ಮಡಿಕೇರಿ, ಡಿ. 18: ಗ್ರಾಮ ಪಂಚಾಯಿತಿ ಚುನಾವಣೆ ದಿನದಿಂದ ದಿನಕ್ಕೆ ರಂಗು ಪಡೆಯುತ್ತಿದೆ. ಹಳ್ಳಿಗಳಲ್ಲಿ ಜನಪ್ರತಿನಿಧಿಗಳು ಮತ ಬೇಟೆಗಾಗಿ ಮತದಾರರ ಮನೆ, ಮನೆ ಭೇಟಿಯಲ್ಲಿ ನಿರತರಾಗಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆ ತಾ. 22 ರಂದು ನಡೆಯಲಿದೆ. ಮೊದಲ ಹಂತದಲ್ಲಿ ಸೋಮವಾರಪೇಟೆ ಹಾಗೂ ಮಡಿಕೇರಿ ತಾಲೂಕಿನ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದೆ.
ಜಿಲ್ಲೆಯಲ್ಲಿ 2015ರ ಗ್ರಾಮ ಪಂಚಾಯಿತಿ ಚುನಾವಣೆಗೆ ಹೋಲಿಸಿದರೆ, ಈ ಬಾರಿಯ ಚುನಾವಣೆಗೆ ಸ್ಪರ್ಧಿಸಲು ಯುವ ಪಡೆಗಳು ಹೆಚ್ಚು ಆಸಕ್ತಿ ವಹಿಸಿದ್ದಾರೆ. ವಿದ್ಯಾವಂತ ಯುವಕರೇ ಅತಿ ಹೆಚ್ಚು ಸಂಖ್ಯೆಯಲ್ಲಿ ಚುನಾವಣೆಗೆ ಸ್ಪರ್ಧಿಸಲು ಆಸಕ್ತಿ ತೋರಿದ್ದಾರೆ. ತಮ್ಮದೇ ಯುವ ಪಡೆಗಳನ್ನು ಕಟ್ಟಿ ಮತಯಾಚನೆಯಲ್ಲಿ ನಿರತರಾಗಿದ್ದಾರೆ. ತಮ್ಮ ವಾರ್ಡಿನ ಯುವ ಮತದಾರರ ಮೇಲೆ ಕಣ್ಣಿಟ್ಟಿರುವ ಯುವ ಅಭ್ಯರ್ಥಿಗಳು, ಸೋಲು, ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.
ಕೆಲ ಯುವಕರು ರಾಜಕೀಯ ಪಕ್ಷಗಳ ಬೆಂಬಲ ಪಡೆದು ಚುನಾವಣೆಗೆ ಸ್ಪರ್ಧಿಸಿದ್ದರೆ, ಬಹುತೇಕ ಯುವ ಅಭ್ಯರ್ಥಿಗಳು ರಾಜಕೀಯ ಪಕ್ಷಗಳಿಗೆ ಸೆಡ್ಡು ಹೊಡೆದು ಯಾವುದೇ ರಾಜಕೀಯ ಪಕ್ಷಗಳ ಬೆಂಬಲ ಪಡೆಯದೆ, ಸ್ವತಂತ್ರರಾಗಿ ಕಣಕ್ಕಿಳಿದಿದ್ದಾರೆ.
ಮಾಜಿ ಸದಸ್ಯರಿಗೆ ಭಯ
ಎಂ.ಎ, ಇಂಜಿನಿಯರಿಂಗ್, ಡಿಪೆÇ್ಲೀಮ ಹಾಗೂ ಇನ್ನಿತರ ಪದವಿ ಪಡೆದ ವಿದ್ಯಾವಂತ ಯುವಕರು ಈ ಬಾರಿ ಹಳ್ಳಿ ಫೈಟ್‍ನಲ್ಲಿ ಮುಂದಿದ್ದಾರೆ. ನಾವು ಶಿಕ್ಷಣವಂತರು, ನಮಗೊಂದು ಅವಕಾಶ ಮಾಡಿಕೊಡಿ, ಯುವಕರಿಗೆ ಒಂದು ಬಾರಿ ಗ್ರಾಮದ ಸೇವೆ ಮಾಡಲು ಅವಕಾಶ ಕೊಡಿ ಎಂದು ಯುವ ಅಭ್ಯರ್ಥಿಗಳು ಪ್ರಚಾರದಲ್ಲಿ ತೊಡಗಿದ್ದಾರೆ.
ಯುವ ಅಭ್ಯರ್ಥಿಗಳ ಸ್ಪರ್ಧೆಯಿಂದ ಮತ್ತೊಮ್ಮೆ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸುತ್ತಿರುವ ಮಾಜಿ ಸದಸ್ಯರಿಗೆ ಸೋಲಿನ ಭಯ ಕಾಡುತ್ತಿದೆ. ಯುವ ಅಭ್ಯರ್ಥಿಗಳಿಗೆ ಬಹುತೇಕ ಗ್ರಾಮಗಳಲ್ಲಿ ಉತ್ತಮ ಬೆಂಬಲ ದೊರಕುತ್ತಿದೆ.
ಜಿಲ್ಲೆಯಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಈ ಬಾರಿ ತಮ್ಮ ಬೆಂಬಲಿತ ಅಭ್ಯರ್ಥಿಗಳಾಗಿ ಸ್ಪರ್ಧಿಸಲು ಯುವಕ-ಯುವತಿಯರಿಗೆ ಅವಕಾಶ ಮಾಡಿಕೊಟ್ಟಿದ್ದು, ಗೆಲ್ಲುವ ಹೊಸ ಲೆಕ್ಕಾಚಾರ ಹಾಕುತ್ತಿದ್ದಾರೆ. ಮತದಾರ ಪ್ರಭು ಯುವ ಪಡೆಗಳಿಗೆ ಮಣೆ ಹಾಕುತ್ತಾ ಎಂಬದು ಕಾದು ನೋಡಬೇಕಾಗಿದೆ.
- ಕೆ.ಎಂ. ಇಸ್ಮಾಯಿಲ್ ಕಂಡಕರೆ