ಪಾಲಿಬೆಟ್ಟ, ಡಿ. 18 : ಜೈಲಿನಲ್ಲಿದ್ದುಕೊಂಡೇ ಗ್ರಾಮ ಪಂಚಾಯತ್ ಚುನಾವಣೆಗೆ ವ್ಯಕ್ತಿಯೊಬ್ಬರು ಸ್ಪರ್ಧಿಸಿದ್ದಾರೆ. ಪಾಲಿಬೆಟ್ಟ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪಿ.ಪಿ. ಬೋಪಣ್ಣ ಅವರು ಜೈಲಿನಿಂದಲೇ ನಾಮಪತ್ರ ಸಲ್ಲಿಸಿದ್ದಾರೆ. ಎರಡು ಅವಧಿಗೆ ಪಾಲಿಬೆಟ್ಟ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಬೋಪಣ್ಣ ಅವರು ಸೇವೆ ಸಲ್ಲಿಸಿದ್ದರು. ಆದರೆ ಈ ಬಾರಿ ಚುನಾವಣೆಗೆ ಸ್ಪರ್ಧಿಸುವ ಎಲ್ಲಾ ತಯಾರಿ ನಡೆಸುತ್ತಿರುವಾಗಲೇ ಜಾತಿ ನಿಂದನೆ ಮತ್ತು ದೌರ್ಜನ್ಯ ಪ್ರಕರಣದಡಿಯಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾದರು. ಆದರೂ ಪಂಚಾಯತ್ ಚುನಾವಣೆಗೆ ನಿಲ್ಲಲು ಬೋಪಣ್ಣ ಜೈಲಿನಿಂದಲೇ ನಾಮಪತ್ರ ಸಲ್ಲಿಸಿದ್ದಾರೆ.
ಜೈಲಿನಲ್ಲಿ ಇದ್ದುದರಿಂದ ನಾಮಪತ್ರ ಸಲ್ಲಿಸುವುದು ಕಷ್ಟವಾಗಿತ್ತು. ಮಡಿಕೇರಿ ವಕೀಲರ ಸಂಘದ ಅಧ್ಯಕ್ಷ ಕವನ್ ಅವರ ಮೂಲಕ ಜಾಮೀನು ಪಡೆಯಲು ಅಂತಿಮ ಕ್ಷಣದವರೆಗೂ ಪ್ರಯತ್ನ ನಡೆಸಿದರು.
ಅದು ಸಾಧ್ಯವಾಗದಿದ್ದಾಗ ನ್ಯಾಯಾಲಯದ ಒಪ್ಪಿಗೆ ಪಡೆದು ಜೈಲಿನಿಂದಲೆ ಬೋಪಣ್ಣ ನಾಮಪತ್ರ ಸಲ್ಲಿಸಲು ಮುಂದಾದರು. ತಾಲೂಕು ಪಂಚಾಯ್ತಿ ಸದಸ್ಯ ಅಜಿತ್ ಕರುಂಬಯ್ಯ ಸೂಚಕರಾಗಿದ್ದು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಧರ್ಮಜ ಉತ್ತಪ್ಪ ನಾಮಪತ್ರವನ್ನು ಪಾಲಿಬೆಟ್ಟದಲ್ಲಿ ಚುನಾವಣಾಧಿಕಾರಿ ಗಳಿಗೆ ಸಲ್ಲಿಸಿದರು.