ಸೋಮವಾರಪೇಟೆ,ಡಿ.18: ಕಳೆದ 2018ರಲ್ಲಿ ಉಂಟಾದ ಜಲಪ್ರಳಯದಿಂದ ಸೂರು ಕಳೆದುಕೊಂಡ ನಿರ್ವಸತಿಗರಿಗೆ ಸೂರು ಕಲ್ಪಿಸಲಾಗಿರುವ ಮಾದಾಪುರ ಗ್ರಾ.ಪಂ. ವ್ಯಾಪ್ತಿಯ ಜಂಬೂರು ಆಶ್ರಯ ಬಡಾವಣೆಯಲ್ಲಿ ಒಳಚರಂಡಿ ವ್ಯವಸ್ಥೆ ಅಸಮರ್ಪಕವಾಗಿದ್ದು, ಸಂಬಂಧಿಸಿದವರು ಈ ಬಗ್ಗೆ ಗಮನ ಹರಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರ ಹೆಸರಿನಲ್ಲಿ ನಿರ್ಮಾಣವಾಗಿರುವ ನೂತನ ಬಡಾವಣೆಯ ಒಳಚರಂಡಿ ವ್ಯವಸ್ಥೆ ಸಮರ್ಪಕವಾಗದ ಹಿನ್ನೆಲೆ ಅನೈರ್ಮಲ್ಯದ ತಾಣವಾಗುತ್ತಿದೆ. ಕೆಲವೆಡೆ ಚರಂಡಿಯಲ್ಲಿನ ಕೊಳಚೆ ನೀರು ಪಕ್ಕದ ಕಾಫಿ ತೋಟದೊಳಗೆ ಹರಿದರೆ, ಇನ್ನು ಕೆಲವೆಡೆ ಮನೆಗಳ ಮುಂಭಾಗವೇ ಕೊಳಚೆ ನೀರು ಶೇಖರಣೆಗೊಳ್ಳುತ್ತಿದೆ.
ಬಡಾವಣೆಯ ಕೊಳಚೆ ನೀರು ತೋಟದೊಳಗೆ ಬರುತ್ತಿರುವದರಿಂದ ತೋಟ ಮಾಲೀಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದರೆ, ಇನ್ನು ಕೆಲವೆಡೆ ಮನೆಯ ಮುಂಭಾಗವೇ ಕೊಳಚೆ ನೀರು ನಿಲ್ಲುತ್ತಿರುವದರಿಂದ ಸ್ಥಳೀಯ ನಿವಾಸಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಂಭವವಿದೆ ಎಂದು ಕೊಡಗು ರಕ್ಷಣಾ ವೇದಿಕೆಯ ಮಾದಾಪುರ ಘಟಕದ ಅಧ್ಯಕ್ಷ ಜಾನ್ಸನ್ ಕಳವಳ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಮನೆಗಳ ಮುಂದೆ ಕೊಳಚೆ ನೀರು ಶೇಖರಣೆಯಾಗುತ್ತಿರುವದರಿಂದ ಕ್ರಿಮಿ ಕೀಟಗಳ ಉತ್ಪತ್ತಿ ಹೆಚ್ಚುತ್ತಿದೆ. ಬಡಾವಣೆಯೂ ಅನೈರ್ಮಲ್ಯದಿಂದ ದುರ್ವಾಸನೆಯ ತಾಣವಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳ ಗಮನ ಸೆಳೆದಿದ್ದರೂ ಪ್ರಯೋಜನ ಶೂನ್ಯವಾಗಿದೆ ಎಂದು ಜಾನ್ಸನ್ ಆರೋಪಿಸಿದ್ದಾರೆ.
ಬಡಾವಣೆ ನಿರ್ಮಾಣ ಸಂದರ್ಭ ಕೊಳಚೆ ನೀರಿನ ವೈಜ್ಞಾನಿಕ ವಿಲೇವಾರಿಗೆ ಯಾವದೇ ಯೋಜನೆಯನ್ನು ಕಾರ್ಯರೂಪಕ್ಕೆ ತರದ ಹಿನ್ನೆಲೆ ಸಮಸ್ಯೆ ಉಂಟಾಗಿದೆ. ತೋಟದೊಳಗೆ ಕೊಳಚೆ ನೀರು ಹರಿಯುತ್ತಿರುವ ಬಗ್ಗೆ ಮಾಲೀಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಬಡಾವಣೆಯ ನಿವಾಸಿಗಳೂ ಅಸಹಾಯಕರಾಗಿದ್ದಾರೆ. ಹಲವಾರು ಬಾರಿ ಸಮಸ್ಯೆಯ ಕುರಿತು ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಇನ್ನೂ ಕೂಡ ಸ್ಪಂದನ ದೊರೆತಿಲ್ಲ. ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಸಮಸ್ಯೆಯನ್ನು ಖುದ್ದು ಪರಿಶೀಲಿಸಿ, ಸಮಸ್ಯೆ ನಿವಾರಣೆಗೆ ಮುಂದಾಗಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.