ಸೋಮವಾರಪೇಟೆ, ಡಿ.18: ತಾ. 22 ರಂದು ನಡೆಯಲಿರುವ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು, ಮತದಾರರ ಮನವೊಲಿಕೆಗೆ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದು, ಬೆಳಿಗ್ಗೆ-ಸಂಜೆ ಮತದಾರರ ಮನೆ ಬಾಗಿಲಿಗೆ ಎಡತಾಕುತ್ತಿದ್ದಾರೆ.

ಈಗಾಗಲೇ ಗ್ರಾ.ಪಂ. ಸದಸ್ಯರಾಗಿ ಆಯ್ಕೆಯಾಗಿ ಅನುಭವ ಹೊಂದಿರುವವರಿಗೆ ಈ ಬಾರಿ ಹೊಸ ಮುಖಗಳು ಸೆಡ್ಡು ಹೊಡೆಯುತ್ತಿದ್ದು, ‘ಹಳ್ಳಿ ಫೈಟ್’ ದಿನದಿಂದ ದಿನಕ್ಕೆ ರಂಗೇರುತ್ತಿದೆ.

ಚುನಾವಣಾಧಿಕಾರಿಗಳು ನೀಡಿರುವ ಗುರುತನ್ನು ಮತದಾರರ ಮನದೊಳಗೆ ತುಂಬಿಸಲು ಇನ್ನಿಲ್ಲದ ಪ್ರಯತ್ನದಲ್ಲಿರುವ ಅಭ್ಯರ್ಥಿಗಳು, ತಮ್ಮ ಬೆಂಬಲಿಗರೊಂದಿಗೆ ಹಗಲೂ ರಾತ್ರಿಯೆನ್ನದೇ ಮತದಾರರನ್ನು ಓಲೈಸಲು ಯತ್ನಿಸುತ್ತಿದ್ದಾರೆ.

ಕಳೆದ ಸಾಲಿನಲ್ಲಿ ಚುನಾಯಿತರಾಗಿದ್ದವರು ತಾವು ಮಾಡಿದ ಜನಸೇವೆಯನ್ನು ಜನರಿಗೆ ಮನವರಿಕೆ ಮಾಡಿಕೊಡಲು ಯತ್ನಿಸುತ್ತಿದ್ದರೆ, ಹೊಸ ಮುಖಗಳು ಹಳೆಯ ಸದಸ್ಯರ ವೈಫಲ್ಯಗಳನ್ನು ತಿಳಿಸುತ್ತಾ, ತಮ್ಮ ಭರವಸೆಗಳನ್ನು ಜನರಿಗೆ ಮುಟ್ಟಿಸುವ ಪ್ರಯತ್ನ ನಡೆಸುತ್ತಿದ್ದಾರೆ.

ರಾಜಕೀಯ ರಹಿತವಾಗಿ ನಡೆಯುವ ಚುನಾವಣೆ ಎಂದು ಬಿಂಬಿತವಾಗಿದ್ದರೂ ಸಹ, ಅಭ್ಯರ್ಥಿಗಳು ಒಂದಿಲ್ಲೊಂದು ರಾಜಕೀಯ ಪಕ್ಷಗಳಲ್ಲಿ ಗುರುತಿಸಿಕೊಂಡವರೇ ಆಗಿರುವದರಿಂದ ‘ಹಳ್ಳಿ ರಾಜಕೀಯ’ ಗರಿಗೆದರುತ್ತಿದೆ.

ರಾಜಕೀಯ ಪಕ್ಷಗಳ ಗುರುತು ಈ ಚುನಾವಣೆಯಲ್ಲಿ ಇಲ್ಲದಿರುವದರಿಂದ ತಮಗೆ ನೀಡಿದ ಚಿಹ್ನೆಗಳನ್ನು ಮತದಾರರ ಮನಸ್ಸಿನೊಳಗೆ ಇಳಿಸುವ ಯತ್ನ ನಡೆಯುತ್ತಿದೆ. ಸಾಧಾರಣವಾಗಿ ಎಲ್ಲೆಡೆಯೂ ಪಕ್ಷ ಬೆಂಬಲಿತ ಅಭ್ಯರ್ಥಿಗಳಿದ್ದು, ಇವರುಗಳಿಗೆ ಅದೇ ಪಕ್ಷದ ಕಾರ್ಯಕರ್ತರು ಬಂಡಾಯವಾಗಿ ಸ್ಪರ್ಧಿಸುತ್ತಿರುವದರಿಂದ ದುಗುಡ ಶುರುವಾಗಿದೆ.

