ಸೋಮವಾರಪೇಟೆ, ಡಿ. 11: ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮೋರಿಕಲ್ಲು ಗ್ರಾಮದಲ್ಲಿ ಯಂತ್ರ ನಾಟಿ ಭತ್ತ ಬೇಸಾಯದ ಕ್ಷೇತ್ರೋತ್ಸವ ಕಾರ್ಯಕ್ರಮ ನಡೆಯಿತು.

ಮೋರಿಕಲ್ಲು ಗ್ರಾಮದ ಲಿಂಗಪ್ಪ ಅವರ ಭತ್ತದ ಗದ್ದೆಯಲ್ಲಿ ನಡೆದ ಕ್ಷೇತ್ರೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ನಿವೃತ್ತ ಕೃಷಿ ನಿರ್ದೇಶಕ ಡಾ. ರಾಜಶೇಖರ್, ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ನಡೆಯುತ್ತಿರುವ ಕಾರ್ಯಕ್ರಮ ಕೃಷಿಕರಿಗೆ ಉಪಯುಕ್ತವಾಗಿದೆ. ಯಂತ್ರೋಪಕರಣ ಮೂಲಕ ಬೇಸಾಯ ಮಾಡುವುದರಿಂದ ಲಾಭವನ್ನು ಪಡೆಯಬಹುದು. ಕಾರ್ಮಿಕರ ಕೊರತೆಯಿಂದ ಸಮಸ್ಯೆ ಎದುರಾಗಿದ್ದು, ಇಂತಹ ಸಂದರ್ಭ ಯಂತ್ರೋಪಕರಣಗಳ ಮೂಲಕ ಕೃಷಿ ಚಟುವಟಿಕೆ ಮಾಡಬೇಕು ಎಂದು ಸಲಹೆ ನೀಡಿದರು.

ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಯೋಗೇಶ್ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ತಾಲೂಕಿನ 210 ಎಕರೆಯಲ್ಲಿ ಯಾಂತ್ರೀಕೃತ ನಾಟಿ ಮಾಡಲಾಗಿದ್ದು, ಈಗ ಕಟಾವು ಕೆಲಸ ಪ್ರಗತಿಯಲ್ಲಿದೆ ಎಂದರು.

ಒಕ್ಕೂಟದ ಅಧ್ಯಕ್ಷೆ ಪುಷ್ಪ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭ ನಿವೃತ್ತ ಕೃಷಿ ನಿರ್ದೇಶಕ ಡಾ. ರಾಜಶೇಖರ್ ಅವರನ್ನು ಸನ್ಮಾನಿಸಲಾಯಿತು. ಸೇವಾ ಪ್ರತಿನಿಧಿ ಶೈಲಾ, ಯೋಜನೆಯ ಕೃಷಿ ಅಧಿಕಾರಿ ಗೀತಾ ಕಾರ್ಯಕ್ರಮ ನಿರ್ವಹಿಸಿದರು.