಿ ಸ್ಪಷ್ಟವಾಗಿ ಹೇಳಿದ್ದರಿಂದ ನಾವು ಸುಗ್ರೀವಾಜ್ಞೆ ಮೂಲಕ ಗೋಹತ್ಯೆ ನಿಷೇಧ ಜಾರಿಗೆ ತರುತ್ತಿದ್ದೇವೆ ಎಂದಿದ್ದಾರೆ.
ನೇಪಾಳ ಸಂಸತ್ ವಿಸರ್ಜನೆ
ಕಠ್ಮಂಡು, ಡಿ. 20: ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ನೇಪಾಳ ಸಂಸತ್ತನ್ನು ವಿಸರ್ಜಿಸುವ ಪ್ರಧಾನಿ ಕೆರಿ ಶರ್ಮಾ ಒಲಿ ನೇತೃತ್ವ ಸಂಪುಟ ಸಭೆಯ ಶಿಫಾರಸ್ಸಿಗೆ ನೇಪಾಳ ರಾಷ್ಟ್ರಪತಿಗಳು ಅನುಮೋದನೆ ನೀಡಿದ್ದಾರೆ. ಭಾನುವಾರ ನಡೆದ ತುರ್ತು ಸಭೆಯಲ್ಲಿ ಸಂಸತ್ ವಿಸರ್ಜಿಸಲು ನೇಪಾಳದ ಕ್ಯಾಬಿನೆಟ್ ಶಿಫಾರಸು ಮಾಡಿತ್ತು. ಅಲ್ಲದೆ ಶಿಫಾರಸ್ಸಿಗೆ ನೇಪಾಳದ ರಾಷ್ಟ್ರಪತಿಗಳಾದ ಬಿದ್ಯಾ ದೇವಿ ಭಂಡಾರಿ ಅವರು ಅನುಮೋದನೆ ನೀಡಿದ್ದಾರೆ. ಅಲ್ಲದೆ ಮುಂದಿನ ವರ್ಷದ ಏಪ್ರಿಲ್ 30 ಮತ್ತು ಮೇ10ರಂದು ನೇಪಾಳದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ ಎಂದು ಘೋಷಣೆ ಮಾಡಿದ್ದಾರೆ. ಇಂದು ತುರ್ತು ಸಂಪುಟ ಸಭೆಯಲ್ಲಿ ಸಂಸತ್ತನ್ನು ವಿಸರ್ಜಿಸಲು ರಾಷ್ಟ್ರಪತಿಗೆ ಶಿಫಾರಸು ಮಾಡಲು ನಿರ್ಧರಿಸಿದೆ ಎಂದು ಪ್ರಧಾನಿ ಕೆ.ಪಿ. ಶರ್ಮಾ ಒಲಿ ಅವರ ಸಂಪುಟದಲ್ಲಿ ಇಂಧನ ಸಚಿವರಾಗಿರುವ ಬರ್ಸಮನ್ ಪುನ್ ಮಾಧ್ಯಮಗಳಿಗೆ ತಿಳಿಸಿದರು.
74 ತಾಲಿಬಾನ್ ಉಗ್ರರ ಹತ್ಯೆ
ಕಾಬೂಲ್, ಡಿ. 20: ಆಫ್ಘಾನಿಸ್ತಾನದ ಕಂದಾಹರ್ ಪ್ರಾಂತ್ಯದಲ್ಲಿ 74 ತಾಲಿಬಾನ್ ಉಗ್ರರನ್ನು ನಿರ್ನಾಮ ಮಾಡಲಾಗಿದೆ ಎಂದು ಅಲ್ಲಿನ ರಕ್ಷಣಾ ಸಚಿವಾಲಯ ಭಾನುವಾರ ತಿಳಿಸಿದೆ. ಕಂದಹಾರ್ ಪ್ರಾಂತ್ಯದ ಝೆರಿಯಾ, ದಂಡ್, ಪಾಂಜ್ವೆ ಮತ್ತು ಅರ್ಗನ್ದಾಬ್ ಜಿಲ್ಲೆಗಳಲ್ಲಿ ನಡೆದ ದಾಳಿಗಳಲ್ಲಿ ಕನಿಷ್ಟ 74 ಉಗ್ರರು ಹತರಾಗಿದ್ದು ಇತರ 15 ಮಂದಿ ಗಾಯಗೊಂಡಿದ್ದಾರೆ ಎಂದು ಸಚಿವಾಲಯ ಟ್ವಿಟರ್ ಮೂಲಕ ತಿಳಿಸಿದೆ. ಆಫ್ಘನ್ ರಾಷ್ಟ್ರೀಯ ರಕ್ಷಣಾ ಮತ್ತು ಭದ್ರತಾ ಪಡೆಗಳು ನೆಲೆಗಳ ಮೇಲೆ ದಾಳಿ ಮಾಡಲು ಸಿದ್ಧತೆ ನಡೆಸಿದ್ದ ತಾಲಿಬಾನ್ ಉಗ್ರರನ್ನು ಗುರಿಯಾಗಿಸಿಕೊಂಡು ಆಫ್ಘನ್ ರಾಷ್ಟ್ರೀಯ ಸೇನೆ ನಡೆಸಿದ ಕಾರ್ಯಾಚರಣೆಗಳ ವೇಳೆ ಘರ್ಷಣೆಗಳು ನಡೆದಿವೆ ಎಂದಿರುವ ಸಚಿವಾಲಯ, ಉಗ್ರರ ಬಳಿ ಇದ್ದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದೆ.
