ಕುಶಾಲನಗರ, ಡಿ. 17: ಕುಶಾಲನಗರ ಮೂಲದ ಐಎಎಸ್ ಅಧಿಕಾರಿ ಬಳ್ಳಾರಿ ಜಿಲ್ಲಾಧಿಕಾರಿಯಾಗಿದ್ದ ಎಸ್.ಎಸ್. ನಕುಲ್ ಅವರನ್ನು ಕೇಂದ್ರ ಸೇವೆಗೆ ನಿಯೋಜಿಸಲಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರ ಕಾರ್ಯದರ್ಶಿಯಾಗಿ ನೇಮಿಸಿ ಆದೇಶ ಹೊರಡಿಸಲಾಗಿದೆ. ಕರ್ನಾಟಕ ಐಎಎಸ್ ತಂಡದ ಅಧಿಕಾರಿಯಾಗಿರುವ ನಕುಲ್ ಕುಶಾಲನಗರದ ಉದ್ಯಮಿ ಎಸ್.ಕೆ. ಸತೀಶ್-ಶೋಭಾ ದಂಪತಿಗಳ ಪುತ್ರರಾಗಿದ್ದು ರಾಜ್ಯದ ಹಲವೆಡೆ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.(ಮೊದಲ ಪುಟದಿಂದ) 2010 ರ ತಂಡದ ಐಎಎಸ್ ಬ್ಯಾಚ್‍ನಲ್ಲಿ ಆಯ್ಕೆಗೊಂಡ ನಕುಲ್ ಬಾಗಲಕೋಟೆಯಲ್ಲಿ ಉಪ ವಿಭಾಗಾಧಿಕಾರಿಯಾಗಿ ನಂತರ ಬೆಂಗಳೂರು ತದನಂತರ ಕಾರವಾರದಲ್ಲಿ ಜಿಲ್ಲಾಧಿಕಾರಿಯಾಗಿ ಕಳೆದ ಎರಡು ವರ್ಷಗಳಿಂದ ಬಳ್ಳಾರಿಯಲ್ಲಿ ಸೇವೆಯಲ್ಲಿದ್ದರು.

ಕೇಂದ್ರ ಸೇವೆಗೆ ನಿಯೋಜನೆಯಾಗಿರುವ ಬಗ್ಗೆ ಸಂತಸ ವ್ಯಕ್ತಪಡಿಸಿರುವ ನಕುಲ್ ಪೋಷಕರಾದ ಎಸ್.ಕೆ. ಸತೀಶ್ ಮತ್ತು ಶೋಭಾ ದಂಪತಿಗಳು ಶಕ್ತಿಯೊಂದಿಗೆ ಪ್ರತಿಕ್ರಿಯಿಸಿದ್ದು ದೂರದ ದೆಹಲಿಗೆ ತೆರಳುವುದು ಅಲ್ಪ ಬೇಸರ ಎನಿಸಿದರೂ ಕೇಂದ್ರ ಸರಕಾರದ ಕ್ಯಾಬಿನೆಟ್ ಸಚಿವಾಲಯದಲ್ಲಿ ಹೆಚ್ಚಿನ ಅನುಭವ ಪಡೆಯಲು ಸಾಧ್ಯ ಎಂದರು. ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಅಧಿಸೂಚನೆ ತೆರವಾದ ಬೆನ್ನಲ್ಲೇ ನಕುಲ್ ದೆಹಲಿಗೆ ತೆರಳಲಿದ್ದಾರೆ.