ಗೋಣಿಕೊಪ್ಪ ವರದಿ, ಡಿ. 18 ; ಗೋಣಿಕೊಪ್ಪ ದಿ. ಮರ್ಚೆಂಟ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ 2019-20 ನೇ ಸಾಲಿನಲ್ಲಿ 33.52 ಲಕ್ಷ ರೂ. ನಿವ್ವಳ ಲಾಭದಲ್ಲಿದೆ ಎಂದು ದಿ. ಮರ್ಚೆಂಟ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ಅಧ್ಯಕ್ಷ ಕಿರಿಯಮಾಡ ಅರುಣ್ ಪೂಣಚ್ಚ ತಿಳಿಸಿದ್ದಾರೆ.

ಕೊಡಗಿನಲ್ಲಿ ನಡೆದ ಪ್ರಕೃತಿ ವಿಕೋಪ, ಕೊರೊನಾ ಸಂಕಷ್ಟದ ಪರಿಸ್ಥಿತಿಯ ನಡುವೆಯೂ ಶೇ. 76.72 ಸಾಲ ವಸೂಲಾತಿಯಾಗಿದೆ. ಬಡ್ಡಿ ಪಾವತಿಸಿ ಸಾಲ ನವೀಕರಣಕ್ಕೆ ಅವಕಾಶ ನೀಡುವ ಮೂಲಕ ಸಾಲ ಪಡೆದವರಿಗೆ ಸೊಸೈಟಿ ಬೆಂಬಲ ನೀಡಿದೆ. ಇದರ ಫಲವಾಗಿ ಲಾಭಾಂಶ ಕೂಡ ಹೆಚ್ಚಾಗಿದೆ. ಸದಸ್ಯರಿಗೆ ಶೇ. 15 ರಷ್ಟು ಡೆವಿಡೆಂಟ್ ನೀಡಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸೊಸೈಟಿಯಲ್ಲಿ 796 ಸದಸ್ಯರಿದ್ದು, 41.80 ಲಕ್ಷ ಠೇವಣಿ ಇದೆ. ಪಿಗ್ಮಿ ಠೇವಣಿ, ಉಳುವರಿ ಠೇವಣಿ, ನಿರಖು ಠೇವಣಿ ಮತ್ತು ಇತರೆ ಠೇವಣಿ ಸೇರಿ ಒಟ್ಟು 13.08 ಕೋಟಿ ಠೇವಣಾತಿ ಇದೆ. ಜಾಮೀನು ಸಾಲ, ಆಭರಣ ಸಾಲ, ದಿನವಹಿ ಸಾಲ, ಪಿಗ್ಮಿ ಸಾಲ, ನಗದು ಸಾಲ, ಓಡಿ ಸಾಲ, ಇತರೆ ಸಾಲ ಸೇರಿ 12.37 ಕೋಟಿ ಸಾಲ ನೀಡಲಾಗಿದೆ. ಚಿನ್ನಾಭರಣಗಳ ಮೇಲೆ ಗರಿಷ್ಠ ಸಾಲ ಸೌಲಭ್ಯವನ್ನು ಗ್ರಾಹಕರಿಗೆ ನೀಡಲು ಆದ್ಯತೆ ನೀಡಲಾಗುತ್ತಿದೆ ಎಂದರು.

ಗೋಣಿಕೊಪ್ಪ, ವೀರಾಜಪೇಟೆ, ಸಿದ್ದಾಪುರ ಶಾಖೆ ಸೇರಿ ಕೆಡಿಸಿಸಿ ಬ್ಯಾಂಕ್ ನಿರಖು ಠೇವಣಿ 2.70 ಕೋಟಿ ಇದೆ. ವರ್ಷದಿಂದ ವರ್ಷಕ್ಕೆ ಲಾಭ ಹೆಚ್ಚಾಗುತ್ತಿದ್ದು, ಸಾಲ ವಸೂಲಾತಿ ಶೇ. 76.72 ಸಾಧನೆ ಮಾಡಿದೆ. ವಸೂಲಾತಿಯ ಪ್ರಮಾಣ ಪ್ರಕೃತಿ ವಿಕೋಪ, ಕೊರೊನಾ ಸಂಕಷ್ಟದಿಂದ ಕಡಿಮೆಯಾಗಿದೆ. ಸುಸ್ತಿ ಸಾಲ ಶೇ. 23.28 ಬಾಕಿ ಉಳಿದಿದೆ. ಶೇ. 100 ಸಾಧನೆಗೆ ಮುಂದಾಗಿದ್ದೇವೆ. ವೀರಾಜಪೇಟೆ, ಶ್ರೀಮಂಗಲ ಶಾಖೆಗಳಲ್ಲಿ ಹೆಚ್ಚು ಪ್ರಗತಿ ಕಾಣುತ್ತಿದೆ ಎಂದರು.

