ಕೂಡಿಗೆ, ಡಿ. 11: ತೊರೆನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಕೆ.ಎಸ್. ಕೃಷ್ಣೇಗೌಡ ಅವರ ಅಧ್ಯಕ್ಷತೆಯಲ್ಲಿ ತೊರೆನೂರು ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆಯಿತು.

ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ಕೃಷ್ಣೇಗೌಡ ಮಾತನಾಡಿ, ಸಂಘವು ಹೊಸ ಆಡಳಿತ ಮಂಡಳಿಯನ್ನು ಹೊಂದಿದ್ದು, ಈಗಾಗಲೇ ವಿವಿಧ ಯೋಜನೆಯನ್ನು ಹಮ್ಮಿಕೊಳ್ಳುವುದರ ಮುಖೇನ ರೈತರಿಗೆ ಅನುಕೂಲವಾಗುವಂತೆ ವಿವಿಧ ಸಾಲ ಸೌಲಭ್ಯಗಳನ್ನು ನೀಡುತ್ತಾ ವ್ಯವಹಾರ ನಡೆಸಿದೆ. ಈ ಸಾಲಿನಲ್ಲಿ ರೂ. 12 ಲಕ್ಷ ನಿವ್ವಳ ಲಾಭಗಳಿಸಿದೆ ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿ ಸಂಘದ ಕಟ್ಟಡವನ್ನು ರೂ. 15 ಲಕ್ಷ ವೆಚ್ಚದಲ್ಲಿ ಆಧುನೀಕರಿಸಲಾಗುತ್ತದೆ. ಇದರ ಉದ್ಘಾಟನೆಯನ್ನು ಸದ್ಯದಲ್ಲೇ ನಡೆಸಲಾಗುವುದು ಎಂದು ತಿಳಿಸಿದರು.

2019-20ನೇ ಸಾಲಿನ ಆಡಳಿತ ಮಂಡಳಿ ವರದಿಯನ್ನು ಕಾರ್ಯದರ್ಶಿ ಪ್ರೀತು ಪ್ರಸಾದ್ ವಾಚಿಸಿದರು. ಸಭೆಯಲ್ಲಿ ಉಪಾಧ್ಯಕ್ಷ ಡಿ.ಆರ್. ಪ್ರೇಮ್‍ಕುಮಾರ್ ಹಾಗೂ ನಿರ್ದೇಶಕರು ಹಾಜರಿದ್ದರು.