ಮಡಿಕೇರಿ, ಡಿ. 15: ಕೊಡಗು ಜಿಲ್ಲಾ ಮಹಾಬೋಧಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ ನಗರದ ಬಾಲಭವನ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಎಸ್.ಸಿ. ಸತೀಶ್, ಪ್ರಸ್ತುತ ವರ್ಷದಲ್ಲಿ ಸಂಘವು ರೂ. 30,395 ಲಾಭಾಂಶವನ್ನು ಹೊಂದಿದ್ದು, ಸಂಘದ ಎ ತರಗತಿ ಸದಸ್ಯರಿಂದ ರೂ. 4,92,500 ಮತ್ತು ಸರ್ಕಾರದಿಂದ ರೂ. 1,97,500 ಹೀಗೆ ಒಟ್ಟು ರೂ. 6.80 ಲಕ್ಷ ಪಾಲು ಹಣ ಸಂಗ್ರಹಿಸಲಾಗಿದೆ. ಸಂಘವು 1,136 ಸದಸ್ಯರನ್ನು ಹೊಂದಿದೆ ಎಂದರು.

ವರದಿ ಸಾಲಿನಲ್ಲಿ ರೂ. 6,43,407 ರಷ್ಟು ವಿವಿಧ ಠೇವಣಿ ಸಂಗ್ರಹಿಸಲಾಗಿದ್ದು, ಜಾಮೀನು ಸಾಲ ರೂ. 9,06,258 ರಷ್ಟು ನೀಡಲಾಗಿದೆ. ಅಲ್ಲದೇ ಕೊಡಗು ಡಿಸಿಸಿ ಬ್ಯಾಂಕ್‍ನ ಉಳಿತಾಯ ಖಾತೆಯಲ್ಲಿ ರೂ. 1,06,997 ಇಡಲಾಗಿದೆ ಎಂದು ಮಾಹಿತಿ ನೀಡಿದರು.

ಸಂಘವು ಪ್ರಸ್ತುತ ಕಾಫಿ ಕೃಪಾ ಕಟ್ಟಡದಲ್ಲಿ ಕಚೇರಿಯನ್ನು ಹೊಂದಿದ್ದು, ಕೊಡಗು ಜಿಲ್ಲಾ ಸಹಕಾರ ಬ್ಯಾಂಕ್ ಮತ್ತು ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಲದಲ್ಲಿ ಸದಸ್ಯತ್ವವನ್ನು ಪಡೆದಿದೆ ಎಂದು ಸತೀಶ್ ತಿಳಿಸಿದರು.

ಸಂಘ ಪ್ರಸ್ತುತ ಸಾಲಿನಲ್ಲಿ ಈ-ಸ್ಟ್ಯಾಂಪಿಂಗ್ ಸೌಲಭ್ಯವನ್ನು ಹೊಂದಿದೆ ಎಂದರು. ನಿರ್ದೇಶಕರುಗಳಾದ ಜಯಪ್ಪ ಹಾನಗಲ್, ಹೆಚ್.ಎನ್. ಶಾರದ ನಾಗರಾಜು, ಡಿ.ಡಿ. ಪಾಪಣ್ಣ, ಯಶೋದ, ಗಾಯತ್ರಿ ನರಸಿಂಹ, ಕೆ.ಬಿ. ರಾಜು, ಶಿವಪ್ಪ, ಹೆಚ್.ಎಂ. ಶಿವು, ರಾಮು, ಜಯಚಂದ್ರ ಹಾಜರಿದ್ದರು.

ಸಂಘದ ನಿರ್ದೇಶಕ ಎಸ್.ಎ. ಪ್ರತಾಪ್ ಸ್ವಾಗತಿಸಿ, ಉಪಾಧ್ಯಕ್ಷ ಹೆಚ್.ಎಸ್. ಗಣಪತಿ ವಂದಿಸಿದರು.