ಮಡಿಕೇರಿ, ಡಿ. 17: ಜಿಲ್ಲಾ ದಿವ್ಯಜ್ಯೋತಿ ಸಹಕಾರ ಸಂಘ ಮಡಿಕೇರಿ ಇದರ 2019-20ನೇ ವಾರ್ಷಿಕ ಮಹಾಸಭೆ ತಾ. 13 ರಂದು ಮಡಿಕೇರಿ ಸಂತ ಮೈಕಲರ ಶಾಲಾ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಸಿರಿಲ್ ಮೊರಾಸ್ ಅಧ್ಯಕ್ಷತೆಯಲ್ಲಿ ಜರುಗಿತು. ಸಂಘವು ಪ್ರಾರಂಭವಾಗಿ ಕೇವಲ ಒಂದು ವರ್ಷದ ಅವಧಿಯೊಳಗೆ ಗಣನೀಯ ಅಭಿವೃದ್ಧಿ ಕಂಡಿದ್ದು, ರೂ. 2.64 ಕೋಟಿಗಳಷ್ಟು ವಿವಿಧ ಠೇವಣಿಗಳನ್ನು ಸಂಗ್ರಹಿಸಿ ರೂ. 2.56 ಕೋಟಿಯಷ್ಟು ವಿವಿಧ ಸಾಲಗಳನ್ನು ವಿತರಿಸಲಾಗಿದೆಯಲ್ಲದೆ, ಸಂಘದಲ್ಲಿ ರೂ. 47.80 ರಷ್ಟು ಪಾಲು ಬಂಡವಾಳ ಸಂಗ್ರಹಿಸಲಾಗಿದೆ. ವಿವಿಧ ಬ್ಯಾಂಕ್ಗಳಲ್ಲಿ ಬ್ಯಾಂಕ್ ಖಾತೆಗಳು ಹಾಗೂ ಧನವಿನಿಯೋಗಗಳ ಒಟ್ಟು ಮೊತ್ತ ರೂ. 70.83 ಲಕ್ಷಗಳಷ್ಟಿದ್ದು, ಸಂಘದಲ್ಲಿ ಜಾಮೀನು ಸಾಲ, ಚಿನ್ನಾಭರಣ ಸಾಲ, ಪಿಗ್ಮಿ ಸಾಲ, ವಾಹನ ಸಾಲ ಸ್ವಸಹಾಯ ಗುಂಪುಗಳ ಸಾಲಗಳನ್ನು ವಿತರಿಸುತ್ತಿದ್ದು, ಸಂಘವು ಸಂಗ್ರಹಿಸುತ್ತಿರುವ ನಿರಖು ಠೇವಣಿಗಳಿಗೆ ಉತ್ತಮ ಬಡ್ಡಿ ದರವನ್ನು ನೀಡಲಾಗುತ್ತಿದೆ. ಸಂಘದಲ್ಲಿ ಇ-ಸ್ಟ್ಯಾಂಪಿಂಗ್ ಸೌಲಭ್ಯವನ್ನು ಅತೀ ಶೀಘ್ರದಲ್ಲಿ ಪ್ರಾರಂಭಿಸಲಾಗುವುದರಿಂದ ಸದಸ್ಯರೆಲ್ಲರೂ ಇದರ ಪ್ರಯೋಜನವನ್ನು ಪಡೆಯಬೇಕೆಂದು ತಿಳಿಸಿದರು. ಸಂಘದ ಸದಸ್ಯರ ಪ್ರತಿಭಾನ್ವಿತ ಮಕ್ಕಳಿಗೆ ಇದೇ ಸಂದರ್ಭ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಅಧ್ಯಕ್ಷ ಸಿರಿಲ್ ಮೊರಾಸ್, ಉಪಾಧ್ಯಕ್ಷ ಎನ್.ಟಿ. ಜೋಸೆಫ್ ಹಾಗೂ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.