ವೀರಾಜಪೇಟೆ ವರದಿ, ಡಿ. 13: ಸಮಾಜಮುಖಿಯಾದ ಸೇವಾ ಸಂಸ್ಥೆಗಳು ಸಮಾಜದ ಹಿತಕ್ಕಾಗಿ ದುಡಿಯುವ ಸಂಸ್ಥೆಗಳಾಗಬೇಕು ಎಂದು ಲಯನ್ ಜಿಲ್ಲೆ 317 ಡಿಯ ರಾಜ್ಯಪಾಲೆ ಲ. ಡಾ. ಗೀತಾ ಪ್ರಕಾಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ವೀರಾಜಪೇಟೆ ಸಂಸ್ಥೆಗೆ ಅಧಿಕೃತ ಭೇಟಿ ಕಾರ್ಯಕ್ರಮ ವೀರಾಜಪೇಟೆ ಕೊಡವ ಸಮಾಜದ ಸಭಾಂಗಣದಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಗೀತಾ ಪ್ರಕಾಶ್ ಅವರು, ಲಯನ್ಸ್ ಸೇವಾ ಸಂಸ್ಥೆಯು ಉನ್ನತಮಟ್ಟದ ಸೇವಾ ಸಂಸ್ಥೆಯಾಗಿದ್ದು, ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ. ತಾವು ಮಾಡುವ ಸೇವೆಗೆ ಯಾವುದೇ ಸೀಮಾ ರೇಖೆಗಳಿರಬಾರದು. ಸೇವೆ ಮಾಡುವ ಮನೋಭಾವ ಪ್ರತಿಯೊಬ್ಬರಲ್ಲೂ ಜಾಗೃತವಾಗಬೇಕು. ಅರ್ಪಣಾ ಮನೋಭಾವದಿಂದ ಸಮಾಜಕ್ಕೆ ಕೊಡುಗೆ ಸಮರ್ಪಿಸಬೇಕು ಎಂದರು. ದೇಶಕ್ಕೆ ವಿಪತ್ತಿನಂತೆ ಕೊರೊನಾ ಸೋಂಕು ಹರಡಿದ್ದ ವೇಳೆಯಲ್ಲಿ ಸಂಸ್ಥೆಯು ತನ್ನ ಕಾರ್ಯಕ್ಷಮತೆಯೊಂದಿಗೆ ಸೊಂಕು ತಡೆಗಟ್ಟುವ ನಿಟ್ಟಿನಲ್ಲಿ ಮಾಸ್ಕ್ ವಿತರಣೆ, ಕಿಟ್ ವಿತರಣೆಯಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನಮಾನಸದಲ್ಲಿ ಗುರುತಿಸಿಕೊಂಡಿದೆ. ವೀರಾಜಪೇಟೆ ಲಯನ್ಸ್ ಕ್ಲಬ್ ಸುಮಾರು 43 ವರ್ಷಗಳಿಂದ ಅತ್ಯುತ್ತಮವಾದ ಜನಸ್ನೇಹಿ ಕಾರ್ಯಕ್ರಮಗಳನ್ನು ಜನತೆಗೆ ನೀಡಿದೆ. ಪೂರ್ವದಲ್ಲಿ ಕ್ಲಬ್ನ ಅಧ್ಯಕ್ಷರುಗಳು ಸಲ್ಲಿಸಿರುವ ಸೇವೆ ಅಮೋಘವಾದುದು.
ಸಂಸ್ಥೆಯು ಮುಂದಿನ ದಿನಗಳಲ್ಲಿ ನಿಸರ್ಗ ಸಂರಕ್ಷಣೆ, ಜಲ ಸಂರಕ್ಷಣೆ, ವೈದ್ಯಕೀಯ ಕಾರ್ಯಕ್ರಮಗಳು, ಜನಜಾಗೃತಿ ಅಭಿಯಾನ ಕಾರ್ಯಕ್ರಮಗಳನ್ನು ಬೃಹತ್ ಮಟ್ಟದಲ್ಲಿ ಆಯೋಜಿಸುವ ಉದ್ದೇಶವಿದೆ. ಸ್ಥಳೀಯ ಸಂಸ್ಥೆಗಳು ಕೈಜೋಡಿಸಿ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಸಹಕಾರ ನೀಡುವಂತೆ ಕರೆ ನೀಡಿದರು.
ವೀರಾಜಪೇಟೆ ಲಯನ್ಸ್ ಕ್ಲಬ್ನ ಅಧ್ಯಕ್ಷ ಪ್ರಸನ್ನ ಎ.ಪಿ. ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕ್ಲಬ್ನ ಕಾರ್ಯದÀರ್ಶಿಗಳಾದ ಪುಷ್ಪರಾಜ್ ಬಿ.ಎಸ್. ಕ್ಲಬ್ನ ವಾರ್ಷಿಕ ಕಾರ್ಯಕ್ರಮಗಳ ವರದಿ ವಾಚಿಸಿದರು. ವಿವಿಧ ಲಯನ್ಸ್ ಕ್ಲಬ್ನ ಪ್ರತಿನಿಧಿಗಳು ಕಾರ್ಯಕ್ರಮಕ್ಕೆ ಆಗಮಿಸಿ ಕ್ಲಬ್ ನಡೆಸಿರುವ ಕಾರ್ಯಕ್ರಮದ ಬಗ್ಗೆ ಪ್ರಶಂಸನೀಯ ಮಾತುಗಳನ್ನಾಡಿದರು.
ವೇದಿಕೆಯಲ್ಲಿ ವಲಯ ಅಧ್ಯಕ್ಷೆ ಕನ್ನಿಕಾ ಅಯ್ಯಪ್ಪ, ವಲಯ ಸಲಹೆಗಾರರಾದ ಎ.ಪಿ. ಸುಬ್ರಮಣಿ, ವೀರಾಜಪೇಟೆ ಲಯನ್ಸ್ ಕ್ಲಬ್ನ ಕೋಶಾಧಿಕಾರಿ ಅಮ್ಮಣಿಚಂಡ ಸಿ. ಪ್ರವೀಣ್, ಲಯನ್ ಜಿಲ್ಲಾ ಪ್ರಥಮ ಮಹಿಳೆ ಡಾ. ಗಾಯತ್ರಿ, ವೀರಾಜಪೇಟೆ ಲಯನ್ಸ್ ಕ್ಲಬ್ನ ಪ್ರಥಮ ಮಹಿಳೆ ನೀನಾ ಪ್ರಸನ್ನ ಅವರುಗಳು ಉಪಸ್ಥಿತರಿದ್ದರು. ಕ್ಲಬ್ನ ಸದ್ಯಸರ ಮಕ್ಕಳು ನಡೆಸಿಕೂಟ್ಟ ಬೊಳಕಾಟ್ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.