ಕಣಿವೆ, ಡಿ. 14: ಅಲ್ಪಾವಧಿ ಬೆಳೆಯಾಗಿ ರೈತರು ಬೆಳೆಯುವ ಕುಂಬಳಕಾಯಿ ಫಸಲನ್ನು ಕೊಳ್ಳುವವರು ಇಲ್ಲದೆ ಹೊಲದಲ್ಲಿ ಕೊಳೆಯುತ್ತಿದೆ. ಬಿತ್ತನೆ ಮಾಡಿದ 90 ದಿನಗಳಲ್ಲಿ ಕಟಾವಿಗೆ ಬರುವ ಈ ಕಾಯಿ ಪಲ್ಯೆ ಕುಂಬಳಕಾಯಿಯನ್ನು ಕುಶಾಲನಗರ ವ್ಯಾಪ್ತಿಯ ಕಾವೇರಿ ನದಿ ತೀರದ ಬಹಳಷ್ಟು ರೈತರು ಬೆಳೆದಿದ್ದಾರೆ. ಒಂದು ಎಕರೆಗೆ ಕನಿಷ್ಟ ಎಂದರೂ ಹತ್ತರಿಂದ ಹನ್ನೆರಡು ಸಾವಿರ ರೂ ಖರ್ಚು ಮಾಡಿ ಬೆಳೆದಿರುವ ಈ ಕುಂಬಳಕಾಯಿ ಫಸಲು ರೈತನ ಹೊಲದಲ್ಲಿ ಬೆಳೆದು ಕಟಾವಿಗೆ ಸಿದ್ದಗೊಂಡು ವಾರಗಳೇ ಕಳೆದರೂ ಕೂಡ ಕೇಳುವವರು ಇಲ್ಲದೇ ಕೊಳ್ಳುವವರು ಇಲ್ಲದೇ ಕಂಗಾಲಾಗಿ ನೆಲ್ಲಿಕಾಯಿ ಮರದಲ್ಲಿಟ್ಟ ನಮ್ಮ ಶಿವ - ಕುಂಬಳಕಾಯಿ ಬಳ್ಳಿಯಲ್ಲಿಟ್ಟು ಈಗ ನಮಗೆ ಸಂಕಟ ಕೊಟ್ಟ ಎಂದು ಇಲ್ಲಿನ ಅನೇಕ ಕೃಷಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಇದೀಗ ಮಾರುಕಟ್ಟೆಯಲ್ಲಿ ಕುಂಬಳಕಾಯಿಗೆ ಬೇಡಿಕೆ ತಗ್ಗಿದ ಪರಿಣಾಮ ಒಂದು ಕ್ವಿಂಟಾಲ್ ಕುಂಬಳ ಕಾಯಿ ಬೆಲೆ ಈಗ ಕೇವಲ 300 ರೂ ಇದೆ ಎನ್ನಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 650 ರಿಂದ 700 ರೂ ಇತ್ತು. ಕನಿಷ್ಟ ಎಂದರೂ 1000 ರೂ ಒಂದು ಕ್ವಿಂಟಾಲ್ಗೆ ದರ ಸಿಕ್ಕರೆ ಮಾತ್ರ ಕೃಷಿಕನಿಗೆ ಒಂದಿಷ್ಟು ಆದಾಯ ಬರುತ್ತದೆ. ಆದರೆ ಈಗ ಇರುವ 300 ರೂ ದರ ಮಾಡಿರುವ ಖರ್ಚಿಗೂ ಸಾಲುತ್ತಿಲ್ಲ ಎಂಬ ಕೊರಗು ರೈತರದ್ದಾಗಿದೆ.
ಕಳೆದ ಮೂರು ತಿಂಗಳ ಹಿಂದೆ ಮುಸುಕಿನ ಜೋಳ ಹಾಗೂ ಶುಂಠಿ ಬೆಳೆ ಬೆಳೆದಿದ್ದ ಕೃಷಿಕರು ಈ ಎರಡು ಬೆಳೆಯ ಫಸಲಿಗೆ ಮಾರುಕಟ್ಟೆಯಲ್ಲಿ ದರ ಕುಸಿತವಾದ್ದರಿಂದ ಈ ಬೆಳೆಗಳಿಗೆ ವ್ಯಯಿಸಿ ಇಲ್ಲಿ ಕಳೆದುಕೊಂಡ ಹಣವನ್ನು ಕುಂಬಳಕಾಯಿ ಬೆಳೆಯಲ್ಲಿ ಪಡೆಯುವ ತವಕದಲ್ಲಿದ್ದರು. ಆದರೆ ಈ ಬೆಳೆಗೂ ದರ ಕುಸಿತವಾದ್ದರಿಂದ ನಷ್ಟದ ಮೇಲಿನ ನಷ್ಟ ಕೃಷಿಕರನ್ನು ಸಹಜವಾಗಿಯೇ ಹತಾಶರನ್ನಾಗಿಸಿದೆ. ಕುಂಬಳಕಾಯಿ ಫಸಲು ಬೆಳೆದಿರುವ ಕಾವೇರಿ ನದಿ ದಂಡೆಯ ಚಿಕ್ಕಹೊಸೂರಿನ ಕೃಷಿಕರಾದ ಕೆಂಪರಾಜು, ಶಿವು, ರೂಪ, ಚಿಕ್ಕವೀರಪ್ಪ ಮೊದಲಾದವರು ಕುಂಬಳಕಾಯಿ ದರ ಕುಸಿತದಿಂದ ತೀವ್ರ ಅಸಮಾಧಾನ ಗೊಂಡಿದ್ದಾರೆ.
