ಸಿದ್ದಾಪುರ, ಡಿ. 18: ಹಲವು ವರ್ಷಗಳಿಂದ ಮಾಲ್ದಾರೆ ಭಾಗದ ಯುವ ಕ್ರೀಡಾಪಟುಗಳಿಗೆ ಸೂಕ್ತ ಮೈದಾನದ ವ್ಯವಸ್ಥೆ ಇಲ್ಲದೆ ರಸ್ತೆ ಬದಿಯಲ್ಲಿ ಆಟವಾಡುತ್ತಿದ್ದು, ಇದುವರೆಗೂ ಸ್ಪಂದಿಸದೆ ಕ್ರೀಡಾಪಟುಗಳನ್ನು ಕಡೆಗಣಿಸುತ್ತಿರುವ ಹಿನ್ನೆಲೆ ಈ ಬಾರಿಯ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಬಹಿಷ್ಕರಿಸಲು ಮುಂದಾಗಿರುವುದಾಗಿ ಮಾಲ್ದಾರೆ ಯುವಕ ಸಂಘದವರು ತಿಳಿಸಿದ್ದಾರೆ.

ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕ ಆಟದ ಮೈದಾನವು ಇಲ್ಲದೆ ಯುವ ಕ್ರೀಡಾಪಟುಗಳು ಕ್ರೀಡಾಭ್ಯಾಸದಿಂದ ದೂರ ಉಳಿದಿದ್ದು, ಗ್ರಾಮೀಣ ಕ್ರೀಡಾಕೂಟಗಳನ್ನು ಆಯೋಜನೆ ಮಾಡಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮಾಲ್ದಾರೆಯ ಸರ್ಕಾರಿ ಶಾಲೆ ಮುಂಭಾಗದ ರಸ್ತೆ ಬದಿಯ ಇಕ್ಕಟ್ಟಾದ ಜಾಗದಲ್ಲಿ ಕ್ರೀಡಾಪಟುಗಳು ಆಟವಾಡುತ್ತಿದ್ದಾರೆ. ಮಾಲ್ದಾರೆ, ಸಿದ್ದಾಪುರ ಮಾರ್ಗದ ಮುಖ್ಯ ರಸ್ತೆ ಬದಿಯಲ್ಲಿ ಆಟವಾಡುವುದರಿಂದ ಸಣ್ಣಪುಟ್ಟ ಅಪಘಾತಗಳು ಸಂಭವಿಸಿವೆ. 5 ವರ್ಷಗಳ ಹಿಂದೆ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಜಾಗದಲ್ಲಿ ಆಟವಾಡುತ್ತಿದ್ದ ಸಂದರ್ಭ ತೋಡಿಗೆ ಬಿದ್ದು ಕ್ರೀಡಾಪಟುವೊಬ್ಬ ದುರ್ಮರಣಗೊಂಡಿದ್ದಾನೆ. ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಜಾಗದಲ್ಲಿ ತೇಗದ ಮರಗಳು ಬೆಳೆದು ನಿಂತಿದ್ದು, ಗ್ರಾಮ ಪಂಚಾಯಿತಿಯ ಮೂಲಕವು ಅರಣ್ಯ ಇಲಾಖೆಗೆ ಮರ ತೆರವುಗೊಳಿಸಲು ಮನವಿ ಮಾಡಲಾಗಿದ್ದರೂ ಯಾವುದೇ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯತೆ ತೋರುತ್ತಿದ್ದಾರೆ. ಈ ಭಾಗದಲ್ಲಿ ಪೈಸಾರಿ ಜಾಗಗಳಿದ್ದರೂ ಒತ್ತುವರಿ ತೆರವುಗೊಳಿಸಿ ಸಾರ್ವಜನಿಕ ಆಟದ ಮೈದಾನ ನಿರ್ಮಾಣ ಮಾಡಲು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮುಂದಾಗುತ್ತಿಲ್ಲ. ಶಾಶ್ವತವಾಗಿ ಆಟದ ಮೈದಾನಕ್ಕೆ ಜಾಗ ಗುರುತಿಸಿ ಕೊಡದಿದ್ದಲ್ಲಿ ಮಾಲ್ದಾರೆಯ ಜನಪರ ಸಂಘ ಹಾಗೂ ವಿವಿಧ ಸಂಘ-ಸಂಸ್ಥೆಗಳ ಯುವಕರು ಒಟ್ಟಾಗಿ ಗ್ರಾಮ ಪಂಚಾಯಿತಿ ಚುನಾವಣೆ ಬಹಿಷ್ಕರಿಸುವುದಾಗಿ ಎಚ್ಚರಿಸಿದ್ದಾರೆ.

ಈ ಸಂದರ್ಭದಲ್ಲಿ ಹಿರಿಯ ವಕೀಲ ಹೇಮಚಂದ್ರ, ಜನಪರ ಸಂಘದ ಅಧ್ಯಕ್ಷ ಅಂಟೋನಿ, ಸಾಮಾಜಿಕ ಕಾರ್ಯಕರ್ತ ಅನಿಫ್, ಶ್ರೀಜಿತ್, ಪ್ರವೀಣ್, ವಿನಿಲ್, ರವಿ, ಇರ್ಲಪ್ಪ, ಅಲೋಕ್, ಅಗಸ್ಟಿನ್, ಲಿಂಗ, ಶಶಿ, ಅರ್ಷಾದ್, ಅಯುಬ್, ಜೈ ಕಿರಣ್, ಜಸೀರ್, ಧರ್ಮ, ಶೌಕತ್ ಅಲಿ, ಅನಿಶ್, ಮತ್ತಿತರರು ಹಾಜರಿದ್ದರು.