ವೀರಾಜಪೇಟೆ, ಡಿ. 18: ಪಟ್ಟಣದ ಸೆಂಟ್ ಆನ್ಸ್ ಪದವಿ ಕಾಲೇಜಿನಲ್ಲಿ ವೃತ್ತಿ ಮಾರ್ಗದರ್ಶನ ಮತ್ತು ಉದ್ಯೋಗ ಕೋಶ ಹಾಗೂ "ಟೀಚ್ ಟು ಫಿಶ್" ಘಟಕದ ಸಹಯೋಗದಲ್ಲಿ ಪದವಿ ವಿದ್ಯಾರ್ಥಿಗಳಿಗೆ ವೃತ್ತಿ ಮತ್ತು ಉದ್ಯೋಗ ಮಾರ್ಗದರ್ಶನ ಮತ್ತು ತರಬೇತಿ ಕಾರ್ಯಾಗಾರ ಕಾಲೇಜು ಸಭಾಂಗಣದಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಟ್ರಸ್ಟಿ ಬ್ರಿಗೇಡಿಯರ್ ದೇವಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವೃತ್ತಿ ತರಬೇತಿಯು ಅತ್ಯಗತ್ಯವಾಗಿದ್ದು, ವಿದ್ಯಾರ್ಥಿಗಳು ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ಮಾತ್ರವಲ್ಲದೆ ಉದ್ಯೋಗದಲ್ಲಿರುವ ಹೊಸ ಅವಕಾಶಗಳನ್ನು ಬಳಸಿಕೊಂಡು ತನ್ನನ್ನು ತಾನು ವಿಕಸನಗೊಳಿಸಿಕೊಂಡು ರಾಷ್ಟ್ರದ ಅಭಿವೃದ್ಧಿಗೆ ಪಣತೊಡಬೇಕೆಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸೆಂಟ್ ಅನ್ಸ್ ಪದವಿ ಕಾಲೇಜಿನ ಪ್ರಾಂಶುಪಾಲ ಫಾ. ರೋನಿ ರವಿಕುಮಾರ್ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗವನ್ನು ಪಡೆಯುವುದು ಎಲ್ಲರ ಗುರಿಯಾಗಿರುತ್ತದೆ. ಆದರೆ ಉದ್ಯೋಗವನ್ನು ಪಡೆಯಲು ತರಬೇತಿ ಮಾರ್ಗದರ್ಶನ ಕೌಶಲ್ಯ ಅಗತ್ಯವಾಗಿದ್ದು, ವಿದ್ಯಾರ್ಥಿಗಳು ತರಬೇತಿಯಲ್ಲಿ ಭಾಗವಹಿಸುವುದರ ಮೂಲಕ ಕೌಶಲ್ಯ ವೃದ್ಧಿಸುವತ್ತ ಗಮನ ಹರಿಸಬೇಕು ಎಂದು ಕರೆ ನೀಡಿದರು. ಟ್ರಸ್ಟಿ ಚಂಗಪ್ಪ ಮಾತನಾಡಿದರು.
ರಾಜ್ಯ ಹಾಗೂ ದೇಶದ ಪ್ರತಿಷ್ಠಿತ 7 ಕಂಪೆನಿಗಳು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದವು. ವಿದ್ಯಾರ್ಥಿಗಳಿಗೆ ವೀಡಿಯೋ ಕಾನ್ಫರೆನ್ಸ್ ಮತ್ತು ಅಣುಕು ಚಿತ್ರಗಳ ಮೂಲಕ ವಿವಿಧ ರೀತಿಯಲ್ಲಿ ತರಬೇತುದಾರರು ತರಬೇತಿ ನೀಡಿದರು. ವೀರಾಜಪೇಟೆ ಸೆಂಟ್ ಅನ್ಸ್ ಪದವಿ ಕಾಲೇಜು ಹಾಗೂ ವೀರಾಜಪೇಟೆ ಮತ್ತು ಗೋಣಿಕೊಪ್ಪಲುವಿನ ಕಾವೇರಿ ಕಾಲೇಜಿನ ಸುಮಾರು 80 ವಿದ್ಯಾರ್ಥಿಗಳು ಸಾಮಾಜಿಕ ಅಂತರವನ್ನು ಪಾಲನೆ ಮಾಡಿ ಪಾಲ್ಗೊಂಡು ತರಬೇತಿ ಪಡೆದರು.
ಕಾಲೇಜಿನ ಉದ್ಯೋಗ ಕೋಶದ ಅಧಿಕಾರಿ ನಿಖಿಲ್, ಗಂಗಾಧರ್ ಹಾಗೂ ಉಪನ್ಯಾಸಕರು ಹಾಜರಿದ್ದರು.