ಮಡಿಕೇರಿ, ಡಿ. 13: ಸ್ಥಳೀಯ ಸರಕಾರ ಎಂದೇ ಪ್ರತಿಬಿಂಬಿತವಾಗಿರುವ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ಘೋಷಣೆಯಾಗಿದ್ದು, ಕೊಡಗು ಜಿಲ್ಲೆಯಾದ್ಯಂತ ಚುನಾವಣಾ ಕದನದ ಕಾವು ದಿನೇ ದಿನೇ ಹೆಚ್ಚಾಗುತ್ತಿದೆ. ಕೊಡಗು ಜಿಲ್ಲೆ ಒಂದು ನಗರದಭೆ ಮೂರು ಪಟ್ಟಣ ಪಂಚಾಯಿತಿಗಳನ್ನು ಹೊಂದಿರುವದನ್ನು ಹೊರತು ಪಡಿಸಿದರೆ, ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಚುನಾವಣೆ ನಡೆಯಬೇಕಿದೆ.ಒಟ್ಟು 104 ಗ್ರಾ.ಪಂ.ಗಳ ಪೈಕಿ 101 ಗ್ರಾಮ ಪಂಚಾಯಿತಿಗಳಿಗೆ ಸದ್ಯದಲ್ಲಿ ಮತದಾನ ನಡೆಯಬೇಕಿದೆ. ಈಗಾಗಲೇ ಮಡಿಕೇರಿ ಹಾಗೂ ಸೋಮವಾರಪೇಟೆ ತಾಲೂಕಿನ ಅಖಾಡ ಸಿದ್ಧಗೊಂಡಿದ್ದರೆ, ಇನ್ನೆರಡು ದಿನದಲ್ಲಿ ವೀರಾಜಪೇಟೆ ತಾಲೂಕಿನ ಚುನಾವಣಾ ವೇದಿಕೆ ಅಂತಿಮಗೊಳ್ಳಲಿದೆ. ಜಿಲ್ಲೆಯಲ್ಲಿ ಈ ಬಾರಿ ಎರಡು ಹಂತದಲ್ಲಿ ಚುನಾವಣೆ ನಡೆಯಲಿದ್ದು, ಇದರ ಸಮರ್ಪಕ ಪ್ರಕ್ರಿಯೆಗಾಗಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಅಗತ್ಯ ಎಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದು ಒಂದೆಡೆಯಾದರೆ ಪ್ರಮುಖ ವಿಚಾರವಾಗಿ ಬಿಸಿ ಮೂಡಿಸುತ್ತಿರುವದು ರಾಜಕೀಯವಾದ ವಿಚಾರಗಳು. ಇದು ಪಕ್ಷದ ಚಿಹ್ನೆಯಡಿ ನಡೆಯುವ ಚುನಾವಣೆ ಅಲ್ಲವಾದರೂ ಪ್ರಸ್ತುತದ ದಿನಗಳಲ್ಲಿ ಎಲ್ಲವೂ ಪಕ್ಷ ಆಧಾರಿತವಾಗಿಯೇ ಜರುಗುತ್ತಿರುವದರಿಂದ ರಾಜಕೀಯ ಬೆಳವಣಿಗೆಗಳೂ ಗ್ರಾಮೀಣ ವಿಭಾಗದಲ್ಲಿ ಬಿಸಿ ಮೂಡಿಸುತ್ತಿವೆ.
ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು, ಗ್ರಾಮ ಪ್ರಮುಖರುಗಳು, ತಮ್ಮ ಬೆಂಬಲಿಗರೊಂದಿಗೆ ಪಕ್ಷದ ಬದಲಾವಣೆ ಮಾಡುತ್ತಿರುವದು, ಸ್ವತಂತ್ರವಾಗಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿರುವದು, ಮತ್ತಿತರ ಹಲವಾರು ಕಾರಣಗಳಿಂದಾಗಿ ಪರಸ್ಪರ ಸ್ನೇಹಿತರು, ಸಂಬಂಧಿಕರು, ಭಿನ್ನಾಭಿಪ್ರಾಯಗಳಿಂದ ಮುನಿಸಿಕೊಳ್ಳುತ್ತಿರುವದು ಇಂತಹ ಪ್ರಕರಣಗಳು ಈ ಗ್ರಾಮ ಕದನದಲ್ಲಿ ಪ್ರಮುಖವಾಗಿರುತ್ತವೆ. ಈ ಚುನಾವಣೆಯೂ ಇಂತಹ ಪ್ರಕರಣಗಳಿಂದ ಹೊರತಾಗಿಲ್ಲ. ಈಗಾಗಲೇ ಹಲವೆಡೆಗಳಲ್ಲಿ ಇಂತಹ ಪ್ರಸಂಗಗಳು ಎದುರಾಗಿವೆ.
ಈ ಚುನಾವಣೆಯ ಫಲಿತಾಂಶ ಮುಂದಿನ ಕೆಲವೇ ತಿಂಗಳಲ್ಲಿ ಎದುರಾಗಲಿರುವ ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಯ ಮೇಲೂ ಪ್ರಭಾವ ಬೀರುವದರಿಂದ ಈಗಿನ ಗ್ರಾ.ಪಂ. ಕದನ ಮತ್ತಷ್ಟು ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಪ್ರಮುಖ ರಾಜಕೀಯ ಪಕ್ಷಗಳ ನಾಯಕರು ಕೂಡ ಇದೀಗ ಗ್ರಾಮೀಣ ಭಾಗದಲ್ಲೇ ಕಂಡುಬರುತ್ತಿದ್ದಾರೆ. ಪ್ರಚಾರದ ಭರಾಟೆಯೂ ಹೆಚ್ಚಾ ಗುತ್ತಿದ್ದು, ಚುನಾವಣಾ ದಿನ ಸಮೀಪಿಸುತ್ತಿರುವಂತೆ ಜಿದ್ದಾಜಿದ್ದಿನ ಪೈಪೋಟಿ ಕಂಡು ಬರುತ್ತಿದೆ.
ಹಲವೆಡೆಗಳ ಪಕ್ಷಗಳ ಪ್ರಮುಖರು ರಾಜಕೀಯ ಬೆಳವಣಿಗೆಗಳಿಂದಾಗಿ ಇರಿಸು- ಮುರಿಸನ್ನೂ ಎದುರಿಸುವಂತಾಗಿರುವ ಕುರಿತೂ ಮಾತು ಕೇಳಿ ಬರುತ್ತಿದೆ. ಇದೀಗ ಈ ತಿಂಗಳ ಅಂತ್ಯದವರೆಗೂ ಬಹುತೇಕ ಎಲ್ಲರ ಚಿತ್ತವೂ ಗ್ರಾಮೀಣ ವಿಭಾಗದತ್ತಲೇ ಕೇಂದ್ರೀಕೃತಗೊಳ್ಳಲಿದೆ. ಚುನಾವಣಾ ಸಿದ್ಧತೆಯ ಕುರಿತಾಗಿ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲಾಡಳಿತ ಎಲ್ಲಾ ಕಾನೂನಾತ್ಮಕ ಪ್ರಕ್ರಿಯೆಯನ್ನು ಅನುಸರಿಸುತ್ತಿದೆ. ಇದರೊಂದಿಗೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲೂ ಪೊಲೀಸ್ ಇಲಾಖೆಯೊಂದಿಗೆ ಅಗತ್ಯ ಮುಂಜಾಗ್ರತೆಯನ್ನು ವಹಿಸಲಾಗಿದೆ. ಪ್ರಸ್ತುತ ಎಲ್ಲವೂ ಸಮರ್ಪಕವಾಗಿ ಮುಂದುವರಿಯುತ್ತಿರುವದಾಗಿ ಹೇಳಿದರು.