ಶ್ರೀಮಂಗಲ, ಡಿ. 19: ಪೊನ್ನಂಪೇಟೆ ತಾಲೂಕು ಟಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹರಿಹರ ಗ್ರಾಮದ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ದಾನಿಗಳಾದ ಕೈಬುಲೀರ ಪಾರ್ವತಿ ಬೋಪಯ್ಯ ಅವರು ನೀಡಿರುವ ರೂ. 2 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಹೆಬ್ಬಾಗಿಲನ್ನು ಶನಿವಾರ ಟಿ. ಶೆಟ್ಟಿಗೇರಿ ಕೊಡವ ಸಮಾಜದ ಕಾರ್ಯದರ್ಶಿ ಮನ್ನೇರ ರಮೇಶ್ ಉದ್ಘಾಟನೆ ಮಾಡಿದರು.
ಟಿ. ಶೆಟ್ಟಿಗೇರಿ, ತಾವಳಗೇರಿ ಮೂಂದ್ ನಾಡಿನ ತಕ್ಕರಾಗಿದ್ದ ಹಾಗೂ ಮಾಜಿ ಸೈನಿಕ ಕೈಬುಲೀರ ಬೋಪಯ್ಯ ಅವರ ಸ್ಮರಣಾರ್ಥವಾಗಿ ಪತ್ನಿ ಪಾರ್ವತಿ ಬೋಪÀಯ್ಯ ಅವರು ದೇವಸ್ಥಾನಕ್ಕೆ ಹೆಬ್ಬಾಗಿಲು ನಿರ್ಮಿಸಲು ರೂ. 2 ಲಕ್ಷವನ್ನು ಉದಾರವಾಗಿ ನೀಡಿದ್ದರು.
ಈ ಸಂದರ್ಭ ದಾನಿ ಕೈಬುಲೀರ ಪಾರ್ವತಿ ಬೋಪಯ್ಯ, ಸುಬ್ರಹ್ಮಣ್ಯ ದೇವಸ್ಥಾನದ ತಕ್ಕ ಮುಖ್ಯಸ್ಥರಾದ ಚಿಮ್ಮುಣಿರ ಬಿದ್ದಪ್ಪ, ದೇವಸ್ಥಾನದ ಆಡಳಿತ ಮಂಡಳಿಯ ಕಾರ್ಯದರ್ಶಿ ತೀತಿರ ಧರ್ಮಜ ಉತ್ತಪ್ಪ, ಖಜಾಂಚಿ ಪೆಮ್ಮಣಮಾಡ ಮುರುಳಿ ತಿಮ್ಮಯ್ಯ, ಉಸ್ತುವಾರಿ ಪೆಮ್ಮಣಮಾಡ ಸಂಪತ್ ಸೇರಿದಂತೆ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು, ಗ್ರಾಮಸ್ಥರು ಪಾಲ್ಗೊಂಡಿದ್ದರು.
ಷಷ್ಠಿ ಉತ್ಸವ : ತಾ. 20ರಂದು (ಇಂದು) ಷಷ್ಠಿ ಉತ್ಸವ ಹಾಗೂ 21 ರಂದು ದೇವರ ಅವಭೃತ ಸ್ನಾನದೊಂದಿಗೆ ಹರಿಹರ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಷಷ್ಠಿ ಉತ್ಸವ ನಡೆಯಲಿದೆ. ಅಲಂಕಾರ ಪೂಜೆ, ರುದ್ರಾಭಿಷೇಕ, ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆಯಲಿವೆ. ಇಂದು ಮತ್ತು ನಾಳೆ ತಲೆಮುಡಿ ಹರಕೆ ಒಪ್ಪಿಸಬಹುದು. ಭಕ್ತಾಧಿಗಳು ಕೋವಿಡ್ ಹಿನ್ನೆಲೆ ಕಡ್ಡಾಯವಾಗಿ ಮಾಸ್ಕ್ ಧರಿಸುವುದರೊಂದಿಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕೆಂದು ದೇವಸ್ಥಾನದ ತಕ್ಕಮುಖ್ಯಸ್ಥರು ಹಾಗೂ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.