ಕುಶಾಲನಗರ, ಡಿ. 13 : ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೂಲಕ ಸುಳ್ಳು ಪ್ರಮಾಣ ಪತ್ರ ಪಡೆದು ಚುನಾವಣಾ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಪತಿ ಪತ್ನಿಯರ ನಾಮಪತ್ರಗಳನ್ನು ಅಸಿಂಧುಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ ಘಟನೆ ಕೊಪ್ಪ ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗ ನಡೆಯಿತು.

ಕೊಪ್ಪ ಗ್ರಾಮದಲ್ಲಿ ತನ್ನ ಮಗನ ಹೆಸರಿನಲ್ಲಿ ಕೋಳಿ ಮಾರಾಟ ಮಳಿಗೆ ನಡೆಸುತ್ತಿದ್ದ ರಾಮಸ್ವಾಮಿ ಮತ್ತು ಸಾವಿತ್ರಿ ಎಂಬವರು ಪಂಚಾಯಿತಿಗೆ ಸಾವಿರಾರು ರೂ.ಬಾಕಿ ಉಳಿಸಿದ್ದು, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮೂಲಕ ಡಿಸೆಂಬರ್8 ರಂದು ಸುಳ್ಳು ಪ್ರಮಾಣ ಪತ್ರ ಪಡೆದಿರುವ ಕಾರಣ ನಾಮ ಪತ್ರ ತಿರಸ್ಕರಿಸುವಂತೆ ತಕರಾರು ಅರ್ಜಿ ಸಲ್ಲಿಸಲಾಯಿತು.

ಈ ಬಗ್ಗೆ ಮಾಹಿತಿ ತಿಳಿದು ಪಿಡಿಓ ನಾಮಪತ್ರ ಪರಿಶೀಲನೆ ಸಂದರ್ಭದಲ್ಲಿ ಬಾಕಿ ವಸೂಲಿ ಮಾಡಿ ದಾಖಲೆಯನ್ನು ನೀಡಿದ ಬಗ್ಗೆ ಚುನಾವಣಾ ಅಧಿಕಾರಿಗೆ ಸ್ಥಳೀಯ ಪ್ರಮುಖರಾದ ಮಾದೇಶ್ ಮತ್ತಿತರರು ತಕರಾರು ಸಲ್ಲಿಸಿದರೂ ಕ್ರಮಕೈಗೊಂಡಿಲ್ಲ ಎಂದು ದೂರಿದ್ದಾರೆ.

ಈ ಸಂದರ್ಭದಲ್ಲಿ ಪಿಡಿಓ ವಿರುದ್ಧ ಘೋಷಣೆ ಕೂಗಿದ ಸ್ಥಳೀಯರು ರಾಮಸ್ವಾಮಿ, ಮತ್ತು ಸಾವಿತ್ರಿ ಅವರುಗಳ ನಾಮಪತ್ರ ತಿರಸ್ಕರಿಸುವಂತೆ ಆಗ್ರಹಿಸಿದರು.

ತಕ್ಷಣ ಸ್ಥಳಕ್ಕೆ ಬಂದ ಬೈಲುಕೊಪ್ಪ ಪೆÇಲೀಸರು ಪ್ರತಿಭಟನಾಕಾರರನ್ನು ಸಮಾಧಾನ ಗೊಳಿಸುವಲ್ಲಿ ಯಶಸ್ವಿಯಾದರು.

ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗುವುದು ಮತ್ತು ಅಧಿಕಾರ ದುರುಪಯೋಗ ಚುನಾವಣಾ ಅಕ್ರಮ ಎಸಗಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸತೀಶ್ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಮಾದೇಶ್ ಕುಮಾರ್ ಲಿಖಿತ ದೂರು ನೀಡಿರುವುದಾಗಿ ತಿಳಿಸಿದ್ದಾರೆ.