ಈ ಮಧ್ಯೆ ಅಭ್ಯರ್ಥಿಗಳ ಜಾತಿ ಲೆಕ್ಕಾಚಾರವೂ ನಡೆಯುತ್ತಿದೆ. ಭಾರತೀಯ ಜನತಾ ಪಕ್ಷ ಬೆಂಬಲಿತ ಅಭ್ಯರ್ಥಿಗಳಿಗೆ ತಾಲೂಕಿನಾದ್ಯಂತ ಹೆಚ್ಚಿನ ಬಂಡಾಯ ಇರುವದು ಕಂಡುಬರುತ್ತಿದೆ. ಕೊಡಗು ಸೇರಿದಂತೆ ರಾಜ್ಯ, ರಾಷ್ಟ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಪಕ್ಷವಾಗಿರುವ ಹಿನ್ನೆಲೆ ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಿದ್ದು, ಪಕ್ಷದ ಅಧಿಕೃತ ಬೆಂಬಲ ಸಿಗದವರು ಪ್ರತ್ಯೇಕ ಸಿಂಡಿಕೇಟ್ ಮಾಡಿಕೊಂಡು ಸ್ಪರ್ಧಾ ಕಣದಲ್ಲಿದ್ದಾರೆ.

ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆ ಭಾರೀ ಪ್ರಮಾಣದ ಪಕ್ಷಾಂತರಗಳೂ ನಡೆಯುತ್ತಿದ್ದು, ಹಲವಷ್ಟು ಕಾರ್ಯಕರ್ತರು ಪಕ್ಷನಿಷ್ಠೆ ಬದಲಿಗೆ ತಮಗೆ ಅವಕಾಶ ನೀಡಿದ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

ತಾಲೂಕಿನ ಮಟ್ಟಿಗೆ ಹಲವು ವಾರ್ಡ್‍ಗಳಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಸೀಟು ಹಂಚಿಕೆ ಮಾಡಿಕೊಂಡಿರುವದು ಕಂಡುಬಂದಿದೆ. ಸ್ಥಳೀಯವಾಗಿ ವಾರ್ಡ್ ಮಟ್ಟದಲ್ಲಿ ಎರಡೂ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡಿರುವದು ವಿಶೇಷ.

ಹಾನಗಲ್ಲು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಆಡಳಿತ ನಡೆಸಿರುವ ಮೂವರು ಮಹಿಳಾ ಸದಸ್ಯರು ಈ ಬಾರಿ ಮತ್ತೆ ಸ್ಪರ್ಧಾ ಕಣದಲ್ಲಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಬೆಂಬಲಿಗರಾಗಿದ್ದ ಮಾಜಿ ಅಧ್ಯಕ್ಷರುಗಳಾದ ತಿಲಕ ರೈ, ಚಂದ್ರಿಕಾ ಧರ್ಮೇಶ್, ರೇಣುಕ ವೆಂಕಟೇಶ್ ಅವರು ಈ ಬಾರಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾಗಿ ಕಣದಲ್ಲಿದ್ದಾರೆ.

ಈ ಪಂಚಾಯಿತಿಯ ಕೆಲವು ವಾರ್ಡ್‍ಗಳಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದು, ಬಿಜೆಪಿಗೆ ಸೆಡ್ಡು ಹೊಡೆದಿದೆ. ಗೌಡಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಬೆಂಬಲಿತರ ನಡುವೆ ಸ್ಪರ್ಧೆ ಇದೆ.

ಐಗೂರು ಗ್ರಾ.ಪಂ.ನಲ್ಲಿ ಜೆಡಿಎಸ್-ಕಾಂಗ್ರೆಸ್ ಸೀಟುಹಂಚಿಕೆ ಮಾಡಿಕೊಂಡು ಬಿಜೆಪಿಗೆ ಸೆಡ್ಡು ಹೊಡೆದಿದ್ದರೆ, ಕಿರಗಂದೂರು ಗ್ರಾ.ಪಂ.ನಲ್ಲಿ ಕಾಂಗ್ರೆಸ್-ಬಿಜೆಪಿ ಬೆಂಬಲಿತ ನಡುವೆ ಸ್ಪರ್ಧೆ ಇರುವದು ಮೇಲ್ನೋಟಕ್ಕೆ ಕಂಡುಬಂದಿದೆ.

