ಭಾಗಮಂಡಲ, ಡಿ. 12: ಸಮೀಪದ ಕೋಪಟ್ಟಿ ವ್ಯಾಪ್ತಿಯಲ್ಲಿ ಕಾಡಾನೆಗಳ ಧಾಳಿಯಿಂದ ಭತ್ತದ ಫಸಲು ಹಾಗೂ ಕಾಫಿಯ ತೋಟ ಸಂಪೂರ್ಣವಾಗಿ ನಾಶವಾಗಿದ್ದು, ಬೆಳೆಗಾರರು ಪರಿತಪಿಸುವಂತಾಗಿದೆ. ಕೋಪಟ್ಟಿಯ ದಾಯನ ಹರ್ಷವರ್ಧನ್ ಹಾಗೂ ಉತ್ತಪ್ಪ ಅವರ ಸುಮಾರು 2.5 ಎಕರೆ ಭತ್ತದ ಗದ್ದೆಯಲ್ಲಿ ಬೆಳೆ ಹಾಗೂ ಹುಲ್ಲು ಸಂಪೂರ್ಣ ನಾಶವಾಗಿದ್ದು ರೂ. 2.5 ಲಕ್ಷ ನಷ್ಟ ಸಂಭವಿಸಿದೆ. ಜೊತೆಗೆ ಸುಮಾರು ಮೂರು ಎಕರೆ ಕಾಫಿ ತೋಟದಲ್ಲಿ ಇರುವ ಕಾಫಿ ಫಸಲು ಹಾಗೂ ಕಾಳುಮೆಣಸಿನ ಬಳ್ಳಿಗಳು ಸಂಪೂರ್ಣವಾಗಿ ಧ್ವಂಸವಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ಬೆಳೆಗಾರರು ಅವಲತ್ತು ಕೊಂಡಿದ್ದಾರೆ.

ಕೊಯ್ಲು ಮಾಡುವ ಹಂತದಲ್ಲಿ ಆನೆಗಳ ಧಾಳಿಯಿಂದ ಬೆಳೆ ನಷ್ಟವಾಗಿರುವುದು ರೈತರಿಗೆ ನುಂಗಲಾರದ ತುತ್ತಾಗಿದೆ. ಇದರ ಜೊತೆಗೆ ಕಾಡು ಹಂದಿಗಳ ಉಪಟಳವು ಹೆಚ್ಚುತಿದ್ದು ಬೆಳೆಗಾರರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.