ಕಳೆದ ಕೊರೊನಾ ಅವಧಿಯ 2020ರ ಫೆಬ್ರವರಿಯಿಂದ ಈ ವರ್ಷದ ಮಾಸಾಂತ್ಯದ ಡಿಸೆಂಬರ್ ವರೆಗೂ ಬೆಳೆದ ಮುಸುಕಿನ ಜೋಳ, ಹಸಿಮೆಣಸು, ಶುಂಠಿ ಮೊದಲಾದ ಫಸಲಿಗೆ ದರ ಕುಸಿತವಾದ್ದರಿಂದ ಕೈಯಲಿದ್ದ ಹಣವನ್ನೆಲ್ಲಾ ಭೂಮಿಗೆ ಸುರಿದು ಬರಿಗೈ ಮಾಡಿಕೊಂಡ ಕೊರಗಿನಲ್ಲಿ ದಿನಗಳೆಯುತ್ತಿದ್ದಾರೆ. ಈ ರೈತರು ಸುಮಾರು ಹತ್ತಾರು ಎಕರೆ ಪ್ರದೇಶದಲ್ಲಿ ಬೆಳೆದಿರುವ ನೂರಾರು ಟನ್ ಕುಂಬಳಕಾಯಿ ಫಸಲು ಬೇಡಿಕೆ ಇಲ್ಲದೇ ಒಣಗುತ್ತಾ ಹಾಗೂ ಕರಗುತ್ತಿರುವುದರಿಂದ ಮನನೊಂದು ವ್ಯವಸ್ಥೆಗೆ ಹಿಡಿಶಾಪ ಹಾಕುತ್ತಿದ್ದಾರೆ.
ವರ್ಷದ ಆರಂಭದಿಂದ ಅಂತ್ಯದವರೆಗೂ ಏನೆಲ್ಲಾ ಬೆಳೆ ಬೆಳೆದು ಎಷ್ಟೆಲ್ಲಾ ನಷ್ಟ ಅನುಭವಿಸಿ ದರೂ ಕೂಡ ಯಾವೊಬ್ಬ ಕೃಷಿ, ಕಂದಾಯ ಅಥವಾ ತೋಟಗಾರಿಕೆ ಅಧಿಕಾರಿ ನಮ್ಮ ಬಳಿ ಬಂದು ಕನಿಷ್ಟ ಸಾಂತ್ವನ ಹೇಳಲಿಲ್ಲವಲ್ಲ. ದೇಶಕ್ಕೆ ಅನ್ನ ಹಾಕುವ ನೇಗಿಲ ಯೋಗಿ ಗಳಾದ ನಮ್ಮ ಬದುಕು ಹೀಗೇನಾ...? ಜನಕಲ್ಯಾಣಕ್ಕೆಂದು ಕುರುಡು ಸರ್ಕಾರಗಳು ಬಿಡುಗಡೆ ಮಾಡುವ ಕೋಟಿ ಕೋಟಿ ಹಣವನ್ನು ಲೂಟಿಗೈದು ಐಷಾರಾಮಿ ಜೀವನ ನಡೆಸುತ್ತಿರುವ ಆ ವ್ಯವಸ್ಥೆಗೂ... ಹವಾನಿಯಂತ್ರಿತ ಕೊಠಡಿಯೊಳಗೆ ಕುಳಿತು ಐಷಾರಾಮಿ ಜೀವನಗೈವ ದೇಶವಾಸಿಗಳಿಗೆ ಹೊಲದಲ್ಲಿ ಬೆವರು ಬಸಿದು ದುಡಿದು ಅನ್ನ ನೀಡುವ ನಮ್ಮೀ ವ್ಯವಸ್ಥೆಗೆ ಕೊನೆಯೇ ಇಲ್ಲವೇ ಎಂದು ಕಂಬನಿಗೈಯುತ್ತಿ ರುವ ಕೃಷಿಕನತ್ತ ಸರ್ಕಾರಗಳು ಹಾಗೂ ಸಂಘ ಸಂಸ್ಥೆಗಳು ಧಾವಿಸಬೇಕಿದೆ. -ಕೆ.ಎಸ್.ಮೂರ್ತಿ