ಗೋಣಿಕೊಪ್ಪಲು, ಡಿ. 18: ಬಾಳೆಲೆ ಗ್ರಾಮದ ಹಿರಿಯರಾದ ಪೋಡಮಾಡ ಉತ್ತಪ್ಪನವರ ಸಾವಿನ ವಿಚಾರದಲ್ಲಿ ಎದ್ದಿರುವ ಗೊಂದಲಗಳನ್ನು ಪೊಲೀಸ್ ಇಲಾಖೆಯು ಸಮಗ್ರ ತನಿಖೆ ನಡೆಸುವ ಮೂಲಕ ನಾಗರಿಕ ಸಮಾಜಕ್ಕೆ ಸ್ಪಷ್ಟ ಸಂದೇಶ ನೀಡುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಆರ್. ಪರಶುರಾಮ್ ಮುಂದಾಳತ್ವದಲ್ಲಿ ಪದಾಧಿಕಾರಿಗಳು ವೀರಾಜಪೇಟೆ ತಾಲೂಕಿನ ಡಿವೈಎಸ್ಪಿ ಜಯಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.

ಪೊನ್ನಂಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬಾಳೆಲೆ ಗ್ರಾಮದಲ್ಲಿ ನ. 18 ರಂದು ಉತ್ತಪ್ಪ ಅವರ ಮೇಲೆ ಬಾಳೆಲೆ ಪಟ್ಟಣದಲ್ಲಿ ದಲಿತ ಯುವಕರು ಮಾರಣಾಂತಿಕ ಹಲ್ಲೆ ನಡೆಸಿದ ಆರೋಪವು ಕೇಳಿ ಬರುತ್ತಿರುವುದರಿಂದ. ಈ ವಿಷಯದಲ್ಲಿ ಲಭ್ಯವಿರುವ ಸಿ.ಸಿ. ಕ್ಯಾಮರಾ ದೃಶ್ಯಾವಳಿಗಳನ್ನು ಇಲಾಖೆಯು ಸಮಗ್ರವಾಗಿ ತನಿಖೆಗೆ ಒಳಪಡಿಸುವ ಮೂಲಕ ಅನ್ಯಾಯ ಮಾಡಿದ ವ್ಯಕ್ತಿಗಳು ಯಾರೇ ಆದರೂ ಶಿಕ್ಷೆಗೆ ಒಳಪಡಿಸಬೇಕು. ಸಮಾಜ ಸೇವಕರಾದ ಪೋಡಮಾಡ ಉತ್ತಪ್ಪನವರ ಮರಣವು ನೋವಿನ ವಿಚಾರವಾಗಿದೆ.

ಇವರ ವಿಚಾರದಲ್ಲಿ ಪ್ರಸ್ತಾಪವಾಗುತ್ತಿರುವ ಚರ್ಚೆಗಳಿಂದ ಪೊಲೀಸ್ ತನಿಖೆ ಹಾದಿ ತಪ್ಪಬಾರದು ಕೊಡಗಿನಲ್ಲಿ ದಲಿತರು ಹಾಗೂ ಇತರ ವರ್ಗದವರು ಉತ್ತಮ ಬಾಂಧವ್ಯವನ್ನು ಕಂಡುಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದರೆ ಕೆಲವರು ಎರಡು ಸಮುದಾಯದ ನಡುವೆ ಇರುವ ಬಾಂಧವ್ಯವನ್ನು ಹಾಳುಗೆಡವಲು ಪ್ರಯತ್ನಿಸುತ್ತಿರುವುದು ಸರಿಯಲ್ಲ. ಇದರಿಂದ ದಲಿತ ಸಮುದಾಯ ತಲೆ ತಗ್ಗಿಸುವಂತಾಗಿದೆ. ಪೊಲೀಸ್ ಇಲಾಖೆ ಹಾಗೂ ಲಭ್ಯವಿರುವ ಸಿಸಿ. ಕ್ಯಾಮರಾದಲ್ಲಿ ಸೆರೆ ಆಗಿರುವ ದೃಶ್ಯಾವಳಿಗಳನ್ನು ಸಮಗ್ರವಾಗಿ ಪರಿಶೀಲಿಸಿ ತನಿಖೆ ಆಗಬೇಕು ಎಂದಿದ್ದಾರೆ.

ಪೊಲೀಸರು ವೈದ್ಯರಿಂದ ಮರಣೋತ್ತರ ಪರೀಕ್ಷೆಯ ದೃಢೀಕರಣ ಪತ್ರ ಪಡೆದು ಸತ್ಯಾಸತ್ಯತೆಯನ್ನು ಜನರ ಮುಂದಿಡುವ ಮೂಲಕ ಈ ಪ್ರಕರಣಕ್ಕೆ ಅಂತ್ಯ ಹಾಡಬೇಕೆಂದು ಮನವಿ ಮಾಡಿದ್ದಾರೆ. ಭೇಟಿಯ ವೇಳೆ ಜಿಲ್ಲಾ ಮುಖಂಡರಾದ ಕುಮಾರ್ ಮಹಾದೇವ್, ಚೆಲುವ ಮುಂತಾದವರು ಹಾಜರಿದ್ದರು.