ಸೋಮವಾರಪೇಟೆ, ಡಿ. 14: ಪೊಲೀಸ್ ಇಲಾಖೆಯ ವತಿಯಿಂದ ಪಟ್ಟಣದ ಖಾಸಗಿ ಬಸ್ ನಿಲ್ದಾಣ ಹಾಗೂ ಮಾದಾಪುರ ಪಟ್ಟಣದಲ್ಲಿ ಅಪರಾಧ ತಡೆ ಮಾಸಾಚರಣೆ-ಜಾಗೃತಿ ಕಾರ್ಯಕ್ರಮ ನಡೆಯಿತು.

ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಡಿವೈಎಸ್‍ಪಿ ಶೈಲೇಂದ್ರ ಅವರು, ಅಪರಾಧಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸರೊಂದಿಗೆ ಸಾರ್ವಜನಿಕರ ಸಹಕಾರವೂ ಅಗತ್ಯ. ತಮ್ಮ ಸುತ್ತಮುತ್ತಲಲ್ಲಿ ನಡೆಯುವ ಅನೇಕ ಅಹಿತಕರ ಘಟನೆಗಳ ಬಗ್ಗೆ ಪೊಲೀಸ್ ಇಲಾಖೆಗೆ ಮುಂಚಿತವಾಗಿ ಮಾಹಿತಿ ನೀಡಿದರೆ ಸಂಭವನೀಯ ಅಪರಾಧಗಳನ್ನು ತಡೆಗಟ್ಟಬಹುದು ಎಂದರು. ಇದರೊಂದಿಗೆ ರಸ್ತೆ ನಿಯಮಗಳನ್ನು ವಾಹನ ಸವಾರರು ಕಡ್ಡಾಯವಾಗಿ ಪಾಲಿಸಬೇಕು. ವಾಹನ ಗಳಿಗೆ ಸಂಬಂಧಿಸಿದಂತೆ ಅಗತ್ಯ ದಾಖಲಾತಿಗಳನ್ನು ಹೊಂದಿರಬೇಕು ಎಂದರು. ಜಾಗೃತಿ ಕಾರ್ಯಕ್ರಮದಲ್ಲಿ ಪೊಲೀಸ್ ವೃತ್ತ ನಿರೀಕ್ಷಕ ಮಹೇಶ್, ಠಾಣಾಧಿಕಾರಿ ಶ್ರೀಧರ್ ಸೇರಿದಂತೆ ಸಿಬ್ಬಂದಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.