ಮಾಜಿ ಸಚಿವ ಬಿ.ಎ. ಜೀವಿಜಯ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿರುವದರಿಂದ ಜೆಡಿಎಸ್‍ನ ಕಾರ್ಯಕರ್ತರು ಕೊಂಚ ವಿಚಲಿತರಾಗಿರುವಂತೆ ಕಂಡುಬರುತ್ತಿದೆ. ಜೆಡಿಎಸ್‍ನ ನಿಷ್ಠಾವಂತರು ಮಾತ್ರ ಕೆಲವೆಡೆ ಸ್ಪರ್ಧಾ ಕಣದಲ್ಲಿದ್ದರೆ, ಹಲವು ಕಡೆಗಳಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಕಾಣಸಿಗುತ್ತಿದೆ.

ಸುಂಟಿಕೊಪ್ಪ, ಕೂಡುಮಂಗಳೂರು, ಶನಿವಾರಸಂತೆ, ಕೊಡ್ಲಿಪೇಟೆ, ಶಾಂತಳ್ಳಿ, ಚೌಡ್ಲು, ಹೆಬ್ಬಾಲೆ, ತೊರೆನೂರು, ಕೂಡಿಗೆ, 7ನೇ ಹೊಸಕೋಟೆ, ಮಾದಾಪುರ, ತೋಳೂರುಶೆಟ್ಟಳ್ಳಿ ಗ್ರಾ.ಪಂ.ಗಳಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರ ನಡುವೆ ಹಣಾಹಣಿ ಏರ್ಪಟ್ಟಿದೆ.

ತಾಲೂಕಿನ 40 ಗ್ರಾಮ ಪಂಚಾಯಿತಿಗಳ 462 ಸ್ಥಾನಗಳಿಗೆ 1488 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿದ್ದಾರೆ. ಪ್ರಮುಖ ರಾಜಕೀಯ ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳೂ ಸೇರಿದಂತೆ ಬಂಡಾಯ ಸ್ಪರ್ಧಿಗಳು, ಪಕ್ಷೇತರರು ಮತದಾರರ ಮನವೊಲಿಕೆಗೆ ಶತಾಯಗತಾಯ ಪ್ರಯತ್ನ ಮುಂದುವರೆಸಿದ್ದಾರೆ.

ಸೋಮವಾರಪೇಟೆ ತಾಲೂಕಿನಲ್ಲಿ ಈಗಾಗಲೇ 19 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ತೋಳೂರುಶೆಟ್ಟಳ್ಳಿಯ ಕೂತಿ ಗ್ರಾಮದಲ್ಲಿ ಚುನಾವಣೆಗೆ ಬಹಿಷ್ಕಾರ ಹಾಕಿರುವ ಹಿನ್ನೆಲೆ 2 ವಾರ್ಡ್‍ಗಳಿಗೆ ಯಾರೂ ನಾಮಪತ್ರ ಸಲ್ಲಿಸಿಲ್ಲ.

ತಾಲೂಕಿನ ಸುಂಟಿಕೊಪ್ಪದ 20 ಸ್ಥಾನಗಳು ಹಾಗೂ ಕೂಡುಮಂಗಳೂರು ಗ್ರಾಪಂನ 24 ಸ್ಥಾನಗಳಿಗೆ ಅತೀ ಹೆಚ್ಚಿನ ಅಭ್ಯರ್ಥಿಗಳಿದ್ದು, ಈ ಎರಡು ಗ್ರಾ.ಪಂ.ನಲ್ಲಿ ತಲಾ 87 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಇನ್ನು ಗರ್ವಾಲೆ ಗ್ರಾಪಂನ 5 ಸ್ಥಾನಗಳಿಗೆ ಕಡಿಮೆ ಸಂಖ್ಯೆ ಅಂದರೆ 14 ಮಂದಿ ಕಣದಲ್ಲಿದ್ದಾರೆ. ಕೆಲ ವಾರ್ಡ್‍ಗಳಲ್ಲಿ ಪರಿಶಿಷ್ಟ ಮಹಿಳೆಯರು ಲಭ್ಯವಿಲ್ಲದ ಕಾರಣ 19 ರಲ್ಲಿ 6 ಮಂದಿ ಪರಿಶಿಷ್ಟ ಪಂಗಡದ ಮಹಿಳೆಯರು ಮೀಸಲಾತಿ ಹಿನ್ನೆಲೆ ಅವಿರೋಧವಾಗಿ ಆಯ್ಕೆಯಾಗಿರುವದು ಈ ಬಾರಿಯ ವಿಶೇಷಗಳಲ್ಲೊಂದು.

- ವಿಜಯ್ ಹಾನಗಲ್