ಕಾರ್ ಬಾಂಬ್ ದಾಳಿಗೆ 8 ಸಾವು
ಕಾಬೂಲ್, ಡಿ. 20: ಆಫ್ಘಾನಿಸ್ತಾನ ರಾಜಧಾನಿ ಕಾಬೂಲ್ನಲ್ಲಿ ಭಾನುವಾರ ಉಗ್ರರು ಭೀಕರ ಕಾರ್ ಬಾಂಬ್ ದಾಳಿ ನಡೆಸಿದ್ದು, ಘಟನೆಯಲ್ಲಿ ಕನಿಷ್ಟ 8 ಮಂದಿ ಸಾವಿಗೀಡಾಗಿ 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಕುರಿತಂತೆ ಸ್ವತಃ ಆಫ್ಘಾನ್ ಆಂತರಿಕ ಸಚಿವಾಲಯ ಮಾಹಿತಿ ನೀಡಿದ್ದು, ಆಫ್ಘನ್ ಸಂಸದರೊಬ್ಬರನ್ನು ಸ್ಥಳಾಂತರ ಮಾಡುತ್ತಿದ್ದಾಗ ಈ ದಾಳಿ ನಡೆದಿದೆ. ಸೇನಾ ಮೂಲಗಳು ತಿಳಿಸಿರುವಂತೆ ಸಂಸದ ಖಾನ್ ಮೊಹಮ್ಮದ್ ವಾರ್ಡಕ್ರನ್ನು ಭದ್ರತೆಯಲ್ಲಿ ಸ್ಥಳಾಂತರಿಸುತ್ತಿದ್ದಾಗ ಈ ದಾಳಿ ನಡೆದಿದ್ದು, ದೊಡ್ಡ ಕಾರಿನಲ್ಲಿ ಸ್ಫೋಟಕಗಳನ್ನು ತುಂಬಿಸಿ ಸ್ಫೋಟಗೊಳಿಸಲಾಗಿದೆ. ದಾಳಿಯಲ್ಲಿ ಸಂಸದ ಖಾನ್ ಮೊಹಮ್ಮದ್ ವಾರ್ಡಕ್ ಕೂಡ ಗಾಯಗೊಂಡಿದ್ದಾರೆ. ಅವರೊಂದಿಗೆ ಸುಮಾರು 15 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಫೋಟದ ರಭಸಕ್ಕೆ ಸಮೀಪದಲ್ಲಿದ್ದ ಸುಮಾರು 8 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಂತೆಯೇ ಸ್ಫೋಟದ ತೀವ್ರತೆಗೆ ಸಮುತ್ತಮುತ್ತಲಿನ ವಾಹನಗಳಿಗೂ ಬೆಂಕಿ ಹೊತ್ತಿಕೊಂಡಿದೆ. ಅಲ್ಲದೆ ಸುತ್ತಮುತ್ತಲ ಕಟ್ಟಡಗಳಿಗೂ ತೀವ್ರ ಹಾನಿಯಾಗಿದೆ. ಆರಂಭದಲ್ಲಿ ಈ ದಾಳಿಯ ಹೊಣೆಯನ್ನೂ ಯಾವುದೇ ಉಗ್ರ ಸಂಘಟನೆ ಹೊತ್ತುಕೊಂಡಿರಲಿಲ್ಲವಾದರೂ, ಬಳಿಕ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ತಾನೇ ಈ ದಾಳಿ ಮಾಡಿರುವುದಾಗಿ ಹೇಳಿಕೆ ಬಿಡುಗಡೆ ಮಾಡಿದೆ.