ಕುಶಾಲನಗರ, ಡಿ. 14: ಕುಶಾಲನಗರದ ಕೈಗಾರಿಕೋದ್ಯಮಿಗಳ ಮತ್ತು ವೃತ್ತಿ ನಿರತರ ವಿವಿಧೋದ್ದೇಶ ಸಹಕಾರ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಟಿ.ಆರ್. ಶರವಣಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು.
ಪ್ರಸಕ್ತ ಹಣಕಾಸು ವರ್ಷದಲ್ಲಿ ಆರ್ಥಿಕ ಸಂಕಷ್ಟದ ನಡುವೆಯೂ ರೂ. 184 ಕೋಟಿಗಳ ವ್ಯವಹಾರ ನಡೆಸಿ ರೂ. 70.81 ಲಕ್ಷಗಳ ಲಾಭವನ್ನು ಗಳಿಸಿದೆ ಎಂದು ಸಂಘದ ಅಧ್ಯಕ್ಷ ಶರವಣಕುಮಾರ್ ಮಾಹಿತಿ ನೀಡಿದರು.
ಸಂಘದ ಭವಿಷ್ಯದ ಯೋಜನೆ ಗಳನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ರೂ. 2.05 ಕೋಟಿ ವೆಚ್ಚದಲ್ಲಿ ಕುಶಾಲನಗರದಲ್ಲಿ 20 ಸೆಂಟು ಭೂಮಿಯನ್ನು ಖರೀದಿಸಿದ್ದು ಸದಸ್ಯರ ಉಪಯೋಗಕ್ಕಾಗಿ ಬೃಹತ್ ಭವನವೊಂದನ್ನು ನಿರ್ಮಾಣ ಮಾಡಲಾಗುವುದು ಎಂದು ಶರವಣ ಕುಮಾರ್ ಸಭೆಗೆ ತಿಳಿಸಿದರು. ಮಹಾಸಭೆಯಲ್ಲಿ ಸಂಘದ ಸದಸ್ಯರ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸಂಘದ ಉಪಾಧ್ಯಕ್ಷ ಎಂ.ಎಂ. ಶಾಹಿರ್, ನಿರ್ದೇಶಕರು ಇದ್ದರು.