ಸೊಸೈಟಿ ಕಟ್ಟಡದಿಂದ ಮಾಸಿಕ 14 ಸಾವಿರ ಬಾಡಿಗೆ ರೂಪದಲ್ಲಿ ಬರುತ್ತಿದೆ. ಇದರಲ್ಲಿ 16 ಲಕ್ಷ ರೂ. ನಿರಖು ಠೇವಣಿ ಇಡಲಾಗಿದೆ. ಕಟ್ಟಡ ನಿಧಿಯಲ್ಲಿ ರೂ. 56 ಲಕ್ಷ ಠೇವಣಿ ಇದ್ದು, ರೂ. 27.25 ಲಕ್ಷ ರೂ. ವೆಚ್ಚದಲ್ಲಿ ಸೊಸೈಟಿ ಮುಖ್ಯ ಕಟ್ಟಡದಲ್ಲಿ ವಸತಿ ಕೋಣೆ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಪಟ್ಟಣದಲ್ಲಿ ನಿವೇಶನ ಖರೀದಿಸಿ ವಾಣಿಜ್ಯ ಕಟ್ಟಡ ನಿರ್ಮಿಸಲು ಕೂಡ ಯೋಜನೆ ಇದೆ ಎಂದರು.

ಗೋಣಿಕೊಪ್ಪ, ವೀರಾಜಪೇಟೆ, ಶ್ರೀಮಂಗಲ ಶಾಖೆ ಸೇರಿ 25 ಪಿಗ್ಮಿ ಸಂಗ್ರಹಕಾರರಿದ್ದು, ಪಿಗ್ಮಿ ವ್ಯವಹಾರದಲ್ಲಿ ಗೋಣಿಕೊಪ್ಪ ಶಾಖೆಯಲ್ಲಿ ಮಾಸಿಕವಾಗಿ ಸರಾಸರಿ 70-80 ಲಕ್ಷ, ವೀರಾಜಪೇಟೆಯಲ್ಲಿ 60-70 ಲಕ್ಷ, ಶ್ರೀಮಂಗಲದಲ್ಲಿ 10-15 ಲಕ್ಷ ರೂ. ಸಂಗ್ರಹವಾಗುತ್ತಿದೆ.

ನಿರಖು ಠೇವಣಿದಾರರಿಗೆ ವರ್ಷಕ್ಕೆ ಶೇ. 8, 2 ವರ್ಷಕ್ಕೆ 8.25, 3 ವರ್ಷಕ್ಕೆ 8.50, ಹಿರಿಯ ನಾಗರಿಕರಿಗೆ ಶೇ. 0.05 ಬಡ್ಡಿ ನೀಡುತ್ತಿರುವುದರಿಂದ ಠೇವಣಿ ಇಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇಲ್ಲಿ ಸ್ಥಾಪಿಸಿರುವ ಈ ಸ್ಟ್ಯಾಂಪಿಂಗ್ ವ್ಯವಸ್ಥೆ ಸಾರ್ವಜನಿಕರಿಗೆ ಹೆಚ್ಚು ಸಹಕಾರಿಯಾಗುತ್ತಿರುವುದರಿಂದ ಪೊನ್ನಂಪೇಟೆ, ಶ್ರೀಮಂಗಲ ವ್ಯಾಪ್ತಿಗೂ ವಿಸ್ತರಿಸಲಾಗುವುದು ಎಂದರು.

ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಸೊಸೈಟಿ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಆಡಳಿತ ಮಂಡಳಿ ಸದಸ್ಯರ ಮಾಸಿಕ ಸಭೆಯ ಗೌರವ ಧನವನ್ನು ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೀಡಲಾಗುತ್ತಿದೆ. ಇದರಿಂದ ಸುಮಾರು 6 ವಿದ್ಯಾರ್ಥಿಗಳಿಗೆ ತಲಾ 5 ಸಾವಿರ ಹಣ ದೊರೆಯುವಂತಾಗಿದೆ ಎಂದರು.

ಗೋಷ್ಠಿಯಲ್ಲಿ ಉಪಾಧ್ಯಕ್ಷ ಸುನಿಲ್ ಮಾದಪ್ಪ, ಸಿಇಒ ಬಿ. ಇ. ಕಿರಣ್, ನಿರ್ದೇಶಕರಾದ ಸುಮಿ ಸುಬ್ಬಯ್ಯ, ಪಿ. ಈ ರಾಜಶೇಖರ್, ಕೆ. ಪಿ. ಪ್ರಶಾಂತ್, ಸಿ. ಡಿ. ಮಾದಪ್ಪ, ಎ. ಕೆ. ಉಮ್ಮರ್, ಎ. ಜೆ. ಬಾಬು, ಬಿ. ಎನ್. ಪ್ರಕಾಶ್ ಇದ್ದರು.